ADVERTISEMENT

ತೆರಿಗೆದಾರರೆ ದಯವಿಟ್ಟು ಗಮನಿಸಿ!

ನರಸಿಂಹ ಬಿ
Published 7 ಏಪ್ರಿಲ್ 2019, 20:00 IST
Last Updated 7 ಏಪ್ರಿಲ್ 2019, 20:00 IST
   

ಹೊಸ ಆರ್ಥಿಕ ವರ್ಷ 2019-20ಕ್ಕೆ ಅನ್ವಯಿಸುವಂತೆ, ಏಪ್ರಿಲ್‌ 1ರಿಂದ ಹಲವಾರು ಬದಲಾವಣೆಗಳು ಜಾರಿಗೆ ಬಂದಿವೆ. ₹ 5 ಲಕ್ಷದ ವರೆಗಿನ ಆದಾಯ ಹೊಂದಿರುವವರಿಗೆ ಸಂಪೂರ್ಣ ತೆರಿಗೆ ವಿನಾಯ್ತಿ, ಮನೆ ಖರೀದಿಗೆ ಅಗ್ಗದ ಜಿಎಸ್‌ಟಿ, ಸ್ಯಾಂಡರ್ಡ್ ಡಿಡಕ್ಷನ್ ₹ 50 ಸಾವಿರಕ್ಕೆ ಹೆಚ್ಚಳ, ಟಿಡಿಎಸ್‌ ಮಿತಿ ₹40,000 ಕ್ಕೆ ಏರಿಕೆ, ಎರಡನೇ ಮನೆಗೆ ತೆರಿಗೆ ಅನುಕೂಲ, ಕಾಗದ ರೂಪದಲ್ಲಿರುವ ಷೇರುಗಳ ಮಾರಾಟ ಸ್ಥಗಿತ ಸೇರಿ ತೆರಿಗೆದಾರರು ಗಮನಿಸಬೇಕಿರುವ ಪ್ರಮುಖ ವಿಷಯಗಳ ಬಗ್ಗೆ ವಿವರಣೆ ಇಲ್ಲಿದೆ.

1. ₹ 5 ಲಕ್ಷ ವರೆಗಿನ ಆದಾಯಕ್ಕೆ ತೆರಿಗೆ ಇಲ್ಲ: ನೂತನ ಆರ್ಥಿಕ ವರ್ಷ 2019-20ನೇ ಸಾಲಿನಲ್ಲಿ 5 ಲಕ್ಷ ₹ ವರೆಗಿನ ಆದಾಯ ಹೊಂದಿರುವವರಿಗೆ ಸಂಪೂರ್ಣ ತೆರಿಗೆ ವಿನಾಯ್ತಿ ಇದೆ. ಆದರೆ ತೆರಿಗೆ ಮಿತಿಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

2. ಸ್ಯಾಂಡರ್ಡ್ ಡಿಡಕ್ಷನ್ ₹ 50 ಸಾವಿರಕ್ಕೆ ಹೆಚ್ಚಳ: ಮಧ್ಯಂತರ ಬಜೆಟ್‌ನಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಮೊತ್ತವನ್ನು ₹ 40 ಸಾವಿರದಿಂದ ₹ 50 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಎಲ್ಲ ವೇತನದಾರರು ಹಾಗೂ ಪಿಂಚಣಿದಾರರಿಗೆ ಇದು ಅನ್ವಯಿಸಲಿದೆ.

ADVERTISEMENT

3. ಟಿಡಿಎಸ್‌ ಮಿತಿ ₹ 40,000 ಕ್ಕೆ ಏರಿಕೆ: ಸಣ್ಣ ತೆರಿಗೆದಾರರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್) ಮಿತಿಯನ್ನು ₹ 10 ಸಾವಿರದಿಂದ ₹ 40 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಅಂಚೆ ಠೇವಣಿ, ಬ್ಯಾಂಕ್ ನಿಶ್ಚಿತ ಠೇವಣಿ ಮೂಲಕ ಗಳಿಸುವ ಬಡ್ಡಿ ಮೊತ್ತಕ್ಕೆ ಇದರಿಂದ ಅನುಕೂಲವಾಗಲಿದೆ.

4. ಮನೆ ಖರೀದಿಗೆ ಅಗ್ಗದ ಜಿಎಸ್‌ಟಿ: ಜಿಎಸ್‌ಟಿ ಮಂಡಳಿಯು ಕೈಗೆಟುಕುವ ದರದ ಮನೆಗಳ (ಅಫೋರ್ಡೆಬಲ್ ಹೌಸಿಂಗ್) ಜಿಎಸ್‌ಟಿ ದರವನ್ನು ಶೇ 1 ಕ್ಕೆ ಇಳಿಸಿದ್ದು, ಇನ್ನಿತರ ವರ್ಗದ ಮನೆಗಳ ಜಿಎಸ್‌ಟಿ ದರವನ್ನು ಶೇ 12 ರಿಂದ ಶೇ 5 ಕ್ಕೆ ನಿಗದಿ ಮಾಡಿದೆ.

5. ಎರಡನೇ ಮನೆಗೆ ತೆರಿಗೆ ಅನುಕೂಲ: ಹೊಸ ಆರ್ಥಿಕ ವರ್ಷದಿಂದ ಬಾಡಿಗೆಗೆ ನೀಡದೆ ಖಾಲಿ ಇರುವ ಎರಡನೇ ಮನೆಗೆ ಕಲ್ಪಿತ ಅಥವಾ ಮೌಲ್ಯ ನಿರ್ಧಾರಿತ ಆದಾಯದ ಮೇಲಿನ ತೆರಿಗೆ (notional rent) ಆಧಾರದಲ್ಲಿ ಆದಾಯ ತೆರಿಗೆ ಪಾವತಿಸಬೇಕಿಲ್ಲ. ಆದರೆ ಒಬ್ಬ ವ್ಯಕ್ತಿ ಎರಡಕ್ಕಿಂತ ಹೆಚ್ಚು ಮನೆಗಳನ್ನು ಸ್ವಂತಕ್ಕೆ ಬಳಸುತ್ತಿದ್ದರೆ ‘ನೋಷನಲ್ ರೆಂಟ್‌’ ಲೆಕ್ಕಾಚಾರದಲ್ಲಿ ಮೂರನೇ ಮತ್ತು ಇನ್ನುಳಿದ ಹೆಚ್ಚುವರಿ ಆಸ್ತಿಗಳಿಗೆ ತೆರಿಗೆ ಪಾವತಿಸಬೇಕಾಗುತ್ತದೆ.

6. ಕಾಗದ ರೂಪದಲ್ಲಿರುವ ಷೇರುಗಳ ಮಾರಾಟ ಇಲ್ಲ: ಕಾಗದ ರೂಪದಲ್ಲಿರುವ ಷೇರುಗಳ ಮಾರಾಟವನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ರದ್ದುಪಡಿಸಿದೆ. ನೀವು ಷೇರುಗಳನ್ನು ಮಾರಾಟ ಮಾಡಬೇಕಾದರೆ ಡಿಮ್ಯಾಟ್ ರೂಪದಲ್ಲೇ ಹೊಂದಿರಬೇಕೆಂಬುದು ಏಪ್ರಿಲ್ 1 ರಿಂದ ಜಾರಿಯಾಗಿರುವ ನಿಯಮವಾಗಿದೆ.

40 ವರ್ಷಗಳಲ್ಲಿ 390 ಪಟ್ಟು ಬೆಳೆದ ಸೆನ್ಸೆಕ್ಸ್

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ತೊಂದರೆಯಿಲ್ಲವೇ. ನಿಜವಾಗಲೂ ಅದರಿಂದ ಲಾಭವಾಗುವುದೇ. ಹೀಗೆ ಷೇರುಪೇಟೆಯ ಅಗಣಿತ ಲೆಕ್ಕಾಚಾರಗಳ ಬಗ್ಗೆ ಜನರು ಮೇಲಿಂದ ಮೇಲೆ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ವಾಸ್ತವದಲ್ಲಿ ಷೇರುಪೇಟೆಯಲ್ಲಿ ಮುಂದೆ ಹೀಗೆಯೇ ಆಗುತ್ತದೆ ಎಂದು ನಿಖರವಾಗಿ ಹೇಳಲು ಯಾವ ತಜ್ಞರಿಗೂ ಸಾಧ್ಯವಿಲ್ಲ. ಆದರೆ, ಷೇರು ಮಾರುಕಟ್ಟೆಯ ಪುಟಗಳನ್ನು ತಿರುವಿ ನೋಡಿದಾಗ ಮುಂದೇನಾಗಬಹುದು ಎಂಬ ಬಗ್ಗೆ ಸ್ಪಷ್ಟತೆ ಸಿಗುತ್ತದೆ.

ಹೌದು! 2019ರ ಏಪ್ರಿಲ್ 1 ಕ್ಕೆ 40 ವರ್ಷಗಳನ್ನು ಪೂರೈಸಿರುವ ಸೆಕ್ಸೆಕ್ಸ್, 4 ದಶಕಗಳ ಅವಧಿಯಲ್ಲಿ 390 ಪಟ್ಟು ಬೆಳವಣಿಗೆ ಸಾಧಿಸಿದೆ. ಸರಳವಾಗಿ ಹೇಳುವುದಾದರೆ 1979 ರಲ್ಲಿ ನೀವು ₹ 1 ಲಕ್ಷ ಹೂಡಿಕೆ ಮಾಡಿದ್ದರೆ ಇವತ್ತು ಅದರ ಮೌಲ್ಯ ₹ 5.6 ಕೋಟಿ (ಲಾಭಾಂಶದ ಪ್ರಮಾಣ ಸೇರಿ) ಆಗಿದೆ. ಮನಿ ಬ್ಯಾಕ್ ಇನ್ಶೂರೆನ್ಸ್ ಪಾಲಿಸಿ , ಫಿಕ್ಸೆಡ್ ಡೆಪಾಸಿಟ್, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಚಿನ್ನದ ಮೇಲಿನ ಹೂಡಿಕೆ ಸೇರಿ ಇನ್ನಿತರ ಯಾವುದೇ ಸಾಂಪ್ರದಾಯಿಕ ಹೂಡಿಕೆ ಸಾಧನಗಳಿಂದ ಈ ರೀತಿಯ ಗರಿಷ್ಠ ಲಾಭ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.

‘ನಿಮ್ಮ ಗುರಿಯೇನಿದ್ದರೂ 10 ವರ್ಷದೆಡೆ ಇರಬೇಕೇ ವಿನಾ 10 ನಿಮಿಷದೆಡೆಯಲ್ಲ. ಕೊಂಡ ಷೇರನ್ನು 10 ವರ್ಷಗಳಾದರೂ ಹಿಡಿದಿಟ್ಟುಕೊಳ್ಳುವ ತಾಳ್ಮೆ ನಿಮಗಿಲ್ಲದಿದ್ದರೆ ಷೇರುಪೇಟೆಯತ್ತ ಮುಖ ಮಾಡಬೇಡಿ ಎಂದು ಖ್ಯಾತ ಹೂಡಿಕೆ ತಜ್ಞ ವಾರನ್ ಬಫೆಟ್ ಹೇಳುತ್ತಾರೆ. ವಾರನ್ ಬಫೆಟ್ ಹೇಳಿರುವಂತೆ ಲಾಭಗಳಿಕೆಯತ್ತ ನಿಧಾನಗತಿಯ ನಡಿಗೆ ಷೇರು ಮಾರುಕಟ್ಟೆಯಲ್ಲಿ ನಾವು ಅನುಸರಿಸಬೇಕಿರುವ ಕ್ರಮ. ಕಳೆದ 40 ವರ್ಷದ ಅಂಕಿ- ಅಂಶಗಳು ಕೂಡ ಇದನ್ನೇ ಹೇಳುತ್ತವೆ.

ಷೇರು ಮಾರುಕಟ್ಟೆಯಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡಿ ಲಾಭಕ್ಕಾಗಿ ಕಾಯಲು ಸಾಧ್ಯವೇ ಎಂದು ನೀವು ಕೇಳಬಹುದು. ಆದರೆ, ಕೇವಲ ಷೇರು ಮಾರುಕಟ್ಟೆಯಲ್ಲಿ ಮಾತ್ರವಲ್ಲ ಮನಿ ಬ್ಯಾಕ್ ಪಾಲಿಸಿ, ಪಿಪಿಎಫ್, ರಿಯಲ್ ಎಸ್ಟೇಟ್ ಸೇರಿ ಹಲವು ಮಾದರಿಯ ಸಾಂಪ್ರದಾಯಿಕ ಹೂಡಿಕೆಗಳಲ್ಲೂ ನೀವು ಲಾಭಕ್ಕಾಗಿ ಕಾಯುತ್ತಿರುತ್ತೀರಿ.

ಅಲ್ಲಿನ ಹೂಡಿಕೆಗಳಿಗೆ ನಿಮಗೆ ಸರಾಸರಿ ಶೇ 5 ರಿಂದ ಶೇ 8ರ ವರೆಗೆ ಲಾಭ ಸಿಗಬಹುದು. ಆದರೆ, ಷೇರು ಮಾರುಕಟ್ಟೆಯಲ್ಲಿ ನೀವು ಶೇ 11 ರಿಂದ ಶೇ 13 ರ ವರೆಗೆ ವಾರ್ಷಿಕ ಲಾಭ ನಿರೀಕ್ಷಿಸಬಹುದು.

ಮುನ್ನೋಟ: ಚುನಾವಣಾ ಪ್ರಕ್ರಿಯೆ, ಕಂಪನಿಗಳ ನಾಲ್ಕನೇ ತ್ರೈಮಾಸಿಕ ಫಲಿತಾಂಶಗಳು, ಕಚ್ಚಾ ತೈಲ ಬೆಲೆಯು ಮಾರುಕಟ್ಟೆಯ ಗತಿ ನಿರ್ಧರಿಸಲಿವೆ. ಏಪ್ರಿಲ್ 12 ರಂದು ಟಿಸಿಎಸ್ ಮತ್ತು ಇನ್ಫೊಸಿಸ್ ನಾಲ್ಕನೇ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಲಿದ್ದು, ಅದು ಕೂಡ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲಿದೆ.

(ಲೇಖಕ: ‘ಇಂಡಿಯನ್‌ ಮನಿಡಾಟ್‌ ಕಾಂ’ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.