ADVERTISEMENT

ಬಂಡವಾಳ ಮಾರುಕಟ್ಟೆ: ಇಟಿಎಫ್‌ನಲ್ಲಿ ಹೂಡಿಕೆ ಹೇಗೆ?

ಕಾವ್ಯ ಡಿ.
Published 2 ಡಿಸೆಂಬರ್ 2024, 0:24 IST
Last Updated 2 ಡಿಸೆಂಬರ್ 2024, 0:24 IST
   

ಷೇರು ಮತ್ತು ಮ್ಯೂಚುವಲ್ ಫಂಡ್‌ಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬಹುತೇಕರಿಗೆ ಗೊತ್ತಿದೆ. ಆದರೆ, ಇಟಿಎಫ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ವಿಧಾನ ಹೆಚ್ಚು ಜನಪ್ರಿಯವಾಗಿಲ್ಲ.

ಭಾರತದಲ್ಲಿ ಪ್ರಸಕ್ತ ವರ್ಷದ ಮಾರ್ಚ್ ತಿಂಗಳ ಅಂಕಿ-ಅಂಶದ ಪ್ರಕಾರ ಇಟಿಎಫ್‌ಗಳಲ್ಲಿ
₹6.95 ಲಕ್ಷ ಕೋಟಿ ಹೂಡಿಕೆಯಾಗಿದೆ. ದಿನ ಕಳೆದಂತೆ ಹೂಡಿಕೆದಾರರು ಷೇರು ಹೂಡಿಕೆ ಮ್ಯೂಚುವಲ್ ಫಂಡ್ ಜೊತೆ ಇಟಿಎಫ್‌ಗಳತ್ತ ಕೂಡ ಚಿತ್ತ ಹರಿಸಿದ್ದಾರೆ. ಈ ಹೊತ್ತಿನಲ್ಲಿ, ಇಟಿಎಫ್ ಅಂದರೆ ಏನು? ಈ ಹೂಡಿಕೆಯಿಂದ ಪ್ರಯೋಜನ ಏನು? ಅವುಗಳ ಮಿತಿಗಳೇನು? ಷೇರು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗಿಂತ ಇಟಿಎಫ್ ಹೇಗೆ ಭಿನ್ನ? ಹೀಗೆ ಇಟಿಎಫ್ ಸುತ್ತ ಇರುವ ಹತ್ತಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋಣ ಬನ್ನಿ.

ಏನಿದು ಇಟಿಎಫ್?:

ADVERTISEMENT

ಒಂದು ಹೂಡಿಕೆಯ ಗುಚ್ಛವನ್ನು ಸರಳವಾಗಿ ಇಟಿಎಫ್ ಎಂದು ಕರೆಯಬಹುದು. ‘ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್’ ಎನ್ನುವುದು ‘ಇಟಿಎಫ್‌’ನ ವಿಸ್ತೃತ ರೂಪ. ಇಟಿಎಫ್‌ನಲ್ಲಿ ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್‌ನಲ್ಲಿನ ಒಳ್ಳೆಯ ಅಂಶಗಳು ಸೇರಿರುವುದರಿಂದ ಇದನ್ನು ಷೇರು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗಳ ಮಿಶ್ರರೂಪ ಎಂದು ಪರಿಗಣಿಸಬಹುದು.

ಷೇರು ಮಾರುಕಟ್ಟೆಯಲ್ಲಿ


ಷೇರುಗಳ ವಹಿವಾಟು ನಡೆಯುವ ಮಾದರಿಯಲ್ಲೇ ಇಟಿಎಫ್‌ಗಳ ಖರೀದಿ- ಮಾರಾಟ ಜರುಗುತ್ತದೆ. ಷೇರುಗಳ ಬೆಲೆ ಏರಿಳಿತ ಕಾಣುವ ರೀತಿ ಇಟಿಎಫ್‌ಗಳ ಬೆಲೆ ಕ್ಷಣ ಕ್ಷಣಕ್ಕೂ ಬದಲಾಗುತ್ತಿ ರುತ್ತದೆ. ಷೇರುಗಳನ್ನು ಕೊಳ್ಳುವಾಗ ಮತ್ತು ಮಾರಾಟ ಮಾಡುವಾಗ  ಲಿಮಿಟ್‌  ಆರ್ಡರ್ ಹಾಕುವ ರೀತಿಯಲ್ಲೇ ಇಟಿಎಫ್‌ಗಳಿಗೂ ಲಿಮಿಟ್ ನಿಗದಿಪಡಿಸಬಹುದು. ಅಲ್ಲದೆ, ಷೇರು ಖರೀದಿಸಿದಾಗ ಹೇಗೆ ಅದು ನಮ್ಮ ಡಿ-ಮ್ಯಾಟ್ ಖಾತೆಗೆ ಬರುವುದೋ ಅದೇ ಮಾದರಿಯಲ್ಲಿ ಇಟಿಎಫ್ ಖರೀದಿಸಿದಾಗಲೂ ಅದು ಡಿ-ಮ್ಯಾಟ್ ಖಾತೆಗೆ ಬರುತ್ತದೆ.

ಇನ್ನು ಇಟಿಎಫ್ ಹೂಡಿಕೆ, ಇಂಡೆಕ್ಸ್ ಮ್ಯೂಚುವಲ್ ಫಂಡ್ ಮಾದರಿಯನ್ನು ಸಹ ಹೋಲುತ್ತದೆ. ಇಂಡೆಕ್ಸ್ ಮ್ಯೂಚುವಲ್ ಫಂಡ್‌ಗಳು ನಿಫ್ಟಿ 50 ಮತ್ತು ಸೆನ್ಸೆಕ್ಸ್ ಸೂಚ್ಯಂಕ (ಇಂಡೆಕ್ಸ್) ಅನುಸರಣೆ ಮಾಡಿ ಹೂಡಿಕೆ ಮಾಡುತ್ತವೆ. ಇದೇ ಮಾದರಿಯಲ್ಲಿ ಬಹುತೇಕ ಇಟಿಎಫ್‌ಗಳು ಕಾರ್ಯ ನಿರ್ವಹಿಸುತ್ತವೆ.

ಉದಾಹರಣೆಗೆ  ನಿಫ್ಟಿ ಬೀಸ್ ಇಟಿಎಫ್, ನಿಫ್ಟಿ 50 ಸೂಚ್ಯಂಕವನ್ನು ಹಿಂಬಾಲಿಸುತ್ತದೆ. ಮತ್ತೊಂದು ವಿಶೇಷ ಅಂದರೆ ಮ್ಯೂಚುವಲ್ ಫಂಡ್‌ಗಳಿಗಿಂತ ಕಡಿಮೆ ಎಕ್ಸ್‌ಪೆನ್ಸ್ ರೇಷಿಯೊ (ವೆಚ್ಚ ಅನುಪಾತ/ಕಮಿಷನ್) ಇಟಿಎಫ್‌ಗಳಲ್ಲಿ ಇರುತ್ತದೆ.

ಇಟಿಎಫ್ ವಿಧಗಳು:  ಇಟಿಎಫ್‌ಗಳಲ್ಲಿ ಪ್ರಮುಖ ವಾಗಿ ಮೂರು ವಿಧಗಳಿವೆ. ಈಕ್ವಿಟಿ ಇಟಿಎಫ್, ಡೆಟ್ ಇಟಿಎಫ್ ಮತ್ತು ಕಮೋಡಿಟಿ ಇಟಿಎಫ್.

ಈಕ್ವಿಟಿ ಇಟಿಎಫ್‌ಗಳು ಈಕ್ವಿಟಿ ಇಂಡೆಕ್ಸ್‌ನ ಹಲವು ಷೇರುಗಳ ಮೇಲೆ ಹೂಡಿಕೆ ಮಾಡುತ್ತವೆ. ಡೆಟ್ ಇಟಿಎಫ್‌ಗಳು ಕಾರ್ಪೊರೇಟ್ ಬಾಂಡ್, ಸರ್ಕಾರಿ ಬಾಂಡ್, ಮುನಿಸಿಪಲ್ ಬಾಂಡ್‌‌ನಂತಹ ಡೆಟ್ ಹೂಡಿಕೆಗಳ ಮೇಲೆ ಹಣ ತೊಡಗಿಸುತ್ತವೆ. ಕಮೋಡಿಟ್ ಇಟಿಎಫ್‌ಗಳು ಚಿನ್ನ, ಬೆಳ್ಳಿಯ ಮೇಲೆ ಹಣ ಹಾಕುತ್ತವೆ.

ಇಟಿಎಫ್ ಅನುಕೂಲಗಳು: ಇಟಿಎಫ್‌ ಗಳಲ್ಲಿ ಎಕ್ಸ್‌ಪೆನ್ಸ್ ರೇಷಿಯೊ ಮ್ಯೂಚುವಲ್  ಫಂಡ್‌ಗಳಿಗಿಂತ ಕಡಿಮೆ ಇರುತ್ತದೆ. ಸಾಮಾನ್ಯ ವಾಗಿ ಮ್ಯೂಚುವಲ್ ಫಂಡ್‌ಗಳ ಎಕ್ಸ್‌ಪೆನ್ಸ್ ರೇಷಿಯೊ ಶೇ 1ರ
ಆಸುಪಾಸಿನಲ್ಲಿದ್ದರೆ ಇಟಿಎಫ್‌ಗಳ ಎಕ್ಸ್‌ಪೆನ್ಸ್ ರೇಷಿಯೊ ಶೇ 0.20ರ ಆಸುಪಾಸಿನಲ್ಲಿರುತ್ತದೆ. ಇನ್ನು ಮ್ಯೂಚುವಲ್  ಫಂಡ್‌ಗಳನ್ನು ಷೇರು ಮಾರುಕಟ್ಟೆಯಲ್ಲಿ ಟ್ರೇಡ್ ಮಾಡಲು ಆಗುವುದಿಲ್ಲ.

ಆದರೆ, ಷೇರು ವಹಿವಾಟಿನಷ್ಟೇ ಸಲೀಸಾಗಿ ಸ್ಟಾಕ್ ಮಾರ್ಕೆಟ್‌ನಲ್ಲಿ ಇಟಿಎಫ್‌ಗಳ ಖರೀದಿ– ಮಾರಾಟ ಸಾಧ್ಯವಾಗುತ್ತದೆ. ಮ್ಯೂಚುವಲ್ ಫಂಡ್ ಖರೀದಿಸಿದಾಗ ದಿನದ ಅಂತ್ಯದ ಎನ್‌ಎವಿ (ನೆಟ್ ಅಸೆಟ್ ವ್ಯಾಲ್ಯೂ) ದೊರಕುತ್ತದೆ. ಆದರೆ,
ಇಟಿಎಫ್‌ಗಳಲ್ಲಿ ಖರೀದಿ ಮಾಡಿದ ಸಮಯದ  ಎನ್‌ಎವಿ ಲಭಿಸುತ್ತದೆ. ಅಂದರೆ ಮಾರುಕಟ್ಟೆ ತ್ವರಿತ ಮತ್ತು ಹರಿತ ಏರಿಳಿತದ ಲಾಭ ಪಡೆಯಲು ಇಟಿಎಫ್ ಹೆಚ್ಚು ಅನುಕೂಲ ಮಾಡಿಕೊಡುತ್ತದೆ.

ಇಟಿಎಫ್ ಮಿತಿಗಳು: ಇಟಿಎಫ್ ಇನ್ನೂ ಅಷ್ಟು ಜನಪ್ರಿಯ ಹೂಡಿಕೆ ಆಯ್ಕೆಯಾಗಿಲ್ಲ. ಹಾಗಾಗಿ,
ಇಟಿಎಫ್‌ಗಳಲ್ಲಿ  ನಗದೀಕರಣ (ಲಿಕ್ವಿಡಿಟಿ) ಸಮಸ್ಯೆ ಎದುರಾಗುತ್ತದೆ. ಉದಾಹರಣೆಗೆ ಮಾರುಕಟ್ಟೆ ಯಲ್ಲಿ ಐದು ಮಂದಿ ಇಟಿಎಫ್ ಖರೀದಿದಾರರಿದ್ದು ಇಟಿಎಫ್ ಮಾರಾಟಗಾರರ ಸಂಖ್ಯೆ ಹತ್ತಕ್ಕಿಂತ ಜಾಸ್ತಿ ಇದೆ ಎಂದು ಭಾವಿಸಿ. ಇಂತಹ ಸಂದರ್ಭದಲ್ಲಿ  ಖರೀದಿದಾರರು ಇಲ್ಲದಿದ್ದಾಗ ಇಟಿಎಫ್‌ನಲ್ಲಿ ಹಣ ನಗದೀಕರಣ ಮಾಡಿಕೊಳ್ಳುವುದು ಕಷ್ಟವಾಗುತ್ತದೆ.

ಯಾವಾಗ ಬೇಡಿಕೆ ಕಡಿಮೆ ಮತ್ತು ಪೂರೈಕೆ ಜಾಸ್ತಿ ಇರುವುದೋ ಆಗ ಬೆಲೆ ಇಳಿಕೆಯಾಗುವ ಸಂಭವ ಇರುತ್ತದೆ. ಇಟಿಎಫ್ ವಿಚಾರದಲ್ಲೂ ಇದಾಗುವ ಸಾಧ್ಯತೆ ಇರುತ್ತದೆ. ಹಣ ನಗದೀಕರಣ ಇಟಿಎಫ್‌ಗಳಲ್ಲಿ ಕಾಲಕಾಲಕ್ಕೆ ಸುಧಾರಿಸುತ್ತಾ ಬಂದಿದೆ. ಆದರೆ, ಈಗಲೂ ಅದು ಮ್ಯೂಚುವಲ್ ಫಂಡ್‌ಗಳಷ್ಟು
ಉತ್ತಮವಾಗಿಲ್ಲ.

ಇನ್ನು ಇಟಿಎಫ್‌ನ ಎಕ್ಸ್‌ಪೆನ್ಸ್ ರೇಷಿಯೊ ಮ್ಯೂಚುವಲ್ ಫಂಡ್‌ಗಳಿಗಿಂತ ಕಡಿಮೆ ಇದೆ ಎನ್ನುವುದು ನಿಜ. ಆದರೆ, ಇಟಿಎಫ್ ಹೂಡಿಕೆ ಮಾಡಲು ಕಡ್ಡಾಯವಾಗಿ ಡಿ–ಮ್ಯಾಟ್
ಖಾತೆ ಹೊಂದಿರಬೇಕಾಗುತ್ತದೆ. ಬ್ರೋಕರ್ ಮೂಲಕ ಇಟಿಎಫ್ ಖರೀದಿಸುವ ಕಾರಣದಿಂದ ಬ್ರೋಕರೇಜ್ ಕಮಿಷನ್, ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ ಮತ್ತು ಫ್ಲಾಟ್ ಫಾರಂ ಶುಲ್ಕ ಪಾವತಿಸಬೇಕಾಗಿ ಬರುತ್ತದೆ. ಇದು ವೆಚ್ಚ ಅನುಪಾತದ ಮೇಲೆ ಬರುವ ಹೆಚ್ಚುವರಿ ವೆಚ್ಚ ಎನ್ನುವುದು ನಿಮಗೆ ಗೊತ್ತಿರಲಿ.

ಇಟಿಎಫ್ v/s ಇಂಡೆಕ್ಸ್ ಫಂಡ್ಸ್: ಇಂಡೆಕ್ಸ್ ಫಂಡ್‌ನಲ್ಲಿ ಹೂಡಿಕೆ ಮಾಡಲು ಡಿ- ಮ್ಯಾಟ್ ಖಾತೆ ಕಡ್ಡಾಯವಲ್ಲ. ಆದರೆ, ಇಟಿಎಫ್ ಹೂಡಿಕೆಗೆ ಡಿ-ಮ್ಯಾಟ್ ಬೇಕು. ಇಂಡೆಕ್ಸ್ ಫಂಡ್ ಖರೀದಿಸಿದಾಗ ದಿನದ ಅಂತ್ಯದ ಮಾರುಕಟ್ಟೆ ಮೌಲ್ಯ (ಎನ್‌ಎವಿ) ಸಿಗುತ್ತದೆ. ಆದರೆ, ಇಟಿಎಫ್ ಕೊಳ್ಳುವಾಗ ಮಾರುಕಟ್ಟೆಯಲ್ಲಿ ಆ ಸಮಯದಲ್ಲಿ ಯಾವ ಮೌಲ್ಯವಿತ್ತೋ ಅದು ಲಭಿಸುತ್ತದೆ.

ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ನಗದೀಕರಣ ಸುಲಭ. ಆದರೆ, ಇಟಿಎಫ್‌ಗಳಲ್ಲಿ ಹಣ ನಗದೀಕರಣ ಅಷ್ಟು ಸಲೀಸಲ್ಲ. ಇಂಡೆಕ್ಸ್ ಮ್ಯೂಚುವಲ್ ಫಂಡ್‌ಗಳಲ್ಲಿ ಎಸ್‌ಐಪಿ (ಪ್ರತಿ ತಿಂಗಳು ವ್ಯವಸ್ಥಿತವಾಗಿ ನಿಗದಿತ ಮೊತ್ತ ಹೂಡಿಕೆ) ಸಾಧ್ಯವಿದೆ. ಆದರೆ, ಎಲ್ಲಾ ಬ್ರೋಕರ್‌ಗಳು ಇಟಿಎಫ್‌ನಲ್ಲಿ ಎಸ್‌ಐಪಿ ಮಾಡಲು ಅವಕಾಶ ಕಲ್ಪಿಸುವುದಿಲ್ಲ. ಇಂಡೆಕ್ಸ್ ಫಂಡ್‌ನಲ್ಲಿ ಎಕ್ಸ್‌ಪೆನ್ಸ್ ರೇಷಿಯೊ ಎಷ್ಟಿದೆಯೋ ಅಷ್ಟು ಹೊರೆ ಮಾತ್ರ ಹೂಡಿಕೆದಾರನ ಮೇಲೆ ಬೀಳುತ್ತದೆ. ಆದರೆ, ಇಟಿಎಫ್ ಖರೀದಿಸುವಾಗ ಎಕ್ಸ್‌ಪೆನ್ಸ್ ರೇಷಿಯೊ ಜೊತೆಗೆ ಹೆಚ್ಚುವರಿ ಶುಲ್ಕ ಕೊಡಬೇಕಾಗುತ್ತದೆ.

ಇಟಿಎಫ್ ಖರೀದಿ ಹೇಗೆ?: ಷೇರು ಖರೀದಿ ಮಾಡುವ ಮಾದರಿಯಲ್ಲೇ ಇಟಿಎಫ್‌ಗಳನ್ನು ಸ್ಟಾಕ್ ಮಾರ್ಕೆಟ್ ಫ್ಲಾಟ್‌ ಫಾರಂಗಳ ಮೂಲಕ ಖರೀದಿಸಬಹುದು. ಇಟಿಎಫ್ ಖರೀದಿಸುವಾಗ ಹೆಚ್ಚು ಜನರು ಕೊಳ್ಳುವ ಇಟಿಎಫ್ ಖರೀದಿಸಿ. ಹೆಚ್ಚು ಜನರು ಖರೀದಿಸಿರುವ ಇಟಿಎಫ್ ಕೊಂಡರೆ ಹಣ ನಗದೀಕರಣ ಸುಲಭವಾಗುತ್ತದೆ. ಎಷ್ಟು ಮಂದಿ ನಿರ್ದಿಷ್ಟ ಇಟಿಎಫ್‌ನಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನುವ ಮಾಹಿತಿ ಎನ್‌ಎಸ್‌ಇ (ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ) ವೆಬ್‌ಸೈಟ್‌ನಲ್ಲಿ ಸಿಗುತ್ತದೆ.

ಕಿವಿಮಾತು: ಇಟಿಎಫ್ ಮತ್ತು ಮ್ಯೂಚುವಲ್ ಫಂಡ್ ಈ ಎರಡೂ ಹೂಡಿಕೆ ಮಾದರಿಗಳಲ್ಲೂ ಸಾಧಕ- ಬಾಧಕಗಳಿವೆ. ಹೂಡಿಕೆ ಮಾಡುವ ಮುನ್ನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಮುಂದುವರಿಯಿರಿ. ಈ ಎರಡೂ ಹೂಡಿಕೆಗಳು ಬೆಲೆ ಏರಿಕೆ ಮೀರಿ ಹೂಡಿಕೆದಾರನಿಗೆ ಗಳಿಕೆ ತಂದುಕೊಡಬಲ್ಲ ಸಾಮರ್ಥ್ಯ ಹೊಂದಿವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸತತ ಎರಡನೇ ವಾರವೂ ಜಿಗಿದ ಷೇರುಪೇಟೆ

ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರ ಗಳಿಕೆ ಕಂಡಿವೆ. ನವೆಂಬರ್ 29ಕ್ಕೆ ಕೊನೆಕೊಂಡ ವಾರದಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಉತ್ತಮ ಗಳಿಕೆ ಕಂಡಿವೆ. 79,802 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.87ರಷ್ಟು ಗಳಿಸಿ ಕೊಂಡಿದೆ. 24,131 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 0.94ರಷ್ಟು ಜಿಗಿದಿದೆ.

ಇನ್ನು ನಿಫ್ಟಿ ಮಿಡ್ ಕ್ಯಾಪ್ ಸೂಚ್ಯಂಕ ವಾರದ ಸಮಯದಲ್ಲಿ ಶೇ 2.5ರಷ್ಟು ಗಳಿಸಿಕೊಂಡಿದ್ದರೆ, ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 5ರಷ್ಟು ಹೆಚ್ಚಳ ದಾಖಲಿಸಿದೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಧ್ಯಮ ಶೇ 5.51, ಸರ್ಕಾರಿ ಸ್ವಾಮ್ಯದ ಬ್ಯಾಂಕ್
ಶೇ 4.7, ಅನಿಲ ಮತ್ತು ತೈಲ ಶೇ 4, ಎನರ್ಜಿ ಶೇ 2.62, ಲೋಹ ಶೇ 2.12, ಬ್ಯಾಂಕ್ ಶೇ 1.8, ಎಫ್‌ಎಂಸಿಜಿ ಶೇ 1.73, ಫೈನಾನ್ಸ್ ಶೇ 1.64, ರಿಯಲ್ ಎಸ್ಟೇಟ್ ಶೇ 1.38 ಮತ್ತು ಫಾರ್ಮಾ
ಶೇ 1.27ರಷ್ಟು ಏರಿಕೆ ಕಂಡಿದೆ. ನಿಫ್ಟಿ ಆಟೊ ವಲಯ ಶೇ 0.79 ಮತ್ತು ಮಾಹಿತಿ ತಂತ್ರಜ್ಞಾನ ವಲಯ ಶೇ 0.43ರಷ್ಟು ಕುಸಿದಿದೆ.

ಇಳಿಕೆ–ಗಳಿಕೆ: ಬಜಾಜ್ ಆಟೊ ಶೇ 4.77, ಎಚ್‌ಡಿಎಫ್‌ಸಿ ಲೈಫ್ ಶೇ 4.29, ಐಷರ್ ಮೋಟರ್ಸ್ ಶೇ 3.07, ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಶೇ 3.06, ಎಚ್‌ಸಿಎಲ್ ಟೆಕ್ನಾಲಜೀಸ್
ಶೇ 2.47, ಇನ್ಫೊಸಿಸ್ ಶೇ 2.34, ಪವರ್ ಗ್ರಿಡ್ ಶೇ 2.31, ಟೈಟನ್ ಶೇ 1.8, ಟೆಕ್ ಮಹೀಂದ್ರ ಶೇ 1.78, ಬಜಾಜ್ ಫೈನಾನ್ಸ್ ಶೇ 1.62, ಮಹೀಂದ್ರ ಆ್ಯಂಡ್‌ ಮಹೀಂದ್ರ ಶೇ 1.64ರಷ್ಟು ಕುಸಿದಿವೆ.

ಅದಾನಿ ಎಂಟರ್ ಪ್ರೈಸಸ್ ಶೇ 10.43, ಭಾರತ್ ಎಲೆಕ್ಟ್ರಾನಿಕ್ಸ್ ಶೇ 9.63, ಒಎನ್‌ಜಿಸಿ ಶೇ 4.71, ಅದಾನಿ ಪೋರ್ಟ್ಸ್ ಶೇ 4.46, ಏರ್‌ಟೆಲ್ ಶೇ 3.65, ಎಲ್ ಆ್ಯಂಡ್‌ ಟಿ ಶೇ 3.37, ಎಚ್‌ಡಿಎಫ್‌ಸಿ ಬ್ಯಾಂಕ್
ಶೇ 2.96, ಸಿಪ್ಲಾ ಶೇ 2.93, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 2.73 ಹಾಗೂ ಬಿಪಿಸಿಎಲ್ ಶೇ 2.27ರಷ್ಟು ಗಳಿಸಿಕೊಂಡಿವೆ.

ಮುನ್ನೋಟ: ಡಿಸೆಂಬರ್‌ 4ರಿಂದ ಆರಂಭವಾಗಲಿರುವ ಆರ್‌ಬಿಐ ಹಣಕಾಸು ಸಮಿತಿ ಸಭೆಯು ರೆಪೊ ದರದ ಬಗ್ಗೆ ಯಾವ ನಿರ್ಣಯ ತೆಗೆದುಕೊಳ್ಳಲಿದೆ ಎಂಬ ಕುತೂಹಲ ಹೂಡಿಕೆದಾರರಿಗೆ ಇದೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿವೆ.

(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.