ADVERTISEMENT

ಕೋವಿಡ್ -19: ವಿಮೆ ಕ್ಲೇಮ್ ಹೇಗೆ?

ಅವಿನಾಶ್ ಕೆ.ಟಿ
Published 26 ಜುಲೈ 2020, 21:41 IST
Last Updated 26 ಜುಲೈ 2020, 21:41 IST
ಅವಿನಾಶ್ ಕೆ.ಟಿ.
ಅವಿನಾಶ್ ಕೆ.ಟಿ.   

ಆರೋಗ್ಯ ವಿಮೆಯ ಮಹತ್ವವನ್ನು ಕೋವಿಡ್-19 ಮತ್ತೆ ತಿಳಿಸಿಕೊಟ್ಟಿದೆ. ಕೆಲವರು ಕೋವಿಡ್–19 ಬರುವ ಮುನ್ನವೇ ಆರೋಗ್ಯ ವಿಮೆ ಖರೀದಿಸಿದ್ದರೆ, ಒಂದಷ್ಟು ಮಂದಿ ನಂತರದಲ್ಲಿ ವಿಮೆ ಪಡೆದುಕೊಂಡಿದ್ದಾರೆ. ಕೋವಿಡ್–19 ಚಿಕಿತ್ಸೆಗಾಗಿ ‘ಕೊರೊನಾ ಕವಚ್’ ಮತ್ತು ‘ಕೊರೊನಾ ರಕ್ಷಕ್’ ಎಂಬ ಪಾಲಿಸಿಗಳು ಬಂದಿವೆ. ಹೀಗಿದ್ದರೂ, ಅನೇಕರಿಗೆ ಈ ಪಾಲಿಸಿಗಳ ಅಡಿ ಅಗತ್ಯ ಸಂದರ್ಭಗಳಲ್ಲಿ ಕ್ಲೇಮ್ ಸಲ್ಲಿಸುವುದು ಹೇಗೆ ಎನ್ನುವುದು ತಿಳಿದಿಲ್ಲ. ಈ ಹಿನ್ನೆಲೆಯಲ್ಲಿ, ಕೋವಿಡ್–19 ಚಿಕಿತ್ಸೆ ವೇಳೆ ಕ್ಲೇಮ್ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳ ಬಗ್ಗೆ ಮಾಹಿತಿ ಇಲ್ಲಿದೆ.

ಕೋವಿಡ್–19 ಪರೀಕ್ಷೆಯನ್ನು ಪ್ರಮಾಣೀಕೃತ ಸರ್ಕಾರಿ ಲ್ಯಾಬ್‌ಗಳಲ್ಲೇ ಮಾಡಿಸಿ: ಕ್ಲೇಮ್ ಅರ್ಜಿ ಸಲ್ಲಿಸುವಾಗ, ಪ್ರಮಾಣೀಕೃತ ಸರ್ಕಾರಿ ಲ್ಯಾಬ್‌ಗಳಲ್ಲಿ ಕೋವಿಡ್–19 ಪರೀಕ್ಷೆ ಮಾಡಿಸಿದ ವರದಿಯನ್ನು ಒದಗಿಸಬೇಕಾಗುತ್ತದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ (ಐಸಿಎಂಆರ್) ಗುರುತಿಸಲ್ಪಟ್ಟಿರುವ ಲ್ಯಾಬ್‌ಗಳಲ್ಲಿ ಮಾಡಿಸಿದ ಕೋವಿಡ್–19 ಪರೀಕ್ಷೆಯ ವರದಿ ಮಾತ್ರ ಕ್ಲೇಮ್ ಸಂದರ್ಭದಲ್ಲಿ ಮಾನ್ಯವಾಗುತ್ತದೆ. ಕೋವಿಡ್–19 ಪರೀಕ್ಷೆ ಮಾಡಿಸುವಂತೆ ವೈದ್ಯರು ನೀಡಿರುವ ಚೀಟಿಯನ್ನೂ (ಪ್ರಿಸ್ಕ್ರಿಪ್ಷನ್ ) ನೀಡಬೇಕಾಗುತ್ತದೆ.

ಯಾವ ರೀತಿಯ ಚಿಕಿತ್ಸೆಗೆ ಕ್ಲೇಮ್ ಸಿಗುತ್ತದೆ ಎನ್ನುವುದು ಗೊತ್ತಿರಲಿ: ರೋಗಿ ಮನೆಯಲ್ಲಿ ಇದ್ದುಕೊಂಡೇ ಕೋವಿಡ್‌–19 ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳಲು ಕೆಲವು ಖಾಸಗಿ ಆಸ್ಪತ್ರೆಗಳು ಅವಕಾಶ ಕಲ್ಪಿಸುತ್ತವೆ. ಈ ರೀತಿಯ ಚಿಕಿತ್ಸೆಯನ್ನು ನಿಮ್ಮ ಕುಟುಂಬದವರಿಗೆ ವೈದ್ಯರೇ ಶಿಫಾರಸು ಮಾಡಿದರೆ ಮನೆಯಲ್ಲಿನ ಚಿಕಿತ್ಸೆಗೆ ವಿಮಾ ಕ್ಲೇಮ್ ಸಿಗುವ ಬಗ್ಗೆ ಕಂಪನಿ ಕಡೆಯಿಂದ ಖಚಿತಪಡಿಸಿಕೊಳ್ಳಿ. ಸಾಮಾನ್ಯವಾಗಿ ಪರಿಹಾರ ಧನ ನೀಡುವ ವಿಮಾ ಪಾಲಿಸಿಗಳು, ಆಸ್ಪತ್ರೆ ವೆಚ್ಚಗಳು ಮತ್ತು ಪಟ್ಟಿ ಮಾಡಿರುವ ದಿನವಹಿ ವೆಚ್ಚಗಳನ್ನು ಪರಿಗಣಿಸುತ್ತವೆ. ಹಾಗಾಗಿ ಕೋವಿಡ್–19ಕ್ಕೆ ಚಿಕಿತ್ಸೆ ಪಡೆಯುತ್ತಿರುವಾಗ ಅದು ಮನೆಯಲ್ಲಿ ಇದ್ದುಕೊಂಡು ಪಡೆಯುತ್ತಿರುವ ಚಿಕಿತ್ಸೆಯೋ ಅಥವಾ ಆಸ್ಪತ್ರೆಗೆ ದಾಖಲಾಗಿ ಪಡೆಯುತ್ತಿರುವ ಚಿಕಿತ್ಸೆಯೋ ಎನ್ನುವುದನ್ನು ವಿಮಾ ಕಂಪನಿಗೆ ತಿಳಿಸಬೇಕು. ಇದರಿಂದ ಕ್ಲೇಮ್ ವೇಳೆ ಉಂಟಾಗುವ ಗೊಂದಲ ತಪ್ಪಿಸಬಹುದು.

ADVERTISEMENT

ವೆಚ್ಚಗಳ ಬಗ್ಗೆ ಮಾಹಿತಿ ಇರಲಿ, ದಾಖಲೆಗಳನ್ನು ಇಟ್ಟುಕೊಳ್ಳಿ: ಬಹುತೇಕ ಪಾಲಿಸಿಗಳು ಚಿಕಿತ್ಸೆಯ ಮೊದಲಿನ ಮತ್ತು ಚಿಕಿತ್ಸೆಯ ನಂತರದ ವೆಚ್ಚಗಳನ್ನು ಪರಿಗಣಿಸುತ್ತವೆ. ಪಾಲಿಸಿಯ ಪ್ರಕಾರ ನೀವು ಆ್ಯಂಬುಲೆನ್ಸ್ ವೆಚ್ಚ, ಐಸಿಯು (ತೀವ್ರ ನಿಗಾ ಘಟಕ) ವೆಚ್ಚ ಹಾಗೂ ಇನ್ನಿತರ ಚಿಕಿತ್ಸಾ ವೆಚ್ಚಗಳಿಗೆ ಸೂಕ್ತ ಬಿಲ್‌ಗಳನ್ನು ಒದಗಿಸಬೇಕಾಗುತ್ತದೆ. ಈ ಬಗ್ಗೆ ಇನ್ಶೂರೆನ್ಸ್ ಕಂಪನಿಯಿಂದ ಸರಿಯಾದ ಮಾಹಿತಿ ಪಡೆದು ಪೂರಕ ದಾಖಲೆಗಳನ್ನು ಇಟ್ಟುಕೊಳ್ಳಿ.

ಡಿಸ್ಚಾರ್ಜ್ ವಿವರ ಇಟ್ಟುಕೊಳ್ಳಿ: ಇತ್ತೀಚಿನ ದಿನಗಳಲ್ಲಿ ಜನರು ಸಾಮಾನ್ಯ ಆರೋಗ್ಯ ವಿಮೆಯ ಜತೆಗೆ ಕೋವಿಡ್–19 ಕಾಯಿಲೆಯ ಚಿಕಿತ್ಸೆಗೆ ಸಂಬಂಧಿಸಿದ ‘ಕೊರೊನಾ ಕವಚ್’ ಮತ್ತು ‘ಕೊರೊನಾ ರಕ್ಷಕ್’ ಎಂಬ ಪಾಲಿಸಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈ ರೀತಿಯ ಪಾಲಿಸಿಗಳು ಇರುವಾಗ ಪಾಲಿಸಿದಾರ ಒಂದಕ್ಕಿಂತ ಹೆಚ್ಚು ಕ್ಲೇಮ್‌ಗಳನ್ನು ಮಾಡಲು ಅವಕಾಶವಿದೆ, ಐಸಿಯು ಚಿಕಿತ್ಸೆಗೆ ಹೆಚ್ಚು ಅನುಕೂಲಗಳನ್ನು ಕೊಡುವ ಪಾಲಿಸಿಯನ್ನು ನೀವು ಹೊಂದಿದ್ದರೆ ಡಿಸ್ಚಾರ್ಜ್ ವಿವರದಲ್ಲಿ ಐಸಿಯುನಲ್ಲಿ ಮತ್ತು ಸಾಮಾನ್ಯ ವಾರ್ಡ್‌ನಲ್ಲಿ ಎಷ್ಟೆಷ್ಟು ದಿನ ಚಿಕಿತ್ಸೆ ನೀಡಲಾಗಿದೆ ಎನ್ನುವ ವಿವರವನ್ನು ಬರೆಯುವಂತೆ ಹೇಳಬೇಕು. ನೀವು ಸಾಮಾನ್ಯ ಆರೋಗ್ಯ ವಿಮೆ ಅಥವಾ ಕೋವಿಡ್–19ಕ್ಕೆ ಚಿಕಿತ್ಸೆಗೆ ಸಂಬಂಧಿಸಿದ ಪಾಲಿಸಿ ಹೊಂದಿದ್ದು ಕೊರೊನಾ ಪಾಸಿಟಿವ್ ಎಂದಾದರೆ ಕೂಡಲೇ ನಿಮ್ಮ ಇನ್ಶೂರೆನ್ಸ್ ಕಂಪನಿಗೆ ತಿಳಿಸಿ. ಈ ರೀತಿ ಮಾಡುವುದರಿಂದ ಕ್ಲೇಮ್ ಸೆಟಲ್ಮೆಂಟ್‌ನಲ್ಲಿ ಗೊಂದಲಗಳಿಗೆ ಅವಕಾಶವಿರುವುದಿಲ್ಲ. ಪ್ರಕ್ರಿಯೆ ಬೇಗ ಪೂರ್ಣಗೊಳ್ಳುತ್ತದೆ.

(ಲೇಖಕ ‘ಇಂಡಿಯನ್ ಮನಿ ಡಾಟ್ ಕಾಂ’ನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.