ADVERTISEMENT

ಕಾರು ಖರೀದಿಸಬೇಕೇ? ಈ ಲೆಕ್ಕಾಚಾರ ಗಮನಿಸಿ

ಅವಿನಾಶ್ ಕೆ.ಟಿ
Published 31 ಜನವರಿ 2021, 19:31 IST
Last Updated 31 ಜನವರಿ 2021, 19:31 IST
ಅವಿನಾಶ್ ಕೆ.ಟಿ.
ಅವಿನಾಶ್ ಕೆ.ಟಿ.   

‘ಸ್ವಂತ ಕಾರು ಖರೀದಿ ಮಾಡ್ಬೇಕಾ ಬೇಡ್ವಾ’ ಎಂಬ ಪ್ರಶ್ನೆ ಒಂದಲ್ಲ ಒಂದು ಹಂತದಲ್ಲಿ ಹಲವರನ್ನು ಕಾಡುತ್ತದೆ. ಆದರೆ ಇದಕ್ಕೆ ಉತ್ತರ ಕಂಡುಕೊಳ್ಳದೆ, ಲಾಭ–ನಷ್ಟದ ಲೆಕ್ಕ ಹಾಕದೆ, ಜೋಷ್‌ನಲ್ಲಿ ಕಾರು ಖರೀದಿಸಿ ಆಮೇಲೆ ಪರಿತಪಿಸುವವರೇ ಹೆಚ್ಚು.

ಸ್ವಂತಕ್ಕೊಂದು ಕಾರು ಖರೀದಿ ಬೇಕೇ, ಬೇಡವೇ ಎನ್ನುವ ತೀರ್ಮಾನ ಮಾಡುವುದು ಹೇಗೆ ಎಂಬುದನ್ನು ಉದಾಹರಣೆ ಸಮೇತ ವಿವರಿಸುವ ಪ್ರಯತ್ನ ಇಲ್ಲಿದೆ.

ಕಾರಿನ ಖರ್ಚು–ವೆಚ್ಚಗಳ ಲೆಕ್ಕಾಚಾರ ಹೀಗೆ ಮಾಡಿ: ನಮ್ಮ ದೇಶದಲ್ಲಿ ಒಂದು ಸಾಮಾನ್ಯ ಕಾರು ಖರೀದಿಸಬೇಕು ಅಂದರೆ ಸರಾಸರಿ ಸುಮಾರು ₹ 7 ಲಕ್ಷ ವೆಚ್ಚ ಮಾಡಬೇಕು. ಆರು ವರ್ಷಗಳ ನಂತರ ಆ ₹ 7 ಲಕ್ಷದ ಕಾರಿನ ಮೌಲ್ಯ ₹ 2 ಲಕ್ಷಕ್ಕೆ ಇಳಿಕೆಯಾಗುತ್ತದೆ. ಅಂದರೆ ಬರೋಬ್ಬರಿ ₹ 5 ಲಕ್ಷ ಬಂಡವಾಳ ಆರು ವರ್ಷಗಳಲ್ಲಿ ಇಲ್ಲವಾಗುತ್ತದೆ. ಆರು ವರ್ಷಗಳು ಅಂದರೆ 2,190 ದಿನಗಳು. 2,190 ದಿನಗಳನ್ನು ಗಣನೆಗೆ ತೆಗೆದುಕೊಂಡು ಕಾರಿನ ಪ್ರತಿ ದಿನದ ವೆಚ್ಚ ಲೆಕ್ಕ ಹಾಕೋಣ. ಕಾರಿನ ಮೂಲ ಬೆಲೆ ₹ 7 ಲಕ್ಷ. ಆರು ವರ್ಷಗಳ ಬಳಿಕ ಅದರ ಮೌಲ್ಯ ₹ 2 ಲಕ್ಷಕ್ಕೆ ಇಳಿದು ₹ 5 ಲಕ್ಷ ಈಗ ಇಲ್ಲವಾಗಿದೆ. ಅಂದರೆ ₹ 5 ಲಕ್ಷವನ್ನು 2,190 ದಿನಗಳಿಂದ ಭಾಗಿಸಿದರೆ (5,00,000/2190 = 228) ₹ 228 ಪ್ರತಿ ದಿನದ ವೆಚ್ಚವಾಗಿದೆ.

ADVERTISEMENT

ಕಾರಿನ ವಿಮೆಗೆ ವರ್ಷಕ್ಕೆ ಸರಾಸರಿ ₹ 12 ಸಾವಿರ ಎಂದುಕೊಂಡರೆ, ಪ್ರತಿದಿನದ ವೆಚ್ಚ ₹ 33 ಆಗುತ್ತದೆ. ವಾರ್ಷಿಕ ನಿರ್ವಹಣಾ ವೆಚ್ಚವನ್ನು ₹ 12 ಸಾವಿರ ಎಂದು ಲೆಕ್ಕ ಹಾಕಿದರೆ ಪ್ರತಿದಿನದ ವೆಚ್ಚ ₹ 33. ಇವಲ್ಲದೆ, ಪ್ರತಿದಿನದ ಪೆಟ್ರೋಲ್ ವೆಚ್ಚ ₹ 150 ಎಂದುಕೊಳ್ಳೋಣ. ಸುಮಾರು ಮೂರು ವರ್ಷಗಳಿಗೊಮ್ಮೆ ಟಯರ್ ಮತ್ತು ಬ್ಯಾಟರಿ ಬದಲಾಯಿಸಬೇಕಾಗುತ್ತದೆ. ಬ್ಯಾಟರಿ ಮತ್ತು ಟಯರ್ ಬದಲಾಯಿಸಲು ₹ 25 ಸಾವಿರ ಎಂದುಕೊಂಡರೆ, ಆರು ವರ್ಷಗಳ ವೆಚ್ಚ ₹ 50 ಸಾವಿರ ಆಗುತ್ತದೆ. ಇದರ ಪ್ರತಿ ದಿನದ ವೆಚ್ಚ ₹ 23 ಆಗುತ್ತದೆ.

ಎಲ್ಲವನ್ನೂ ಒಳಗೊಂಡು ಲೆಕ್ಕ ಹಾಕಿದರೆ ಪ್ರತಿ ದಿನದ ಕಾರಿನ ವೆಚ್ಚ ₹ 467 ಆಗುತ್ತದೆ. ಇನ್ನು ಕಾರಿಗಾಗಿ ಕಳೆದಿರುವ ₹ 5 ಲಕ್ಷವನ್ನು ನೀವು ಹೂಡಿಕೆ ಮಾಡಿ ಶೇ 8ರಷ್ಟು ಲಾಭ ಸಿಕ್ಕಿದ್ದರೂ ಪ್ರತಿ ದಿನ ನಿಮಗೆ ₹ 110 ಲಾಭ ಲಭ್ಯ.

ನೀವು ಹೇಗೆ ನಿರ್ಧಾರ ಮಾಡಬೇಕು? ಮೇಲಿನ ಉದಾಹರಣೆಯನ್ನು ಗಣನೆಗೆ ತೆಗೆದುಕೊಂಡು, ಪ್ರತಿದಿನ ನೀವು ಕಾರಿಗಾಗಿ ₹ 467ಕ್ಕಿಂತ ಹೆಚ್ಚು ಖರ್ಚು ಮಾಡುತ್ತಿದ್ದರೆ ಸ್ವಂತ ಕಾರು ಖರೀದಿಸುವ ಬಗ್ಗೆ ಯೋಚಿಸಬಹುದು. ಕಾರು ಖರೀದಿಗೆ ಮುಂದಾಗುವಾಗ ಮೇಲಿನ ಲೆಕ್ಕಾಚಾರದ ಜತೆ ಕಾರಿಗಾಗಿ ನೀವು ಮಾಡುವ ಸಾಲ ಮತ್ತು ಅದಕ್ಕೆ ಕಟ್ಟುವ ಬಡ್ಡಿಯ ಲೆಕ್ಕಾಚಾರದ ಅರಿವೂ ಇರಲಿ. ಆಗ ಮಾತ್ರ ನಿರ್ಧಾರ ಸರಿ ದಾರಿಯಲ್ಲಿರುತ್ತದೆ. ಯಾವುದೇ ಲೆಕ್ಕಾಚಾರವಿಲ್ಲದೆ ಕಾರು ತೆಗೆದುಕೊಂಡರೆ ಅದು ನಿಮಗೆ ಹೊರೆಯಾಗುವುದಲ್ಲದೆ ಜೇಬಿಗೂ ಭಾರವಾಗುತ್ತದೆ.

ಪೇರುಪೇಟೆಯ ಚಿತ್ತ ಬಜೆಟ್‌ನತ್ತ

ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಷೇರುಪೇಟೆ ಸೂಚ್ಯಂಕಗಳು ವಾರದ ಅವಧಿಯಲ್ಲಿ ಗಣನೀಯ ಕುಸಿತ ಕಂಡಿವೆ. 46,285 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿರುವ ಸೆನ್ಸೆಕ್ಸ್ ಮತ್ತು 13,634 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ತಲಾ ಶೇ 7ರಷ್ಟು ಕುಸಿತ ಕಂಡಿವೆ. ಪೇಟೆ ಕುಸಿತಕ್ಕೆ ಹೂಡಿಕೆದಾರರ ₹ 11.6 ಲಕ್ಷ ಕೋಟಿ ಸಂಪತ್ತು ಅಳಿಸಿಹೋಗಿದೆ.

ವಿದೇಶಿ ಹೂಡಿಕೆದಾರರು ಕಳೆದ ವಾರ ₹ 12,000 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಕಳೆದ ಎಂಟು ತಿಂಗಳಲ್ಲಿ ವಾರದ ಅವಧಿಯಲ್ಲಿ ಕಂಡಿರುವ ಅತಿ ದೊಡ್ಡ ಕುಸಿತ ಇದಾಗಿದೆ. ಮಿಡ್ ಕ್ಯಾಪ್ ಸೂಚ್ಯಂಕ ಸತತ ಮೂರನೇ ವಾರವೂ ಕುಸಿತ ದಾಖಲಿಸಿದೆ. ಮಿಡ್ ಕ್ಯಾಪ್ ಸೂಚ್ಯಂಕ ಶೇ 3.6ರಷ್ಟು ಕುಸಿದಿದ್ದರೆ, ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 2.3ರಷ್ಟು ತಗ್ಗಿದೆ.

ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ 2ರಷ್ಟು ಕುಸಿದಿದ್ದು ಸತತ ಎರಡನೇ ವಾರ ನಕಾರಾತ್ಮಕವಾಗಿ ಕಂಡುಬಂದಿದೆ. ಎಲ್ಲ ವಲಯಗಳೂ ಈ ವಾರ ಇಳಿಕೆ ಕಂಡಿದ್ದು ಮಾಹಿತಿ ತಂತ್ರಜ್ಞಾನ ಮತ್ತು ವಾಹನ ಉತ್ಪಾದನಾ ವಲಯಗಳು ಗರಿಷ್ಠ ಮಟ್ಟದಲ್ಲಿ ತಗ್ಗಿವೆ.

ಇಳಿಕೆ-ಗಳಿಕೆ: ಮಾರುತಿ, ರಿಲಯನ್ಸ್, ಟಾಟಾ ಮೋಟರ್ಸ್, ಡಿಆರ್‌ಎಲ್, ಎಚ್‌ಡಿಎಫ್‌ಸಿ, ಇನ್ಫೊಸಿಸ್, ಎಚ್‌ಸಿಎಲ್ ಟೆಕ್ ಕಳೆದ ವಾರ ಗರಿಷ್ಠ ಕುಸಿತ ದಾಖಲಿಸಿವೆ. ಕುಮಿನ್ಸ್ ಇಂಡಿಯಾ ಶೇ 10ರಷ್ಟು, ಟಿವಿಎಸ್ ಶೇ 10ರಷ್ಟು, ಓರಿಯಂಟ್ ಎಲೆಕ್ಟ್ರಿಕ್ ಶೇ 6ರಷ್ಟು, ಕೋಲ್ಗೇಟ್ ಪಾಮೋಲಿವ್ ಶೇ 4ರಷ್ಟು, ಬಜಾಜ್ ಆಟೋ ಶೇ 8ರಷ್ಟು ಗಳಿಕೆ ಕಂಡಿವೆ.

ಐಪಿಒ ಮಾಹಿತಿ: ಬ್ರೂಕ್ ಫೀಲ್ಡ್ ಐಪಿಒ ಫೆಬ್ರುವರಿ 3ರಿಂದ 5ರವರೆಗೆ ಜರುಗಲಿದೆ. ಫೆಬ್ರುವರಿ 2ರಂದು ಇಂಡಿಗೋ ಪೇಂಟ್ಸ್, ಫೆಬ್ರುವರಿ 3ರಂದು ಹೋಮ್ ಫಸ್ಟ್ ಫೈನಾನ್ಸ್ ಮತ್ತು ಫೆಬ್ರುವರಿ 5ರಂದು ಸ್ಟವ್ ಕ್ರಾಫ್ಟ್ ಷೇರುಗಳು ಮಾರುಕಟ್ಟೆಗೆ ಸೇರ್ಪಡೆಯಾಗಲಿವೆ.

ತ್ರೈಮಾಸಿಕ ಫಲಿತಾಂಶಗಳು: ಈ ವಾರ ಕೋರಮಂಡಲ್, ಏರ್‌ಟೆಲ್, ಎಚ್‌ಡಿಎಫ್‌ಸಿ, ಟಾಟಾ ಕನ್ಸ್ಯೂಮರ್, ಸೆರಾ, ಎಸ್ ಕಾರ್ಟ್ಸ್, ವಂಡರ್ ಲಾ, ಹಾಕಿನ್ಸ್, ಟಿಸಿಐ, ಅದಾನಿ ಪವರ್, ವಿ–ಗಾರ್ಡ್, ಜಿಲೆಟ್, ಬ್ರಿಗೇಡ್, ಅಪೋಲೋ ಟಯರ್ಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ಮುನ್ನೋಟ: ಹೂಡಿಕೆದಾರರು ಬೆಳವಣಿಗೆ ಆಧರಿತ ಬಜೆಟ್‌ನ ನಿರೀಕ್ಷೆಯಲ್ಲಿದ್ದಾರೆ. ತೆರಿಗೆ ಹೆಚ್ಚಳ ಮಾಡದೆ ಆದಾಯ ಮೂಲಗಳನ್ನು ಸರ್ಕಾರ ಹೆಚ್ಚಿಸಿಕೊಳ್ಳಬೇಕು ಎಂಬ ಬೇಡಿಕೆ ಮಾರುಕಟ್ಟೆ ವಲಯದಲ್ಲಿದೆ. ಸರ್ಕಾರದ ಖಾಸಗೀಕರಣ ನೀತಿಯ ಬಗ್ಗೆ ಸ್ಪಷ್ಟತೆ ಬೇಕಿದೆ. ತೆರಿಗೆ ರಹಿತ ಕೋವಿಡ್ ಬಾಂಡ್‌ಗಳನ್ನು ಸರ್ಕಾರ ಘೋಷಿಸುವ ಸಂಭವವಿದೆ.

ಆದಾಯ ತೆರಿಗೆ, ಕೋವಿಡ್ ಸೆಸ್, ಎಲ್‌ಟಿಸಿಜಿ ಮತ್ತು ಎಸ್‌ಟಿಸಿಜಿ ತೆರಿಗೆ ಹೆಚ್ಚಳ ಪ್ರಸ್ತಾಪ ಮಾಡಿದರೆ ಮಾರುಕಟ್ಟೆ ಮೇಲೆ ಪರಿಣಾಮ ಉಂಟಾಗಲಿದೆ. ಕಡಿಮೆ ವೆಚ್ಚದ ಗೃಹ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಸರ್ಕಾರದ ಪ್ರೋತ್ಸಾಹ ಸಿಗುವ ಸಾಧ್ಯತೆಯಿದೆ. ಇದರ ಜತೆಗೆ ವಿದೇಶಿ ಮಾರುಕಟ್ಟೆಗಳಲ್ಲಿ ಆಗುವ ಬೆಳವಣಿಗೆಗಳು ಸಹ ಮಾರುಕಟ್ಟೆ ದಿಕ್ಕು ನಿರ್ಧರಿಸಲಿವೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.