ADVERTISEMENT

ಬಂಡವಾಳ ಮಾರುಕಟ್ಟೆ: ‘ಸ್ಟಾಕ್ ಬ್ರೋಕರ್’ ಆಯ್ಕೆ ಹೇಗೆ?

ಅವಿನಾಶ್ ಕೆ.ಟಿ
Published 28 ಆಗಸ್ಟ್ 2022, 19:30 IST
Last Updated 28 ಆಗಸ್ಟ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಯಾವ ಸ್ಟಾಕ್ ಬ್ರೋಕರ್ ಆಯ್ಕೆ ಮಾಡಿಕೊಳ್ಳಬೇಕು ಸರ್?’

ಷೇರು ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಹೂಡಿಕೆ ಮಾಡಲು ಮುಂದಾಗುವ ಬಹುತೇಕರು ಕೇಳುವ ಪ್ರಶ್ನೆ ಇದು. ಷೇರುಪೇಟೆಯಲ್ಲಿ ಸಾಮಾನ್ಯವಾಗಿ ಎರಡು ರೀತಿಯ ದಲ್ಲಾಳಿಗಳಿರುತ್ತಾರೆ (ಬ್ರೋಕರ್ಸ್). ಫುಲ್ ಸರ್ವಿಸ್ ಬ್ರೋಕರ್‌ಗಳು ಮತ್ತು ಡಿಸ್ಕೌಂಟ್ ಬ್ರೋಕರ್‌ಗಳು. ಈ ಎರಡೂ ವ್ಯವಸ್ಥೆಗಳು ನಿಮಗೆ ಷೇರು ವಹಿವಾಟಿನಲ್ಲಿ ಸಹಕಾರ ನೀಡುತ್ತವೆ. ಹಾಗಿದ್ದರೆ ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು? ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸೋಣ.

ಸ್ಟಾಕ್ ಬ್ರೋಕರ್ ಪಾತ್ರವೇನು?: ಷೇರು ಹೂಡಿಕೆಗೆ ಸಂಬಂಧಿಸಿದ ಅಗತ್ಯ ಸೇವೆಗಳನ್ನು ಒದಗಿಸುವವರೇ ಷೇರು ದಲ್ಲಾಳಿಗಳು (Stock Brokers). ಷೇರುಪೇಟೆಯಲ್ಲಿ ಸಾಮಾನ್ಯವಾಗಿ ಎರಡು ಬಗೆಯ ದಲ್ಲಾಳಿಗಳಿರುತ್ತಾರೆ. ಫುಲ್ ಸರ್ವಿಸ್ ಬ್ರೋಕರ್‌ಗಳು ಮತ್ತು ಡಿಸ್ಕೌಂಟ್ ಬ್ರೋಕರ್‌ಗಳು. ಷೇರುಪೇಟೆಯಲ್ಲಿ ವ್ಯವಹರಿಸಬೇಕಾದರೆ ಮೊದಲನೆಯದಾಗಿ ಟ್ರೇಡಿಂಗ್ ಮತ್ತು ಡಿ-ಮ್ಯಾಟ್ ಖಾತೆ ಹೊಂದಿರಬೇಕಾಗುತ್ತದೆ. ಈ ಸೇವೆ ಒದಗಿಸುವವರೂ ಸ್ಟಾಕ್ ಬ್ರೋಕರ್‌ಗಳೇ.

ADVERTISEMENT

ಷೇರುಗಳ ಖರೀದಿ ಮತ್ತು ಮಾರಾಟಕ್ಕೆ ಟ್ರೇಡಿಂಗ್ ಅಕೌಂಟ್ ನೆರವಾಗುತ್ತದೆ. ಷೇರುಗಳನ್ನು ಖರೀದಿಸಿದ ಮೇಲೆ ಅವುಗಳನ್ನು ಸುರಕ್ಷಿತವಾಗಿ ಇರಿಸಲು ಒಂದು ಜಾಗ ಬೇಕು, ಅದೇ ಡಿ-ಮ್ಯಾಟ್ ಖಾತೆ. ತಂತ್ರಜ್ಞಾನದ ಸಹಾಯದಿಂದ ವಿದ್ಯುನ್ಮಾನ ರೂಪದಲ್ಲಿ ಷೇರುಗಳನ್ನು ಇಡುವ ವ್ಯವಸ್ಥೆಯೇ ಡಿ- ಮ್ಯಾಟ್. ಟ್ರೇಡಿಂಗ್ ಮತ್ತು ಡಿ-ಮ್ಯಾಟ್ ಖಾತೆ ಪಡೆದ ಮೇಲೆ ಷೇರು ವಹಿವಾಟು ನೆಡಸಲು ಟ್ರೇಡಿಂಗ್ ಟರ್ಮಿನಲ್ ಅಗತ್ಯ. ವೆಬ್‌ಸೈಟ್ ಮೂಲಕ ಅಥವಾ ಆ್ಯಪ್‌ಗಳ ಸಹಾಯದಿಂದ ಟರ್ಮಿನಲ್ ವ್ಯವಸ್ಥೆಯನ್ನು ಬ್ರೋಕರ್‌ಗಳು ಒದಗಿಸುತ್ತಾರೆ. ಇದರ ನೆರವಿನಿಂದ ಮಾರುಕಟ್ಟೆಯಲ್ಲಿ ಏನಾಗುತ್ತಿದೆ ಎಂದು ತಿಳಿದು ಷೇರುಗಳ ಖರೀದಿ ಮತ್ತು ಮಾರಾಟ ಮಾಡಬಹುದು.

ಫುಲ್ ಸರ್ವಿಸ್ ಬ್ರೋಕರ್ ಅಂದರೆ ಷೇರು ಮಾರುಕಟ್ಟೆ ವಹಿವಾಟಿಗೆ ಸಂಬಂಧಿಸಿದ ಸಮಗ್ರ ಸೇವೆ ಒದಗಿಸುವ ದಲ್ಲಾಳಿ ಸಂಸ್ಥೆ. ಡಿಮ್ಯಾಟ್, ಟ್ರೇಡಿಂಗ್ ಅಕೌಂಟ್ ಒದಗಿಸುವ ಜತೆಗೆ ಷೇರುಗಳ ಖರೀದಿ ಮತ್ತು ಮಾರಾಟಕ್ಕೆ ಸಲಹೆ ನೀಡಲು ಇಲ್ಲಿ ಹಣಕಾಸು ನಿರ್ವಹಣೆ ಪರಿಣಿತರ ಸಹಕಾರ ಸಿಗುತ್ತದೆ. ಮೊಬೈಲ್ ಕರೆ ಮಾಡಿ ಯಾವ ಷೇರು ಖರೀದಿಸಬೇಕು ಯಾವುದನ್ನು ಮಾರಾಟ ಮಾಡಬೇಕು ಎಂದು ನಿರ್ಣಯ ತೆಗೆದುಕೊಳ್ಳಲು ಅವಕಾಶವಿರುತ್ತದೆ. ಷೇರು ಹೂಡಿಕೆಗೆ ಸಂಬಂಧಿಸಿದಂತೆ ಪ್ರತಿದಿನ ಸಲಹೆ ಸೂಚನೆಗಳು, ಮ್ಯೂಚುವಲ್ ಫಂಡ್, ಐಪಿಒ ಹೂಡಿಕೆ, ವಿಮೆ, ಸಾಲ ಮತ್ತಿತರ ಸೇವೆಗಳನ್ನು ಫುಲ್ ಸರ್ವಿಸ್‌ ಬ್ರೋಕರ್‌ಗಳು ಒದಗಿಸುತ್ತಾರೆ.

ದೇಶದ ನಾನಾ ಭಾಗಗಳಲ್ಲಿ ಇವರ ಕಚೇರಿಗಳಿರುತ್ತವೆ. ಫುಲ್ ಸರ್ವಿಸ್ ಬ್ರೋಕರ್ ಸೇವೆಯಲ್ಲಿ ನಿರ್ವಹಣಾ ವೆಚ್ಚ ಹೆಚ್ಚಿಗೆ ಇರುವ ಕಾರಣ ಹೂಡಿಕೆದಾರರು ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ಎಸ್‌ಬಿಐ ಸೆಕ್ಯೂರಿಟಿಸ್, ಎಚ್‌ಡಿಎಫ್‌ಸಿ ಸೆಕ್ಯೂರಿಟಿಸ್, ಕೋಟಕ್ ಸೆಕ್ಯೂರಿಟಿಸ್, ಮೋತಿಲಾಲ್ ಓಸ್ವಾಲ್, ಐಸಿಐಸಿಐ ಡೈರೆಕ್ಟ್ ಮುಂತಾದವು ಫುಲ್ ಸರ್ವಿಸ್ ಬ್ರೋಕರ್‌ಗಳಿಗೆ ಕೆಲವು ಉದಾಹರಣೆಗಳು.

ಫುಲ್ ಸರ್ವಿಸ್ ಬ್ರೋಕರ್ ಶುಲ್ಕ: ನೋಂದಣಿ ಶುಲ್ಕ ₹ 300ರಿಂದ ₹ 500ರವರೆಗೆ ಇರುತ್ತದೆ. ಬ್ರೋಕರೇಜ್ ಶುಲ್ಕ ಸಾಮಾನ್ಯವಾಗಿ ಶೇಕಡ 0.3ರಿಂದ ಶೇ 0.5ರವರೆಗೆ ಇರುತ್ತದೆ. ಉದಾಹರಣೆಗೆ, ₹ 5 ಸಾವಿರದ ವಹಿವಾಟು ನಡೆಸುತ್ತಿದ್ದೀರಿ ಹಾಗೂ ಶೇ 0.5ರಷ್ಟು ಶುಲ್ಕ ಪಾವತಿಸಬೇಕು ಎಂದಾದರೆ ನೀವು ₹ 25 ಶುಲ್ಕ ಕೊಡಬೇಕು. ₹ 50 ಸಾವಿರದ ವಹಿವಾಟು ನಡೆಸುತ್ತೀರಿ ಅಂದರೆ ₹ 125 ಶುಲ್ಕ ಪಾವತಿ ಮಾಡಬೇಕು.

ಡಿಸ್ಕೌಂಟ್ ಬ್ರೋಕರ್ಸ್: ಸಾಮಾನ್ಯವಾಗಿ ಡಿಸ್ಕೌಂಟ್ ಬ್ರೋಕರ್‌ಗಳು ಕಡಿಮೆ ದರದ ಷೇರು ವಹಿವಾಟು ಶುಲ್ಕ ಪಡೆಯುತ್ತಾರೆ. ಇವರು ಕೂಡ ಡಿ–ಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಸೇವೆ ಒದಗಿಸುತ್ತಾರೆ. ಆದರೆ ಹಲವೆಡೆ ಕಚೇರಿಗಳನ್ನು ಹೊಂದಿರುವುದಿಲ್ಲ. ತಂತ್ರಜ್ಞಾನದ ಸಹಾಯದಿಂದ ಷೇರು ವಹಿವಾಟಿಗೆ ಸರಳವಾದ ವ್ಯವಸ್ಥೆ ಒದಗಿಸಿರುತ್ತಾರೆ. ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಬಳಸಿ ಷೇರುಗಳ ಖರೀದಿ ಮತ್ತು ಮಾರಾಟ ಮಾಡಬಹುದು. ಮ್ಯೂಚುವಲ್ ಫಂಡ್ ಹೂಡಿಕೆ, ಐಪಿಒ ಹೂಡಿಕೆ, ಷೇರು ವಿಶ್ಲೇಷಣೆ ಮುಂತಾದ ಕೆಲ ಸೇವೆಗಳನ್ನು ಇವರೂ ಒದಗಿಸುತ್ತಾರೆ.

ಆದರೆ ಪರಿಣತರ ನೇರ ಸಲಹೆ, ಅಧ್ಯಯನ ಆಧಾರಿತ ವರದಿಗಳು ಮುಂತಾದ ಸೌಲಭ್ಯಗಳು ಇಲ್ಲಿರುವುದಿಲ್ಲ. ಜಿರೋಧಾ, ಅಪ್‌ಸ್ಟಾಕ್, ಫೈ ಪೈಸೆ, ಗ್ರೋ, ಪೇಟಿಎಂ ಮನಿ ಡಿಸ್ಕೌಟ್ ಬ್ರೋಕರ್‌ಗಳಿಗೆ ಕೆಲವು ಉದಾಹರಣೆಗಳು.

ಡಿಸ್ಕೌಂಟ್ ಬ್ರೋಕರ್ ಶುಲ್ಕಗಳು: ಫುಲ್‌ ಸರ್ವಿಸ್‌ ಬ್ರೋಕರ್‌ಗಳಿಗಿಂತ ಶೇ 60ರಷ್ಟು ಕಡಿಮೆ ಶುಲ್ಕ ಇಲ್ಲಿರುತ್ತದೆ. ಬಹುತೇಕ ಡಿಸ್ಕೌಂಟ್ ಬ್ರೋಕರ್‌ಗಳು ನೋಂದಣಿಗೆ ₹ 300 ಪಡೆಯುತ್ತವೆ. ನಂತರದಲ್ಲಿ ₹ 5 ಸಾವಿರ ಮೊತ್ತದ ವಹಿವಾಟಿರಲಿ ಅಥವಾ ₹ 5 ಲಕ್ಷದ ವಹಿವಾಟಿರಲಿ ಇಂತಹ ಕೆಲವು ಬ್ರೋಕರ್‌ಗಳು ಪ್ರತಿ ವಹಿವಾಟಿಗೆ ಅಂದಾಜು ₹ 20 ಶುಲ್ಕ ಪಡೆಯುತ್ತವೆ. ಕೆಲವು ಡಿಸ್ಕೌಂಟ್ ಬ್ರೋಕರ್‌ಗಳ ಶುಲ್ಕಗಳಲ್ಲಿ, ರೀತಿ ರಿವಾಜುಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರುತ್ತವೆ.

ಅಲ್ಪ ಕುಸಿತ ಕಂಡ ಸೂಚ್ಯಂಕಗಳು
ಐದು ವಾರಗಳಿಂದ ಗಳಿಕೆಯ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಈ ವಾರ ಕೊಂಚ ಕುಸಿತ ಕಂಡಿವೆ. ಆಗಸ್ಟ್ 26ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಕುಸಿದಿವೆ.

58,833 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇಕಡ 1.32ರಷ್ಟು ತಗ್ಗಿದೆ. 17,558 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.12ರಷ್ಟು ಇಳಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಮಿಶ್ರ ಪ್ರತಿಕ್ರಿಯೆ, ಬಡ್ಡಿ ದರದ ವಿಚಾರವಾಗಿ ಫೆಡರಲ್ ರಿಸರ್ವ್‌ನ ಮುಂದಿನ ಹಾದಿ ಏನು ಎನ್ನುವ ಕುತೂಹಲ, ಹಲವು ದೇಶಿ ಬೆಳವಣಿಗೆಗಳು ಸಹ ಕುಸಿತಕ್ಕೆ ಕಾರಣ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಐ.ಟಿ. ವಲಯ ಶೇ 4.5ರಷ್ಟು ಕುಸಿದಿದೆ. ಫಾರ್ಮಾ ವಲಯ ಶೇ 1.7ರಷ್ಟು ಮತ್ತು ಹೆಲ್ತ್‌ಕೇರ್ ಸೂಚ್ಯಂಕ ಶೇ 1ರಷ್ಟು ತಗ್ಗಿವೆ. ಆದರೆ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 4.4ರಷ್ಟು ಗಳಿಸಿಕೊಂಡಿದೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 450.36 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 503.32 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಬಿಎಸ್ಇ ಲಾರ್ಜ್ ಕ್ಯಾಪ್ ಸೂಚ್ಯಂಕ ಶೇ 1ರಷ್ಟು ಕುಸಿದಿದೆ. ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಪಿಬಿ ಫಿನ್‌ಟೆಕ್, ಬರ್ಜರ್ ಪೇಂಟ್ಸ್ ಇಂಡಿಯಾ, ಲುಪಿನ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಇನ್ಫೊಸಿಸ್ ಕುಸಿತ ಕಂಡಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಎನ್ಎಂಡಿಸಿ, ಕೋಲ್ ಇಂಡಿಯಾ ಮತ್ತು ಸ್ಟಾರ್ ಹೆಲ್ತ್ ಆ್ಯಂಡ್ ಅಲೈಡ್ ಇನ್ಶೂರೆನ್ಸ್ ಕಂಪನಿ ಏರಿಕೆ ದಾಖಲಿಸಿವೆ.

ಮುನ್ನೋಟ: ವರದಿಯೊಂದರ ಪ್ರಕಾರ ಭಾರತದ ಮಾರುಕಟ್ಟೆ ಕಳೆದ 10 ತ್ರೈಮಾಸಿಕ ಅವಧಿಗಳಲ್ಲಿ ಇತರ ಅಭಿವೃದ್ಧಿಶೀಲ ದೇಶಗಳ ಮಾರುಕಟ್ಟೆಗಳಿಗಿಂತ ಮುಂದಿದೆ. ಹೀಗಿದ್ದರೂ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಸಕಾರಾತ್ಮಕ ಹಾದಿಯಲ್ಲೇ ಮುನ್ನಡೆಯುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಸದ್ಯ ಸೂಚ್ಯಂಕಗಳು ಕುಸಿತ ಕಂಡಾಗ ಹೂಡಿಕೆದಾರರು ಖರೀದಿಸುವ, ಜಿಗಿತ ಕಂಡಾಗ ಮಾರಾಟ ಮಾಡುವ ಪ್ರವೃತ್ತಿ ಕಂಡುಬರುತ್ತಿದೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.