ADVERTISEMENT

ಬಂಡವಾಳ ಮಾರುಕಟ್ಟೆ | ಗೃಹ ಸಾಲ: ಅವಧಿ ವಿಮೆ ಕಡ್ಡಾಯವೇ?

ಕಾವ್ಯ ಡಿ.
Published 6 ಅಕ್ಟೋಬರ್ 2025, 0:13 IST
Last Updated 6 ಅಕ್ಟೋಬರ್ 2025, 0:13 IST
<div class="paragraphs"><p>ಗೃಹ ಸಾಲ</p></div>

ಗೃಹ ಸಾಲ

   

ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಕೆಲವು ಬ್ಯಾಂಕ್‌ನವರು ಅವರಿಂದಲೇ ಕಡ್ಡಾಯವಾಗಿ ಅವಧಿ ವಿಮೆ (ಟರ್ಮ್ ಇನ್ಶೂರೆನ್ಸ್) ಖರೀದಿಸುವಂತೆ ಹೇಳುತ್ತಾರೆ. ಆದರೆ ಗೃಹಸಾಲ ಪಡೆಯಬೇಕಾದರೆ ಅವಧಿ ವಿಮೆ ಇರಲೇಬೇಕೇ? ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ನಿಯಮ ಈ ಬಗ್ಗೆ ಹೇಳುವುದೇನು? ಗೃಹಸಾಲ ಪಡೆಯುವಾಗ ಅವಧಿ ವಿಮೆ ಇಲ್ಲದಿದ್ದರೆ ಸಾಲದ ಅರ್ಜಿಯನ್ನು ತಿರಸ್ಕರಿಸುವ ಹಕ್ಕು ಬ್ಯಾಂಕ್‌ಗಳಿಗೆ ಇದೆಯೇ? ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಆರ್‌ಬಿಐ ನಿಯಮ ಏನು?: ಗೃಹಸಾಲ ತೆಗೆದುಕೊಳ್ಳುವವರು ಅವಧಿ ವಿಮೆಯನ್ನು ಖರೀದಿಸಲೇಬೇಕು ಎಂದು ಆರ್‌ಬಿಐ ಎಲ್ಲೂ ಹೇಳುವುದಿಲ್ಲ ಅಥವಾ ಅಂತಹ ನಿಯಮ ಇಲ್ಲ. ವಾಸ್ತವದಲ್ಲಿ ಗೃಹಸಾಲಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ವಿಮೆಯನ್ನೂ ಒಟ್ಟುಗೂಡಿಸಿ ಸಾಲ ಕೊಡುವ ಬ್ಯಾಂಕ್‌ಗಳ ಧೋರಣೆ ಸರಿಯಲ್ಲ ಎಂದು ಆರ್‌ಬಿಐ ಹೇಳಿದೆ. ಆ ಪ್ರಕಾರ ಬ್ಯಾಂಕ್‌ಗಳು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಗ್ರಾಹಕರಿಗೆ ನಿರ್ದಿಷ್ಟ ಕಂಪನಿಯ ವಿಮೆ ಅಥವಾ ಇನ್ಯಾವುದೇ ಹೂಡಿಕೆ ಉತ್ಪನ್ನ ಖರೀದಿಸುವಂತೆ ಒತ್ತಾಯಿಸುವಂತಿಲ್ಲ.

ADVERTISEMENT

ಬ್ಯಾಂಕ್‌ಗಳ ಆಂತರಿಕ ನಿಯಮವೇ?: ಗೃಹಸಾಲ ಪಡೆಯುವವರು ಕಡ್ಡಾಯವಾಗಿ ಅವಧಿ ವಿಮೆ ಖರೀದಿಸಬೇಕು ಎಂದು ಯಾವುದೇ ಬ್ಯಾಂಕ್ ಆಂತರಿಕ ನಿಯಮ ಮಾಡುವಂತಿಲ್ಲ. ಒಂದೊಮ್ಮೆ ಯಾವುದಾದರೂ ಬ್ಯಾಂಕ್ ಪ್ರತಿನಿಧಿ ಇಂಥದ್ದೊಂದು ಆಂತರಿಕ ನಿಯಮವಿದೆ ಎಂದು ಹೇಳಿದರೆ ಅದು ಕಾನೂನು ಬಾಹಿರ. ಉದಾಹರಣೆಗೆ ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನ (ಎಸ್‌ಬಿಐ) ಸಾಲಕ್ಕೆ ಸಂಬಂಧಿಸಿದ ನಿಯಮಗಳಲ್ಲೂ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಗೃಹಸಾಲ ಪಡೆಯುವ ವ್ಯಕ್ತಿ ಅವಧಿ ವಿಮೆ ಖರೀದಿಸುವುದು ಅವರ ಆಯ್ಕೆಗೆ ಬಿಟ್ಟದ್ದು, ಅದು ಕಡ್ಡಾಯವಲ್ಲ ಎಂಬ ಮಾಹಿತಿ ಅದರಲ್ಲಿದೆ. ಅಂದರೆ ಅವಧಿ ವಿಮೆ ಕೊಳ್ಳದಿದ್ದರೆ ಸಾಲ ಕೊಡುವುದಿಲ್ಲ ಎಂದು ಬ್ಯಾಂಕ್‌ಗಳು ಗ್ರಾಹಕನಿಗೆ ಒತ್ತಡ ಹೇರುವಂತಿಲ್ಲ.

ಏಕೆ ಒತ್ತಾಯ?: ಗೃಹಸಾಲದ ಜೊತೆ ತೆಗೆದುಕೊಳ್ಳುವ ಅವಧಿ ವಿಮೆ ಪಾಲಿಸಿಗಳಿಂದ ಬ್ಯಾಂಕ್‌ಗಳಿಗೆ ಲಾಭವಿದೆ. ಅವಧಿ ವಿಮೆ ಪಡೆದಾಗ ಪ್ರತಿ ವರ್ಷ ಕಂತು (ಪ್ರೀಮಿಯಂ) ಪಾವತಿಸುತ್ತಾ ಹೋಗುತ್ತೇವೆ. ಆದರೆ ಗೃಹ ಸಾಲದ ಜೊತೆಗೆ ಅವಧಿ ವಿಮೆ ಪಡೆಯುವಾಗ ಒಂದೇ ಬಾರಿಗೆ ದೊಡ್ಡ ಕಂತಿನ ಮೊತ್ತವನ್ನು ಬ್ಯಾಂಕ್‌ಗಳು ಪಡೆದುಕೊಳ್ಳುತ್ತವೆ. ಉದಾಹರಣೆಗೆ 35 ವರ್ಷ ವಯಸ್ಸಿನ ವ್ಯಕ್ತಿ ₹50 ಲಕ್ಷ ಮೊತ್ತದ ಗೃಹ ಸಾಲವನ್ನು 10 ವರ್ಷಗಳ ಅವಧಿಗೆ ಪಡೆದರೆ ಅದಕ್ಕೆ ಸುಮಾರು ₹1.5 ಲಕ್ಷದಿಂದ ₹2.5 ಲಕ್ಷದವರೆಗೆ ಅವಧಿ ವಿಮೆ ಕಂತನ್ನು  ನಿಗದಿಪಡಿಸಲಾಗುತ್ತದೆ. ಬ್ಯಾಂಕ್‌ಗಳು ಇಂತಹ ಅವಧಿ ವಿಮೆಯನ್ನು ಮಾರಾಟ ಮಾಡುವುದರಿಂದ ಕಮಿಷನ್ ಪಡೆಯುವ ಕಾರಣ ಅವಧಿ ವಿಮೆ ಕಡ್ಡಾಯವಲ್ಲದಿದ್ದರೂ ಅದನ್ನು ಕೊಳ್ಳುವಂತೆ ಗ್ರಾಹಕರ ಮೇಲೆ ಒತ್ತಡ ಹೇರುತ್ತವೆ.

ಇದು ಅಗತ್ಯವಿಲ್ಲವೇ?: ಖಂಡಿತವಾಗಿಯೂ ಗೃಹ ಸಾಲ ಪಡೆಯುವವರಿಗೆ ಅವಧಿ ವಿಮೆ ಒಂದು ರೀತಿಯ ಆಪ್ತರಕ್ಷಕ. ಸಾಲ ಪಡೆದ ವ್ಯಕ್ತಿಯ ಜೀವಕ್ಕೆ ಏನಾದರೂ ತೊಂದರೆ ಆದರೆ ಅವಧಿ ವಿಮೆಯಿಂದ ಸಿಗುವ ದೊಡ್ಡ ಮೊತ್ತ ಬಳಸಿ ಗೃಹ ಸಾಲದ ಬಾಕಿ ಬಾಬ್ತನ್ನು ತೀರಿಸಬಹುದು. ಆದರೆ ಬ್ಯಾಂಕ್‌ಗಳು ಗೃಹ ಸಾಲದ ಜೊತೆಗೆ ಕೊಡುವ ಅವಧಿ ವಿಮೆ ಪಾಲಿಸಿಗಳು ಗ್ರಾಹಕನ ಅನುಕೂಲಕ್ಕೆ ತಕ್ಕಂತೆ ಇರುವುದಿಲ್ಲ. ಬ್ಯಾಂಕ್‌ಗಳು ಸಾಲದ ಜೊತೆಗೂಡಿಸಿ ಕೊಡುವ ಪಾಲಿಸಿಗಳಿಗೆ ಒಂದೇ ಬಾರಿಗೆ ದೊಡ್ಡ ಕಂತು ಕಟ್ಟಬೇಕಾಗುತ್ತದೆ. ಜೊತೆಗೆ ಕವರೇಜ್ ಮೊತ್ತ, ಕವರೇಜ್ ಅವಧಿ, ಅಥವಾ ಹೆಚ್ಚುವರಿ ಕವರೇಜ್‌ಗಳನ್ನು ನಿಗದಿ ಮಾಡಿಕೊಳ್ಳಲು ಗ್ರಾಹಕರಿಗೆ ಅವಕಾಶ ಇರುವುದಿಲ್ಲ. ಗ್ರಾಹಕರ ಒಟ್ಟು ಹಣಕಾಸಿನ ಸ್ಥಿತಿ ಅವಲೋಕಿಸಿ ಬ್ಯಾಂಕ್‌ಗಳು ಈ ಪಾಲಿಸಿ ನೀಡಿರುವುದಿಲ್ಲ. ಗೃಹ ಸಾಲದ ಜೊತೆಗೆ ಬ್ಯಾಂಕ್‌ಗಳು ನೀಡುವ ಪಾಲಿಸಿ ಪಡೆಯುವ ಬದಲು ಗ್ರಾಹಕರು ತಮ್ಮ ಆದಾಯ, ಆರ್ಥಿಕ ಸ್ಥಿತಿ ಲೆಕ್ಕಾಚಾರ ಮಾಡಿ ಪ್ರತ್ಯೇಕ ಅವಧಿ ವಿಮೆ ಖರೀದಿಸಬಹುದು.

ಹೀಗೆ ಮಾಡಿದಾಗ ಗೃಹ ಸಾಲ ಮರುಪಾವತಿಯ ನಂತರವೂ ವಿಮೆಯ ರಕ್ಷೆ ಉಳಿಸಿಕೊಳ್ಳಲು ಆಗುತ್ತದೆ. ಪ್ರತ್ಯೇಕವಾಗಿ ಪಡೆಯುವ ಅವಧಿ ವಿಮೆ ಪಾಲಿಸಿಗಳಲ್ಲಿ ಕಂತು ಕಡಿಮೆ ಇರುವ ಜೊತೆಗೆ ಅನುಕೂಲಗಳು ಸಹ ಹೆಚ್ಚಿಗೆ ಇರುತ್ತವೆ.

ಅವಧಿ ವಿಮೆ ಖರೀದಿಸಲೇಬೇಕು ಅಂದರೆ?: ಗೃಹ ಸಾಲದ ಜೊತೆಗೆ ಕಡ್ಡಾಯವಾಗಿ ಅವಧಿ ವಿಮೆ ಪಾಲಿಸಿ ಖರೀದಿಸಬೇಕು ಎಂದು ಬ್ಯಾಂಕ್‌ನ ಪ್ರತಿನಿಧಿ ಹೇಳಿದರೆ ಅದಕ್ಕೆ ಆರ್‌ಬಿಐನ ಸೂಕ್ತ ದಾಖಲೆ ನೀಡುವಂತೆ ಕೇಳಿ. ಬ್ಯಾಂಕ್‌ನ ಲೆಟರ್ ಹೆಡ್‌ನಲ್ಲಿ ‘ಅವಧಿ ವಿಮೆ ಕೊಳ್ಳದಿದ್ದರೆ ನಿಮ್ಮ ಗೃಹಸಾಲವನ್ನು ತಡೆಹಿಡಿಯುತ್ತೇವೆ’ ಎಂದು ವಿವರಿಸಿ ಬರೆದುಕೊಡುವಂತೆ ತಿಳಿಸಿ. ಈ ವಿಚಾರವನ್ನು ಬ್ಯಾಂಕ್‌ನ ವ್ಯವಸ್ಥಾಪಕರು ಮತ್ತು ನೋಡಲ್ ಅಧಿಕಾರಿಗೆ ಹೇಳಿ. ಬ್ಯಾಂಕ್‌ನ ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿದ್ದರೆ ಆರ್‌ಬಿಐ ಒಂಬುಡ್ಸ್‌ಮನ್‌ಗೆ ದೂರು ನೀಡಿ. ಆರ್‌ಬಿಐ ಸಿಎಂಎಸ್‌ ಪೋರ್ಟಲ್‌ನಲ್ಲಿ ನಿಯಮ 8(1)(m)ರ ಅಡಿಯಲ್ಲಿ ‘sale of third-party products in violation of guidelines’ ಎಂದು ದೂರು ನೀಡಿ. ಇದಕ್ಕೆಲ್ಲಾ ಒಂದಷ್ಟು ಸಮಯ ಬೇಕಾಗುತ್ತದೆ ಎನ್ನುವುದು ಗೊತ್ತಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.