ADVERTISEMENT

ಷೇರುಪೇಟೆ: ಇದು ಶ್ರೀಮಂತಿಕೆಯ ಮೊದಲನೆಯ ಪಾಠ!

ಅವಿನಾಶ್ ಕೆ.ಟಿ
Published 25 ಏಪ್ರಿಲ್ 2021, 19:30 IST
Last Updated 25 ಏಪ್ರಿಲ್ 2021, 19:30 IST
ಅವಿನಾಶ್ ಕೆ.ಟಿ.
ಅವಿನಾಶ್ ಕೆ.ಟಿ.   

ಶ್ರೀಮಂತರಾಗಬೇಕು ಅಂದರೆ ಅಳೆದು–ತೂಗಿ ಖರ್ಚು ಮಾಡುವುದನ್ನು ಮೊದಲು ಕಲಿಯಬೇಕು. ಅಳತೆ ಇಲ್ಲದೆ ಖರ್ಚು ಮಾಡುವವರು ದೀರ್ಘಾವಧಿಯಲ್ಲಿ ಶ್ರೀಮಂತರಾಗಿ ಉಳಿದ ಉದಾಹರಣೆಗಳಿಲ್ಲ. ಖರ್ಚು ಎಂದಿಗೂ ನಮ್ಮ ಆದಾಯಕ್ಕಿಂತ ಹೆಚ್ಚಿಗೆ ಆಗಬಾರದು. ಪ್ರತಿಯೊಬ್ಬರೂ ಬಂದ ಆದಾಯದಲ್ಲಿ ಉಳಿತಾಯ ಸಾಧಿಸಿ ಹೇಗೆ ಶ್ರೀಮಂತಿಕೆಯತ್ತ ಹೆಜ್ಜೆ ಹಾಕಬಹುದು? ಮುಂದೆ ಓದಿ...

ಶ್ರೀಮಂತ ಎಂದರೆ ಯಾರು?: ಶ್ರೀಮಂತ ಎಂದರೆ ಯಾರು ಎಂಬ ಪ್ರಶ್ನೆಗೆ ಸರಳ ಉತ್ತರ ಹೇಳುವುದಾದರೆ, ಯಾರು ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ ಗಳಿಸುತ್ತಾರೋ ಅವರೇ ಶ್ರೀಮಂತರು. ಒಬ್ಬ ವ್ಯಕ್ತಿ ತನ್ನ ಆಸ್ತಿಯನ್ನು ಬಾಡಿಗೆಗೆ ನೀಡಿ ಸಂಪಾದನೆ ಮಾಡಬಹುದು, ಗಳಿಸಿದ ಹಣವನ್ನು ಬ್ಯಾಂಕ್‌ನಲ್ಲಿ ಇಟ್ಟು ಬಡ್ಡಿ ಪಡೆಯಬಹುದು, ಷೇರುಗಳ ಮೇಲೆ ಹೂಡಿಕೆ ಮಾಡಿ ಲಾಭ ಗಳಿಸಬಹುದು, ಮ್ಯೂಚವಲ್ ಫಂಡ್‌ಗಳಲ್ಲಿ ತೊಡಗಿಸಿ ಲಾಭ ಮಾಡಬಹುದು, ಸೈಟ್ ಅಥವಾ ಜಮೀನು ಖರೀದಿಸಿ ಭವಿಷ್ಯದಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಬಹುದು.

ಆದರೆ ಇಷ್ಟೆಲ್ಲಾ ಆದಾಯ ಮೂಲಗಳಲ್ಲಿ ಹೂಡಿಕೆ ಮಾಡಬೇಕು ಅಂದರೆ, ಗಳಿಸಿದ ಆದಾಯದಲ್ಲಿ ಉಳಿತಾಯ ಮಾಡುವುದನ್ನು ಮೊದಲು ಕಲಿಯಬೇಕು.

ADVERTISEMENT

ಖರ್ಚು ಮಾತ್ರ ನಿಮ್ಮ ಹಿಡಿತದಲ್ಲಿರುತ್ತದೆ!: ನೀವು ಎಷ್ಟು ಆದಾಯ ಗಳಿಸಬಹುದು ಎನ್ನುವುದು ಎಲ್ಲ ಸಂದರ್ಭಗಳಲ್ಲೂ ನಿಮ್ಮ ಹಿಡಿತದಲ್ಲಿ ಇರುವುದಿಲ್ಲ. ಹಲವು ಬಾಹ್ಯ ಸಂಗತಿಗಳು ನಿಮ್ಮ ಆದಾಯದ ಮೇಲೆ ಪರಿಣಾಮ ಬೀರುತ್ತವೆ. ಆದರೆ ಆದಾಯದಲ್ಲಿ ಎಷ್ಟು ಖರ್ಚು ಮಾಡಬೇಕು ಎನ್ನುವುದು ಸದಾ ನಿಮ್ಮ ನಿಯಂತ್ರಣದಲ್ಲಿರುತ್ತದೆ. ಸಾಮಾನ್ಯವಾಗಿ ಖರ್ಚು ಮಾಡಿದ ನಂತರದಲ್ಲಿ ನಾವು ಉಳಿತಾಯ ಮಾಡುವ ಬಗ್ಗೆ ಆಲೋಚನೆ ಮಾಡುತ್ತೇವೆ. ಆದರೆ ಬಂದ ಆದಾಯದಲ್ಲಿ ಮೊದಲು ಉಳಿತಾಯ ಮಾಡಿ, ಹಾಗೆ ಉಳಿದ ಹಣವನ್ನು ಖರ್ಚುಗಳಿಗೆ ಬಳಸಿಕೊಂಡರೆ ಭವಿಷ್ಯದ ಉದ್ದೇಶಗಳಿಗಾಗಿ ನೀವು ಮಾಡಬೇಕಿರುವ ಹೂಡಿಕೆಯ ಹಾದಿ ಸುಗಮವಾಗುತ್ತದೆ.

ಉಳಿತಾಯಕ್ಕೆ ಈ ಸೂತ್ರ ಅನುಸರಿಸಿ: ಎಷ್ಟು ಉಳಿತಾಯ ಮಾಡಬೇಕು, ಎಷ್ಟು ಖರ್ಚು ಮಾಡಬೇಕು ಎನ್ನುವ ಪ್ರಶ್ನೆಗಳಿಗೆ ನಿಮ್ಮ ಆರ್ಥಿಕ ಸ್ಥಿತಿಗತಿ ಆಧರಿಸಿ ಉತ್ತರ ಕಂಡುಕೊಳ್ಳಬೇಕಾಗುತ್ತದೆ. ಆದರೆ ವೈಯಕ್ತಿಕ ಹಣಕಾಸು ನಿರ್ವಹಣೆಯ ಸೂತ್ರಗಳ ಲೆಕ್ಕಾಚಾರದಲ್ಲಿ ಹೇಳುವುದಾದರೆ ನಿಮ್ಮ ಆದಾಯದ ಶೇಕಡ 50ರಷ್ಟು ಹಣವನ್ನು ನಿಮ್ಮ ಅಗತ್ಯಗಳಿಗೆ – ಅಂದರೆ, ದಿನಸಿ, ತರಕಾರಿ, ಪ್ರಯಾಣದ ಖರ್ಚು, ವಿದ್ಯುತ್, ನೀರಿನ ಬಿಲ್ ಇತ್ಯಾದಿಗಳ ಮೇಲೆ – ವ್ಯಯಿಸಬೇಕು.

ಇನ್ನುಳಿದ ಶೇಕಡ 30ರಷ್ಟು ಹಣವನ್ನು ನಿಮ್ಮ ಬಯಕೆಗಳನ್ನು (WANTS) ಈಡೇರಿಸಿಕೊಳ್ಳಲು ಮೀಸಲಿಡಬಹುದು. ಶೇಕಡ 20ರಷ್ಟು ಹಣವನ್ನು ನಿಯಮಿತವಾಗಿ ಉಳಿತಾಯ ಮಾಡಲೇಬೇಕು. ಬಡವರು, ಮಧ್ಯಮ ವರ್ಗದವರು, ಶ್ರೀಮಂತರು ಎನ್ನುವ ಭೇದವಿಲ್ಲದೆ ಎಲ್ಲರೂ ಅನುಸರಿಸಲು ಸಾಧ್ಯವಿರುವ ಸರಳ ನಿಯಮ ಇದು.

ತಿಂಗಳ ಖರ್ಚಿನ ಲೆಕ್ಕಾಚಾರ ಬಹಳ ಮುಖ್ಯ: ಪ್ರತಿ ತಿಂಗಳೂ ಬರುವ ಆದಾಯದಲ್ಲಿ ಎಷ್ಟು ಹಣ ಖರ್ಚು ಮಾಡಬೇಕು ಎನ್ನುವ ಲೆಕ್ಕಾಚಾರ ಬಹಳ ಮುಖ್ಯ. ಅಂದಾಜಿಲ್ಲದೆ ಖರ್ಚು ಮಾಡಿದರೆ ವೆಚ್ಚಗಳು ಹೆಚ್ಚಾಗುತ್ತವೆ. ನೀವು ಹಿಂದೆಂದೂ ತಿಂಗಳ ಖರ್ಚಿನ ಬಜೆಟ್ ಮಾಡಿಲ್ಲ ಎಂದಾದರೆ ಮೊದಲಿಗೆ ಪ್ರತಿ ಖರ್ಚಿನ ಲೆಕ್ಕ ಬರೆಯಲು ಶುರು ಮಾಡಬೇಕು. ಒಂದು ತಿಂಗಳ ಬಳಿಕ ಯಾವುದಕ್ಕೆ ಎಷ್ಟು ಖರ್ಚು ಮಾಡಿದ್ದೀರಾ ಎನ್ನುವುದನ್ನು ಲೆಕ್ಕಾಚಾರ ಮಾಡಿ ನೋಡಬೇಕು. ಮೈಕ್ರೋಸಾಫ್ಟ್ ಎಕ್ಸೆಲ್ ತಂತ್ರಾಂಶ ಬಳಸಿ ನೀವು ಸುಲಭವಾಗಿ ಈ ಅಂದಾಜು ಲೆಕ್ಕ ಮಾಡಬಹುದು. ಉದಾಹರಣೆಗೆ ಚಾಟ್ಸ್ ತಿನ್ನುವುದಕ್ಕೆ, ಮನರಂಜನೆಗೆ ಅತಿಯಾಗಿ ಖರ್ಚು ಮಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ಆ ಖರ್ಚಿನ ಮೇಲೆ ಹಿಡಿತ ಸಾಧಿಸಬೇಕು. ಹೀಗೆ ಮಾಡುವುದರಿಂದ ಕ್ರಮೇಣ ಎಲ್ಲ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬಹುದು.

ನೆನಪಿಟ್ಟುಕೊಳ್ಳಿ
*ಒಳ್ಳೆಯ ಸಂಪಾದನೆ ಇರುವ ಸಂದರ್ಭಗಳಲ್ಲಿ ಕೆಲವರು ಅತಿಯಾಗಿ ಖರ್ಚು ಮಾಡಿ ಬದುಕಿನ ಮುಸ್ಸಂಜೆಯಲ್ಲಿ ಹಣವಿಲ್ಲದೆ ಪರದಾಡುತ್ತಾರೆ. ಇವತ್ತು ಸ್ವಲ್ಪ ಉಳಿತಾಯ ಮಾಡಿದರೆ ನಾವು ಮುಂದೆ ಸುಖವಾಗಿ ಜೀವಿಸಬಹುದು ಎನ್ನುವುದನ್ನು ಅರಿತುಕೊಳ್ಳಬೇಕು.
*ನಿಮ್ಮ ಖರ್ಚುಗಳು ಹೆಚ್ಚಿಗೆ ಇದ್ದು ಅದಕ್ಕೆ ತಕ್ಕಂತಹ ಆದಾಯ ಇದ್ದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ, ಆದಾಯ ಕಡಿಮೆ ಇದ್ದು ಖರ್ಚು ಹೆಚ್ಚುತ್ತ ಹೋದರೆ ನೀವು ಸಾಲದ ಸುಳಿಗೆ ಸಿಲುಕುವುದು ನಿಶ್ಚಿತ.

ಸತತ ಮೂರನೇ ವಾರ ಕುಸಿದ ಷೇರುಪೇಟೆ

ಭಾರತದ ಷೇರುಪೇಟೆ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ಸತತ ಮೂರನೇ ವಾರವೂ ನಕಾರಾತ್ಮಕ ಫಲಿತಾಂಶ ಕೊಟ್ಟಿವೆ. 14,341 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ, ವಾರದ ಅವಧಿಯಲ್ಲಿ ಶೇಕಡ 1.89ರಷ್ಟು ಕುಸಿತ ಕಂಡಿದ್ದರೆ, 47,878 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಶೇ 1.95ರಷ್ಟು ಇಳಿಕೆಯಾಗಿದೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 4,986 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹ 6,224 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಕೋವಿಡ್–19 ಪ್ರಕರಣಗಳಲ್ಲಿ ಭಾರಿ ಹೆಚ್ಚಳವಾಗುತ್ತಿರುವುದರಿಂದ ಷೇರುಪೇಟೆ ಒತ್ತಡಕ್ಕೆ ಸಿಲುಕಿದೆ. ದೇಶದ ವಿವಿಧ ರಾಜ್ಯಗಳಲ್ಲಿನ ಲಾಕ್‌ಡೌನ್ ಕ್ರಮಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಿವೆ. ಜಾಗತಿಕವಾಗಿ ನೋಡುವುದಾದರೆ ಅಮೆರಿಕದಲ್ಲಿ ಬಂಡವಾಳ ವೃದ್ಧಿ ತೆರಿಗೆ ಹೆಚ್ಚಳ ಸಾಧ್ಯತೆ ಹೂಡಿಕೆದಾರರನ್ನು ಮಂಕಾಗಿಸಿದೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ರಿಯಲ್ ಎಸ್ಟೇಟ್ ಶೇ 3.6ರಷ್ಟು ಕುಸಿತ ಕಂಡಿದ್ದರೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 3.5ರಷ್ಟು ಮತ್ತು ನಿಫ್ಟಿ ಎಫ್‌ಎಂಸಿಜಿ ಶೇ 3ರಷ್ಟು ಕುಸಿದಿವೆ. ನಿಫ್ಟಿ ಮಾಧ್ಯಮ ವಲಯ ಶೇ 2.6ರಷ್ಟು ಜಿಗಿದಿದೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಡಾ ರೆಡ್ಡೀಸ್ ಶೇ 4ರಷ್ಟು, ಟಾಟಾ ಸ್ಟೀಲ್ ಶೇ 4ರಷ್ಟು, ಬಿಪಿಸಿಎಲ್ ಶೇ 2ರಷ್ಟು, ಜೆಎಸ್‌ಡಬ್ಲ್ಯೂ ಸ್ಟೀಲ್ ಶೇ 2ರಷ್ಟು, ವಿಪ್ರೋ ಶೇ 2ರಷ್ಟು ಮತ್ತು ಎಸ್‌ಬಿಐ ಲೈಫ್ ಶೇ 1ರಷ್ಟು ಗಳಿಕೆ ಕಂಡಿವೆ. ಅಲ್ಟ್ರಾಟೆಕ್ ಶೇ 11ರಷ್ಟು, ಶ್ರೀ ಸಿಮೆಂಟ್ ಶೇ 9ರಷ್ಟು, ಗ್ರಾಸಿಮ್ ಶೇ 7ರಷ್ಟು, ಹಿಂದೂಸ್ಥಾನ್ ಯುನಿಲಿವರ್ ಶೇ 6ರಷ್ಟು, ಹಿಂಡಾಲ್ಕೋ ಶೇ 6ರಷ್ಟು, ಏಷ್ಯನ್ ಪೇಂಟ್ಸ್ ಶೇ 6ರಷ್ಟು, ಟೆಕ್ ಮಹೀಂದ್ರ ಶೇ 6ರಷ್ಟು ಮತ್ತು ಎಚ್‌ಸಿಎಲ್ ಟೆಕ್ ಶೇ 6ರಷ್ಟು, ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 5ರಷ್ಟು ಮತ್ತು ಟಾಟಾ ಮೋಟರ್ಸ್ ಶೇ 5ರಷ್ಟು ಕುಸಿತ ಕಂಡಿವೆ.

ಮುನ್ನೋಟ: ಸದ್ಯದ ಸ್ಥಿತಿಯಲ್ಲಿ ಕೋವಿಡ್ ಪ್ರಕರಣಗಳು ಮಾರುಕಟ್ಟೆಯ ದಿಕ್ಕು ನಿರ್ಧರಿಸಲಿವೆ. ಫೆಬ್ರುವರಿಯಲ್ಲಿ ಕೋವಿಡ್‌ನಿಂದಾಗಿ ಪ್ರತಿದಿನ ಸುಮಾರು 100 ಮಂದಿ ಸಾವನ್ನಪ್ಪುತ್ತಿದ್ದರು. ಈಗ ಆ ಸಂಖ್ಯೆ 1,800ಕ್ಕೆ ಹೆಚ್ಚಳವಾಗಿದೆ. ತ್ರೈಮಾಸಿಕ ಫಲಿತಾಂಶದ ಆಧಾರದಲ್ಲಿ ಕೆಲ ಷೇರುಗಳ ಬೆಲೆಯಲ್ಲಿ ಏರಿಳಿತವಾಗಬಹುದು.

ಕೋವಿಡ್ ಪ್ರಕರಣಗಳ ಹೆಚ್ಚಳದಿಂದ ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿ ಉಂಟಾಗಿ ಆರ್ಥಿಕ ಚೇತರಿಕೆ ಮತ್ತಷ್ಟು ನಿಧಾನಗತಿಯತ್ತ ಸಾಗುವುದರಿಂದ ಸದ್ಯ ಹೂಡಿಕೆದಾರರು ಎಚ್ಚರಿಕೆಯ ನಡೆ ಕಾಯ್ದುಕೊಳ್ಳಬೇಕಿದೆ. ಕೋವಿಡ್ ಸಮಸ್ಯೆಯ ನಡುವೆಯೂ ಸಿಮೆಂಟ್, ಮಾಹಿತಿ ತಂತ್ರಜ್ಞಾನ, ಲೋಹ, ಫಾರ್ಮಾ, ಮೂಲಸೌಕರ್ಯ ವಲಯಗಳು ಉತ್ತಮ ಸಾಧನೆ ತೋರುವ ಸಾಧ್ಯತೆಯಿದೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.