ADVERTISEMENT

ಬಂಡವಾಳ ಮಾರುಕಟ್ಟೆ: ಸಣ್ಣ ಹೂಡಿಕೆದಾರರಿಗೆ ನಷ್ಟ ಆಗುವುದೇಕೆ?

ಅವಿನಾಶ್ ಕೆ.ಟಿ
Published 14 ಆಗಸ್ಟ್ 2022, 20:30 IST
Last Updated 14 ಆಗಸ್ಟ್ 2022, 20:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಷೇರುಗಳಲ್ಲಿ ಹೂಡಿಕೆ ಮಾಡುವಾಗ ಹುಂಬತನಕ್ಕೆ ಬಿದ್ದು, ಅರಿವಿಲ್ಲದೆ ಹೂಡಿಕೆ ಮಾಡಿ ದುಡ್ಡು ಕಳೆದುಕೊಳ್ಳುವವರು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಾರೆ. ಶ್ರೀಮಂತಿಕೆಯತ್ತ ನಿಧಾನಗತಿಯ ನಡಿಗೆಯೇ ಖ್ಯಾತ ಹೂಡಿಕೆ ತಜ್ಞ ವಾರನ್ ಬಫೆಟ್ ಅನುಸರಿಸಿದ ಮಾರ್ಗ. ಸಂಪತ್ತು ವೃದ್ಧಿಗೆ ಸಮಯ ಬೇಕು ಎನ್ನುವ ಸರಳ ಸತ್ಯ ನಮಗೆ ಗೊತ್ತಿರಬೇಕು. ‌

ನೀವೇ ಒಂದು ಉದ್ದಿಮೆಯನ್ನು ಇವತ್ತು ಆರಂಭ ಮಾಡಿದರೆ ಅದು ಲಾಭ ಗಳಿಸಿ ಉತ್ತಮ ಸ್ಥಿತಿಗೆ ಬರಲು ಒಂದೆರಡು ವರ್ಷಗಳಾದರೂ ಬೇಕು. ಆದರೆ, ಷೇರು ಖರೀದಿ ಮಾಡುವವರು ಮಾತ್ರ ಇವತ್ತು ಖರೀದಿ ಮಾಡಿದ ಷೇರು ನಾಳೆಯೇ ಹೆಚ್ಚು ಲಾಭ ಕೊಡಬೇಕು ಎಂದು ಬಯಸುತ್ತಾರೆ. ದಿಢೀರ್ ಲಾಭ ಸಿಗದಿದ್ದಾಗ ಆ ಷೇರುಗಳನ್ನು ಕೊಂಡ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿ ಕೈ ಸುಟ್ಟುಕೊಳ್ಳುವವರೂ ಇದ್ದಾರೆ. ಸಣ್ಣ ಹೂಡಿಕೆದಾರರಲ್ಲಿಶೇಕಡ 90ರಷ್ಟು ಮಂದಿ ಷೇರು ಹೂಡಿಕೆಗಳಲ್ಲಿ ನಷ್ಟ ಮಾಡಿಕೊಳ್ಳುವುದು ಹೀಗಿಯೇ.

ಯಾವೆಲ್ಲ ಕಾರಣಕ್ಕೆ ನಷ್ಟ?: ಯಾರೋ ಹೇಳಿದರು ಎನ್ನುವ ಕಾರಣಕ್ಕೆ, ಸ್ಟಾಕ್ ಟಿಪ್ಸ್‌ಗಳನ್ನು ಆಧರಿಸಿ ಹೂಡಿಕೆ ಮಾಡುವವರು ದುಡ್ಡು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಕಡಿಮೆ ಬೆಲೆಗೆ ಸಿಗುತ್ತವೆ ಎನ್ನುವ ಕಾರಣಕ್ಕೆ ಆರ್ಥಿಕವಾಗಿ ಸುಸ್ಥಿತಿಯಲ್ಲಿಲ್ಲದ ಕಂಪನಿಗಳ ಷೇರುಗಳನ್ನು ಖರೀದಿಸಿದರೆ ದುಡ್ಡು ಕರಗುವುದು ನಿಶ್ಚಿತ. ಟ್ರೇಡಿಂಗ್‌ನ ಆಳ ಅಗಲ ತಿಳಿಯದೆ ಮುಂದುವರಿದರೆ ನಷ್ಟದ ಹೊರೆ ಹೊರಬೇಕಾಗುತ್ತದೆ. ವಿವಿಧ ಕಾರಣಗಳಿಗೆ ಷೇರು ಮಾರುಕಟ್ಟೆ ಸೂಚ್ಯಂಕಗಳು ಏರಿಳಿತ ಕಾಣುವಾಗ ತಾಳ್ಮೆ ಕಳೆದುಕೊಂಡು ಷೇರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದರೂ ನಷ್ಟ ಉಂಟಾಗುತ್ತದೆ.

ADVERTISEMENT

ಯಾವ ರೀತಿಯ ಕಂಪನಿ, ಯಾವ ರೀತಿಯ ಬಿಸಿನೆಸ್, ಅದರ ಭವಿಷ್ಯದ ಬೆಳವಣಿಗೆ ಸಾಧ್ಯತೆಗಳೇನು ಎನ್ನುವುದನ್ನು ತಿಳಿಯದೆ ಹೂಡಿಕೆ ಮಾಡಿದರೂ ಷೇರುಪೇಟೆಯಲ್ಲಿ ನಿಮ್ಮ ದುಡ್ಡು ಕರಗುತ್ತದೆ.

ಹೆದರಿದರೆ ನಷ್ಟದ ಹೊರೆ: ಷೇರು ಮಾರುಕಟ್ಟೆಯಲ್ಲಿ ಏರಿಳಿತ ಎಂಬುದು ತೀರಾ ಸಮಾನ್ಯ. 2020ರ ಮಾರ್ಚ್‌ನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 41,000 ಅಂಶಗಳಿಂದ 25,000 ಅಂಶಗಳಿಗೆ ಏಕಾಏಕಿ ಕುಸಿತ ಕಂಡಿತು. 2021ರಮಾರ್ಚ್ ವೇಳೆಗೆ ಸೆನ್ಸೆಕ್ಸ್ಮತ್ತೆ 50,000 ಅಂಶಗಳ ಗಡಿ ದಾಟಿ 2022ರ ಜನವರಿ ವೇಳೆಗೆ 61,000 ಅಂಶಗಳಿಗೆ ಏರಿಕೆ ಕಂಡಿತ್ತು.

ಆದರೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ತೀವ್ರಗೊಂಡ ನಂತರ, ಮೇ ವೇಳೆಗೆ ಷೇರುಪೇಟೆ ಸೂಚ್ಯಂಕ ಮತ್ತೆ 51,000 ಅಂಶಗಳಿಗೆ ಕುಸಿಯಿತು. ಈಗ ಸೆನ್ಸೆಕ್ಸ್ ಮತ್ತೆ 59,000 ಅಂಶಗಳ ಆಸುಪಾಸಿನಲ್ಲಿದೆ. ಸೂಚ್ಯಂಕದ ಏರಿಳಿತಕ್ಕೆ ಹೆಚ್ಚು ತಲೆಕೆಡಿಸಿಕೊಂಡು ಷೇರುಗಳನ್ನು ಮಾರಾಟ ಮಾಡಿದವರು ಹಣ ಕಳೆದುಕೊಂಡಿರುತ್ತಾರೆ. ಆದರೆ ಏರಿಳಿತಗಳ ಬಗ್ಗೆ ಹೆಚ್ಚು ಚಿಂತೆ ಮಾಡದೆ ಉತ್ತಮ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಿದವರು ಉತ್ತಮ ಲಾಭ ಗಳಿಸಿಕೊಂಡಿದ್ದಾರೆ.

ಇತಿಹಾಸ ಇದನ್ನೇ ಹೇಳುತ್ತದೆ: ಷೇರು ಮಾರುಕಟ್ಟೆ ಹೂಡಿಕೆ ದೀರ್ಘಾವಧಿಗೆ ಅಪಾಯಕಾರಿಯಲ್ಲ, ಆದರೆ, ಅಲ್ಪಾವಧಿ ಲಾಭದ ಉದ್ದೇಶವಿದ್ದರೆ ಷೇರುಪೇಟೆ ಹೂಡಿಕೆಯಲ್ಲಿ ಖಂಡಿತವಾಗಿಯೂ ದೊಡ್ಡ ಮಟ್ಟದ ರಿಸ್ಕ್ ಇದೆ. ಷೇರುಪೇಟೆಯಲ್ಲಿ ಏರಿಳಿತಗಳೆಲ್ಲ ಸಹಜ.

ಷೇರು ಮಾರುಕಟ್ಟೆಯುದೀರ್ಘಾವಧಿಯಲ್ಲಿ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. 2008ರಲ್ಲಿ ಅಮೆರಿಕದ ಅಗ್ರಮಾನ್ಯ ಹಣಕಾಸು ಸಂಸ್ಥೆ ಲೀಮನ್ ಬ್ರದರ್ಸ್ ದಿವಾಳಿ ಘೋಷಿಸಿತು. ಇದರ ಬೆನ್ನಿಗೇ ಭಾರತದಲ್ಲಿ ಸತ್ಯಂ ಹಗರಣ ಬೆಳಕಿಗೆ ಬಂತು. 17,000 ಅಂಶಗಳಲ್ಲಿದ್ದ ಸೆನ್ಸೆಕ್ಸ್ 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ಸತ್ಯಂ ಹಗರಣದ ಪರಿಣಾಮವಾಗಿ ಏಕಾಏಕಿ 8,000 ಅಂಶಗಳಿಗೆ ಇಳಿಕೆ ಕಂಡಿತು.

ಆದರೆ, 2014ರಲ್ಲಿ ಕೇಂದ್ರದಲ್ಲಿ ಸ್ಪಷ್ಟ ಬಹುಮತ ಇರುವ ಸ್ಥಿರ ಸರ್ಕಾರ ಬಂದ ಕಾರಣ ಮಾರುಕಟ್ಟೆ ಪುಟಿದೆದ್ದಿತ್ತು. 2014ರಲ್ಲಿ ಸೆನ್ಸಕ್ಸ್ 25,000 ಅಂಶಗಳಿಗೆ ಜಿಗಿತ ಕಂಡಿತು. ಇತಿಹಾಸವನ್ನು ಹೀಗೆ ತಿರುವಿನೋಡಿದಾಗ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಒಂದು ವ್ಯವಸ್ಥಿತ ಸೂತ್ರಕ್ಕೆ ಅನುಗುಣವಾಗಿ ನಡೆಯುವ ಲೆಕ್ಕಾಚಾರ ಎನ್ನುವುದು ಸ್ಪಷ್ಚವಾಗುತ್ತದೆ.

ಅರಿತು ಹೂಡಿಕೆ ಮಾಡುವವರಿಗೆ ಷೇರು ಮಾರುಕಟ್ಟೆ ಸಂಪತ್ತು ಗಳಿಸುವ ಕೇಂದ್ರ ಎನ್ನುವುದರಲ್ಲಿ ಎರಡು ಮಾತಿಲ್ಲ.

4ನೇ ವಾರವೂ ಗಳಿಕೆ ಕಂಡ ಸೂಚ್ಯಂಕಗಳು
ಷೇರುಪೇಟೆ ಸೂಚ್ಯಂಕಗಳು ಸತತ ನಾಲ್ಕನೇ ವಾರವೂ ಗಳಿಕೆ ದಾಖಲಿಸಿವೆ. ಆಗಸ್ಟ್ 12ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಉತ್ತಮ ಗಳಿಕೆ ಕಂಡಿವೆ. 59,462 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 1.84ರಷ್ಟು ಗಳಿಕೆ ಕಂಡಿದೆ. 17,698 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 1.72ರಷ್ಟು ಹೆಚ್ಚಳ ದಾಖಲಿಸಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸಕಾರಾತ್ಮಕತೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಖರೀದಿ ಭರಾಟೆ, ಡಾಲರ್ ಮೌಲ್ಯ ಇಳಿಕೆ, ತ್ರೈಮಾಸಿಕ ಫಲಿತಾಂಶಗಳಲ್ಲಿ ಉತ್ತಮ ಗಳಿಕೆ ಮತ್ತು ಆಶಾದಾಯಕ ಮುಂಗಾರು ಸೇರಿ ಹಲವು ಅಂಶಗಳು ಪೇಟೆ ಜಿಗಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ಬಿಎಸ್ಇ ಲೋಹ ಸೂಚ್ಯಂಕ ಶೇ 5ರಷ್ಟು, ಕ್ಯಾಪಿಟಲ್ ಗೂಡ್ಸ್ ಶೇ 4ರಷ್ಟು, ಪವರ್ ಸೂಚ್ಯಂಕ ಶೇ 3.6ರಷ್ಟು ಜಿಗಿದಿವೆ. ಎಫ್ಎಂಸಿಜಿ ವಲಯ ಶೇ 1ರಷ್ಟು ಕುಸಿತ ಕಂಡಿದೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 7,850.12 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 24,478.19 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಏರಿಕೆ–ಇಳಿಕೆ: ಬಿಎಸ್ಇ ಲಾರ್ಜ್ ಕ್ಯಾಪ್ ಸೂಚ್ಯಂಕ ಶೇ 2ರಷ್ಟು ಗಳಿಸಿಕೊಂಡಿದೆ. ಜೊಮಾಟೊ, ಪಿರಾಮಲ್ ಎಂಟರ್‌ಪ್ರೈಸಸ್, ಜೈಡಸ್ ಲೈಫ್ ಸೈನ್ಸಸ್, ಹಿಂಡಾಲ್ಕೊ ಇಂಡಸ್ಟ್ರೀಸ್, ಅದಾನಿ ಟ್ರಾನ್ಸ್‌ಮಿಷನ್, ಕೋಲ್ ಇಂಡಿಯಾ ಮತ್ತು ಯುಪಿಎಲ್ ಉತ್ತಮ ಗಳಿಕೆ ಕಂಡಿವೆ.

ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕ ಶೇ 1ರಷ್ಟು ಹೆಚ್ಚಳ ದಾಖಲಿಸಿದೆ. ಇಂದ್ರಪ್ರಸ್ಥ ಗ್ಯಾಸ್, ಹಿಂದೂಸ್ಥಾನ್ ಏರೋನಾಟಿಕ್ಸ್, ಜೆಎಸ್‌ಡಬ್ಲ್ಯೂ ಎನರ್ಜಿ, ಭಾರತ್ ಫೋರ್ಜ್, ಟೋರೆಂಟ್ ಪವರ್, ಕುಮಿನ್ಸ್ ಇಂಡಿಯಾ, ಭಾರತ್ ಎಲೆಕ್ಟ್ರಾನಿಕ್ಸ್, ಆದಿತ್ಯ ಬಿರ್ಲಾ ಕ್ಯಾಪಿಟಲ್ ಮತ್ತು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಗಳಿಸಿಕೊಂಡಿವೆ.

ನ್ಯಾಟ್ಕೊ ಫಾರ್ಮಾ, ಅಬೋಟ್ ಇಂಡಿಯಾ, ಎಂಆರ್‌ಎಫ್, ಎನ್‌ಎಚ್‌ಪಿಸಿ, 3 ಎಂ ಮತ್ತು ಅಲ್ಕೆಂ ಲ್ಯಾಬೊರೇಟರಿಸ್ ಕುಸಿದಿವೆ. ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 1ರಷ್ಟು ಸುಧಾರಿಸಿವೆ.

ಬಿರ್ಲಾ ಟಯರ್ಸ್, ಎವರೆಸ್ಟ್ ಕ್ಯಾಂಟೋ ಸಿಲಿಂಡರ್, ಡೈನೆಮಿಕ್ ಪ್ರಾಡಕ್ಟ್ಸ್‌, ಫ್ಯೂಚರ್ ರಿಟೇಲ್, ಸಂಡೂರ್ ಮ್ಯಾಂಗನೀಸ್ ಆ್ಯಂಡ್ ಓರ್ಸ್ ಮತ್ತು ಕಿರ್ಲೋಸ್ಕರ್ ಬ್ರದರ್ಸ್ ಶೇ 15ರಿಂದ ಶೇ 34ರಷ್ಟು ಇಳಿಕೆ ದಾಖಲಿಸಿವೆ.

ಮುನ್ನೋಟ: ಈ ವಾರ ಬಿರ್ಲಾ ಟೈಯರ್ಸ್, ವೆಲ್‌ನೆಸ್ ನೋನಿ, ಅಲೆಕ್ಸಾಂಡರ್ ಸ್ಟ್ಯಾಂಪ್ಸ್ ಆ್ಯಂಡ್ ಕಾಯಿನ್ಸ್ ಲಿ, ಶ್ರೀ ಹನುಮಾನ್ ಶುಗರ್ಸ್ ಆ್ಯಂಡ್ ಇಂಡಸ್ಟ್ರೀಸ್ ಲಿ., ರಾಯಲ್ ಕುಷನ್ ವಿನೈಲ್ ಪ್ರಾಡಕ್ಟ್ಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಜಾಗತಿಕ ವಿದ್ಯಮಾನಗಳ ಜೊತೆ ದೇಶಿ ಬೆಳವಣಿಗೆಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.