ADVERTISEMENT

ಬಂಡವಾಳ ಮಾರುಕಟ್ಟೆ: ತೆರಿಗೆ ಉಳಿತಾಯಕ್ಕೆ ಐದು ಸೂತ್ರ

ಕಾವ್ಯ ಡಿ.
Published 24 ಫೆಬ್ರುವರಿ 2025, 0:57 IST
Last Updated 24 ಫೆಬ್ರುವರಿ 2025, 0:57 IST
   

2024-25ನೇ ಆರ್ಥಿಕ ವರ್ಷವು ಮಾರ್ಚ್ 31ಕ್ಕೆ ಕೊನೆಗೊಳ್ಳುತ್ತದೆ. ಹಳೆಯ ತೆರಿಗೆ ಪದ್ಧತಿ ಅಡಿ ಆದಾಯ ತೆರಿಗೆಯ ಅನುಕೂಲ ಪಡೆದುಕೊಳ್ಳಬೇಕಾದರೆ ನೀವು ಈಗಲೇ ಅದಕ್ಕೆ ಯೋಜನೆ ಹಾಕಿಕೊಳ್ಳಬೇಕು. ಅಸಲಿಗೆ ಆರ್ಥಿಕ ವರ್ಷದ ಆರಂಭದಲ್ಲೇ ತೆರಿಗೆ ಉಳಿತಾಯಕ್ಕೆ ತಯಾರಿ ಮಾಡಿಕೊಳ್ಳುವುದು ಸರಿಯಾದ ಕ್ರಮ.

ಆದರೆ, ತೆರಿಗೆ ನಿಯಮಗಳ ಬಗ್ಗೆ ಸರಿಯಾದ ಅರಿವಿಲ್ಲದ ಅನೇಕರು ಕೊನೆಯ ತನಕ ತೆರಿಗೆ ಉಳಿತಾಯಕ್ಕೆ ನೆರವಾಗುವ ಹೂಡಿಕೆ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಲು ಮುಂದಾಗುವುದಿಲ್ಲ. ಈ ಲೇಖನ ದಲ್ಲಿ ಕೊನೆಯ ಹಂತದಲ್ಲೂ ಹೂಡಿಕೆ ಮಾಡಿ, ತೆರಿಗೆ ಉಳಿತಾಯದ ಅನುಕೂಲ ಪಡೆದುಕೊಳ್ಳ ಬಹುದಾದ ಹಲವು ಆಯ್ಕೆಗಳ ಬಗ್ಗೆ ತಿಳಿಯೋಣ.

  • ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್): ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಹೂಡಿಕೆ ಮಾಡಿದರೆ ಆದಾಯ ತೆರಿಗೆಯ ಸೆಕ್ಷನ್ 80ಸಿ ಅಡಿ ₹1.5 ಲಕ್ಷದ ವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಅಲ್ಲದೆ, ಸೆಕ್ಷನ್ 80ಸಿಸಿಡಿ 1ಬಿ ಅಡಿ  ಹೆಚ್ಚುವರಿಯಾಗಿ ₹50 ಸಾವಿರ ಹೂಡಿಕೆ ಮಾಡಿದರೆ ಅದಕ್ಕೂ ವಿನಾಯಿತಿ ಲಭಿಸುತ್ತದೆ. ಒಟ್ಟಾರೆಯಾಗಿ ಹಳೆಯ ತೆರಿಗೆ ಪದ್ಧತಿ ಅಡಿ ಎನ್‌ಪಿಎಸ್ ಹೂಡಿಕೆಯಿಂದ ₹2 ಲಕ್ಷದ ವರೆಗೆ ತೆರಿಗೆ ಅನುಕೂಲ ಪಡೆಯಲು ಸಾಧ್ಯವಿದೆ.

    ADVERTISEMENT
  • ಇಎಲ್ಎಸ್ಎಸ್ ಟ್ಯಾಕ್ಸ್ ಸೇವಿಂಗ್ ಮ್ಯೂಚುವಲ್ ಫಂಡ್: ಆದಾಯ ತೆರಿಗೆ ಸೆಕ್ಷನ್ 80ಸಿ ಅಡಿ ತೆರಿಗೆ ಉಳಿಸಲು ಹೆಚ್ಚು ಜನರು ಬಳಸುವ ಜನಪ್ರಿಯ ಆಯ್ಕೆ ಇಎಲ್ಎಸ್ಎಸ್ ಟ್ಯಾಕ್ಸ್ ಸೇವಿಂಗ್ ಮ್ಯೂಚುವಲ್ ಫಂಡ್ ಆಗಿದೆ. ಇಎಲ್ಎಸ್ಎಸ್ ಅಂದರೆ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಂ ಎಂದರ್ಥ. ಈ ಫಂಡ್‌ನಲ್ಲಿ ಹೂಡಿಕೆ ಮಾಡುವ ದುಡ್ಡನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಲಾಗುತ್ತದೆ. ಆದರೆ, ಇಎಲ್ಎಸ್ಎಸ್ ಫಂಡ್‌ಗಳಲ್ಲಿನ ಹೂಡಿಕೆಗೆ ಮೂರು ವರ್ಷದ ಲಾಕಿನ್ ಅವಧಿ ಇರುತ್ತದೆ. ಈ ಫಂಡ್‌ಗಳಲ್ಲಿ ₹1.5 ಲಕ್ಷದ ವರೆಗಿನ ಹೂಡಿಕೆಗೆ ವಿನಾಯಿತಿ ಸಿಗುತ್ತದೆ.

  • ಆರೋಗ್ಯ ವಿಮೆ: ಆರೋಗ್ಯ ವಿಮೆ ಮೇಲಿನ ಕಂತಿನ ಮೊತ್ತಕ್ಕೆ ಆದಾಯ ತೆರಿಗೆ ಸೆಕ್ಷನ್ 80ಡಿ ಅಡಿ ತೆರಿಗೆ ವಿನಾಯಿತಿ ಸಿಗುತ್ತದೆ. ಪತಿ- ಪತ್ನಿ ಮತ್ತು ಮಕ್ಕಳು ಸೇರಿ ಆರೋಗ್ಯ ವಿಮೆಗೆ ₹25 ಸಾವಿರದ ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. 60 ವರ್ಷದ ಒಳಗಿನ ಪೋಷಕರಿಗೆ ₹25 ಸಾವಿರದ ವರೆಗೆ ವಿನಾಯಿತಿ ಸಿಗುತ್ತದೆ. 60 ವರ್ಷದ ಮೇಲ್ಪಟ್ಟ ಪೋಷಕರಿಗೆ ₹50 ಸಾವಿರದ ವರೆಗೆ ಸೆಕ್ಷನ್ 80ಡಿ ಅಡಿ ವಿನಾಯಿತಿ ಲಭಿಸುತ್ತದೆ.

  • ಅಂಚೆ ಕಚೇರಿ ಹೂಡಿಕೆ: ಅಂಚೆ ಕಚೇರಿ ಹೂಡಿಕೆಗಳಾದ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪತ್ರ (ಎನ್ಎಸ್‌ಸಿ) ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೂಡಿಕೆಗೆ ಆದಾಯ ತೆರಿಗೆಯ ಸೆಕ್ಷನ್ 80ಸಿ ಅಡಿ ₹1.5 ಲಕ್ಷದ ವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ 10 ವರ್ಷದೊಳಗಿನ ಹೆಣ್ಣು ಮಕ್ಕಳಿದ್ದ ಪೋಷಕರು ಮಾತ್ರ ಹೂಡಿಕೆ ಮಾಡಬಹುದು ಎನ್ನುವುದು ನಿಮ್ಮ ಗಮನದಲ್ಲಿ ಇರಲಿ.

  • ಫಿಕ್ಸೆಡ್ ಡೆಪಾಸಿಟ್: ತೆರಿಗೆ ವಿನಾಯಿತಿಗೆ ಒಳಪಡುವ ಫಿಕ್ಸೆಡ್ ಡೆಪಾಸಿಟ್‌ನಲ್ಲಿ 5 ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ ಆದಾಯ ತೆರಿಗೆ ಸೆಕ್ಷನ್ 80ಸಿ ಅಡಿ ತೆರಿಗೆ ವಿನಾಯಿತಿ ಸಿಗುತ್ತದೆ. ಆದರೆ, ಫಿಕ್ಸೆಡ್ ಡೆಪಾಸಿಟ್ ಮೇಲೆ ಸಿಗುವ ಬಡ್ಡಿಗೆ ತೆರಿಗೆ ಅನ್ವಯಿಸುತ್ತದೆ.

ಸತತ 2ನೇ ವಾರವೂ ಷೇರುಪೇಟೆ ಕುಸಿತ

ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರವೂ ಕುಸಿತ ದಾಖಲಿಸಿವೆ. ಫೆಬ್ರುವರಿ 21ಕ್ಕೆ ಕೊನೆಗೊಂಡ ವಾರದಲ್ಲಿ ನಿಫ್ಟಿ ಮತ್ತು ಸೆನ್ಸೆಕ್ಸ್ ಕುಸಿತ ದಾಖಲಿಸಿವೆ. 75,311 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.83ರಷ್ಟು ತಗ್ಗಿದೆ. 22,795 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.58ರಷ್ಟು ಇಳಿಕೆಯಾಗಿದೆ.

ಆದರೆ, ನಿಫ್ಟಿ ಮಿಡ್ ಕ್ಯಾಪ್ ಸೂಚ್ಯಂಕ ಶೇ 1.68 ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 1.49ರಷ್ಟು ಗಳಿಸಿಕೊಂಡಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳ ಮಾರಾಟ, ಭಾರತ ಮತ್ತು ಅಮೆರಿಕ ನಡುವೆ ಸುಂಕದ ಬಿಕ್ಕಟ್ಟು, ಗ್ರಾಹಕನ ಖರೀದಿ ಸಾಮರ್ಥ್ಯ ಕುಂಠಿತ, ಕಂಪನಿಗಳ ತ್ರೈಮಾಸಿಕ ವರದಿಯಲ್ಲಿ ಸಾಧಾರಣ ಗಳಿಕೆ ಸೇರಿ  ಹಲವು ಅಂಶಗಳು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ.

ವಲಯವಾರು ಪ್ರಗತಿಯಲ್ಲಿ ವಾರದ ಲೆಕ್ಕಾಚಾರ ನೋಡಿದಾಗ ಆಟೊ ಶೇ 2.5, ಫಾರ್ಮಾ ಶೇ 2.05, ಎಫ್‌ಎಂಸಿಜಿ ಶೇ 1.96, ಮಾಹಿತಿ ತಂತ್ರಜ್ಞಾನ ಶೇ 1.86, ಸರ್ವಿಸ್ ಶೇ 0.45, ಬ್ಯಾಂಕ್ ನಿಫ್ಟಿ ಶೇ 0.24, ಮತ್ತು ಫೈನಾನ್ಸ್ ಶೇ 0.05ರಷ್ಟು ಕುಸಿದಿವೆ.

ನಿಫ್ಟಿ ಲೋಹ ವಲಯ ಶೇ 5.16, ಎನರ್ಜಿ ಶೇ 3.34, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 1.67 ಮತ್ತು ಮಾಧ್ಯಮ ಶೇ 0.02ರಷ್ಟು ಗಳಿಸಿಕೊಂಡಿವೆ.

ಇಳಿಕೆ–ಗಳಿಕೆ: ನಿಫ್ಟಿಯಲ್ಲಿ ಮಹೀಂದ್ರ ಆ್ಯಂಡ್‌ ಮಹೀಂದ್ರ ಶೇ 9.28, ಏರ್‌ಟೆಲ್ ಶೇ 4.59, ಟಿಸಿಎಸ್ ಶೇ 3.74, ಡಾ.ರೆಡ್ಡೀಸ್ ಲ್ಯಾಬ್ಸ್ ಶೇ  3.67, ಸನ್ ಫಾರ್ಮಾ ಶೇ 3.61, ಹಿಂದೂಸ್ಥಾನ್ ಯುನಿಲಿವರ್ ಶೇ 3.3, ಮಾರುತಿ ಸುಜುಕಿ ಶೇ 2.76, ಐಟಿಸಿ ಶೇ 2.33, ಬ್ರಿಟಾನಿಯಾ ಇಂಡಸ್ಟ್ರೀಸ್ ಶೇ 2.24, ಇನ್ಫೊಸಿಸ್ ಶೇ 2.22, ಐಸಿಐಸಿಐ ಬ್ಯಾಂಕ್ ಶೇ 2.1 ಮತ್ತು ಟಾಟಾ ಕನ್ಸ್ಯೂಮರ್ ಶೇ 1.83ರಷ್ಟು ಕುಸಿದಿವೆ.

ಶ್ರೀರಾಮ್ ಫೈನಾನ್ಸ್ ಶೇ 8.59, ಎನ್‌ಟಿಪಿಸಿ ಶೇ 8.56, ಹಿಂಡಾಲ್ಕೋ ಇಂಡಸ್ಟ್ರೀಸ್ ಶೇ 7.89, ಐಷರ್ ಮೋಟರ್ಸ್ ಶೇ 5.55, ಟಾಟಾ ಸ್ಟೀಲ್ ಶೇ 4.61, ಕೋಲ್ ಇಂಡಿಯಾ ಶೇ 4.48, ಭಾರತ್ ಎಲೆಕ್ಟ್ರಾನಿಕ್ಸ್ ಶೇ 2.36, ಎಲ್ ಆ್ಯಂಡ್ ಟಿ ಶೇ 2.27, ಬಜಾಜ್ ಫಿನ್‌ಸರ್ವ್ ಶೇ 2.23 ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಶೇ 2.08 ಮತ್ತು ಅದಾನಿ ಪೋರ್ಟ್ಸ್ ಶೇ 1.89ರಷ್ಟು ಗಳಿಸಿಕೊಂಡಿವೆ.

ಮುನ್ನೋಟ: ಈ ವಾರ ಮಂಜೀರಾ ಕನ್‌ಸ್ಟ್ರಕ್ಷನ್, ರೇನ್ ಇಂಡಸ್ಟ್ರೀಸ್, ಎನ್. ಕೆ. ವೀಲ್ಸ್ ಇಂಡಿಯಾ, ಸನೋಫಿ ಇಂಡಿಯಾ, ಶೇಫ್ಲರ್ ಇಂಡಿಯಾ, ಫೊಸೆಕೋ ಇಂಡಿಯಾ, ರಾಣಾ ಷುಗರ್ಸ್, ಇಂಟರ್ ನ್ಯಾಷನಲ್ ಜೆಮೋಲಜಿಕಲ್ ಇನ್‌ಸ್ಟಿಟ್ಯೂಟ್ ಇಂಡಿಯಾ ಸೇರಿ ಕೆಲ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಅನಿಶ್ಚಿತತೆಯ ವಾತಾವರಣ ಮುಂದುವರಿಯಲಿದೆ. ಉಳಿದಂತೆ ಜಾಗತಿಕ ವಿದ್ಯಮಾನ ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿವೆ.

ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.