ADVERTISEMENT

ಎಂ.ಎಫ್‌: ಹೊಸ ಹೂಡಿಕೆಗೆ ಮೂರು ಆಯ್ಕೆ

ಕಾವ್ಯ ಡಿ.
Published 11 ಮಾರ್ಚ್ 2024, 0:24 IST
Last Updated 11 ಮಾರ್ಚ್ 2024, 0:24 IST
<div class="paragraphs"><p> ಹೂಡಿಕೆ </p></div>

ಹೂಡಿಕೆ

   

ಮ್ಯೂಚುಯಲ್‌ ಫಂಡ್ ಹೂಡಿಕೆ ಎಂದಾಕ್ಷಣ ಹತ್ತಾರು ಆಯ್ಕೆಗಳು ಸಿಗುತ್ತವೆ. ದೇಶದಲ್ಲಿ 40ಕ್ಕೂ ಹೆಚ್ಚು ಮ್ಯೂಚುಯಲ್ ಫಂಡ್ ಹೌಸ್‌ಗಳಿವೆ. 37 ವಿಭಾಗಗಳಲ್ಲಿ ಆಯ್ಕೆಗಳಿವೆ. 1,500ಕ್ಕೂ ಹೆಚ್ಚು ಯೋಜನೆಗಳಿವೆ. 2,500 ಉಪ ಯೋಜನೆಗಳಿವೆ. ಹೀಗಿರುವಾಗ ಹೊಸದಾಗಿ ಹೂಡಿಕೆ ಮಾಡುವವರಿಗೆ ಯಾವ ಫಂಡ್ ಉತ್ತಮ ಎಂದು ಕಂಡುಕೊಳ್ಳುವುದೇ ದೊಡ್ಡ ಸವಾಲು.

ಬನ್ನಿ ಈಗಷ್ಟೇ ಮ್ಯೂಚುಯಲ್ ಫಂಡ್ ಹೂಡಿಕೆಗೆ ಪ್ರವೇಶ ಮಾಡುವವರಿಗೆ ಸರಿಹೊಂದುವ ಇಎಲ್ಎಸ್ಎಸ್ (ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಂ), ಲಾರ್ಜ್ ಕ್ಯಾಪ್ ಇಂಡೆಕ್ಸ್ ಫಂಡ್ ಮತ್ತು ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್ ಬಗ್ಗೆ ವಿವರವಾಗಿ ತಿಳಿಯೋಣ.

ADVERTISEMENT

ಇಎಲ್ಎಸ್ಎಸ್ ಫಂಡ್:

ತೆರಿಗೆ ಉಳಿಸುವ ಜೊತೆಗೆ ಸಂಪತ್ತನ್ನು ಗಳಿಸಲು ಇಎಲ್ಎಸ್ಎಸ್ ಫಂಡ್‌ಗಳು ಉತ್ತಮ ಆಯ್ಕೆಯಾಗಿವೆ. ನೀವು ಹಳೆಯ ತೆರಿಗೆ ಪದ್ಧತಿ ಅಡಿಯಲ್ಲಿ ತೆರಿಗೆ ಉಳಿಸುವ ಲೆಕ್ಕಾಚಾರದಲ್ಲಿ ಇದ್ದರೆ ಇಎಲ್ಎಸ್ಎಸ್ ಅನ್ನು ಪರಿಗಣಿಸಬಹುದು. ಇದನ್ನು ತೆರಿಗೆ ಉಳಿಸುವ ಮ್ಯೂಚುಯಲ್ ಫಂಡ್ ಎಂದು ಕರೆಯಲಾಗುತ್ತದೆ. ಈ ಯೋಜನೆಯಡಿ ಹೂಡಿಕೆ ಮಾಡಿದರೆ ಸೆಕ್ಷನ್ 80ಸಿ ಅಡಿಯಲ್ಲಿ ಪ್ರತಿವರ್ಷ ಗರಿಷ್ಠ ₹46,800ರ ವರೆಗೆ ತೆರಿಗೆ ಉಳಿಸಬಹುದು.

ಇಎಲ್ಎಸ್ಎಸ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಮೂರು ವರ್ಷಗಳ ಲಾಕಿನ್ ಅವಧಿ ಇರುತ್ತದೆ. ಈ ಫಂಡ್‌ಗಳಲ್ಲಿ ಹೂಡಿಕೆದಾರರ ಶೇ 80ರಷ್ಟು ಹಣವನ್ನು ಈಕ್ವಿಟಿ ಅಂದರೆ ಷೇರು ಮಾರುಕಟ್ಟೆ ಆಧಾರಿತ ಹೂಡಿಕೆಗಳಲ್ಲೇ ತೊಡಗಿಸಬೇಕು. ಲಾರ್ಜ್, ಮಿಡ್ ಮತ್ತು ಸ್ಮಾಲ್ ಕ್ಯಾಪ್ ಅಂದರೆ ದೊಡ್ಡ, ಮಧ್ಯಮ ಮತ್ತು ಸಣ್ಣ ಗಾತ್ರದ ಕಂಪನಿಗಳಲ್ಲಿ ಎಷ್ಟು ಮೊತ್ತದ ಹಣ ಹಾಕಬೇಕು ಎನ್ನುವುದನ್ನು ಫಂಡ್ ಮ್ಯಾನೇಜರ್ ತೀರ್ಮಾನಿಸುತ್ತಾರೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಇಎಲ್ಎಸ್ಎಸ್ ಫಂಡ್‌ಗಳು ವಾರ್ಷಿಕ ಸರಾಸರಿ ಶೇ 15.45ರಷ್ಟು ಲಾಭಾಂಶ ನೀಡಿವೆ. ಅಂದರೆ ಐದು ವರ್ಷಗಳ ಹಿಂದೆ ನೀವು ₹1 ಲಕ್ಷವನ್ನು ಈ ಫಂಡ್‌ನಲ್ಲಿ ಹೂಡಿದ್ದರೆ ಅದು ದ್ವಿಗುಣಗೊಂಡು, ₹2.05 ಲಕ್ಷ ಆಗಿರುತ್ತಿತ್ತು.

ಲಾರ್ಜ್ ಕ್ಯಾಪ್ ಇಂಡೆಕ್ಸ್ ಫಂಡ್:

ನೀವು ಹೊಸ ಹೂಡಿಕೆದಾರರಾಗಿದ್ದು ತೆರಿಗೆ ಉಳಿಸುವ ಆಲೋಚನೆ ಇಲ್ಲದಿದ್ದರೆ ಲಾರ್ಜ್ ಕ್ಯಾಪ್ ಇಂಡೆಕ್ಸ್ ಫಂಡ್‌ಗಳನ್ನು ಪರಿಗಣಿಸಬಹುದು. ಈ ಮ್ಯೂಚುಯಲ್ ಫಂಡ್‌ಗಳು ನಿಫ್ಟಿ 50 ಅಥವಾ ಸೆನ್ಸೆಕ್ಸ್ ಸೂಚ್ಯಂಕಗಳನ್ನು ಯಥಾಪ್ರಕಾರ ಅನುಕರಿಸಿ ಹೂಡಿಕೆ ಮಾಡುತ್ತವೆ. ನಿಫ್ಟಿ 50, ಸೆನ್ಸೆಕ್ಸ್ ಸೂಚ್ಯಂಕಗಳಲ್ಲಿ ಯಾವ ಷೇರುಗಳ ಮೇಲೆ ಹೂಡಿಕೆ ಮಾಡಲಾಗಿರುತ್ತದೆಯೋ ಅದೇ ಕಂಪನಿಗಳ ಮೇಲೆ ಈ ಲಾರ್ಜ್ ಕ್ಯಾಪ್ ಇಂಡೆಕ್ಸ್ ಫಂಡ್‌ಗಳು ತೊಡಗಿಸುತ್ತವೆ.

ಭಾರತದ ಅಗ್ರಮಾನ್ಯ ಕಂಪನಿಗಳ ಮೇಲೆ ಲಾರ್ಜ್ ಕ್ಯಾಪ್ ಇಂಡೆಕ್ಸ್ ಫಂಡ್‌ಗಳು ಹೂಡಿಕೆ ಮಾಡುವುದರಿಂದ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳಿಗೆ ಹೋಲಿಸಿದಾಗ ಇಲ್ಲಿ ರಿಸ್ಕ್ ಪ್ರಮಾಣ ಕಡಿಮೆ. ಇನ್ನು ಇಲ್ಲಿ ಸೂಚ್ಯಂಕವನ್ನೇ ಅನುಸರಿಸಿ ಹೂಡಿಕೆ ಮಾಡುವುದರಿಂದ ಫಂಡ್ ಮ್ಯಾನೇಜರ್ ಇರುವುದಿಲ್ಲ. ಫಂಡ್ ಮ್ಯಾನೇಜರ್ ಇಲ್ಲದ ಕಾರಣ ನಿರ್ವಹಣಾ ವೆಚ್ಚ ಕಡಿಮೆ. ಹಾಗಾಗಿ, ಈ ಫಂಡ್‌ಗಳಲ್ಲಿ  ವೆಚ್ಚದ ಅನುಪಾತ ಕಡಿಮೆ ಇರುತ್ತದೆ.‌

ಕಳೆದ ಐದು ವರ್ಷಗಳ ವಾರ್ಷಿಕ ಸರಾಸರಿ ಲೆಕ್ಕಾಚಾರದಲ್ಲಿ ಲಾರ್ಜ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳು ಶೇ 14.11ರಷ್ಟು ಲಾಭಾಂಶ ಕೊಟ್ಟಿವೆ. ಅಂದರೆ ಐದು ವರ್ಷಗಳ ಹಿಂದೆ ಈ ಫಂಡ್‌ನಲ್ಲಿ ನೀವು ₹1 ಲಕ್ಷ ಹೂಡಿಕೆ ಮಾಡಿದ್ದರೆ ಈಗ ಅದು ₹1.92 ಲಕ್ಷ ಆಗಿರುತ್ತಿತ್ತು.

ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್:

ನೀವು ಮ್ಯೂಚುಯಲ್ ಫಂಡ್‌ಗೆ ಹೊಸ ಹೂಡಿಕೆದಾರರಾಗಿದ್ದು, ತೆರಿಗೆ ಉಳಿತಾಯದ ಉದ್ದೇಶವಿಲ್ಲ ಮತ್ತು ಈಕ್ವಿಟಿ ಫಂಡ್‌ಗಳಲ್ಲಿ ಇರುವ ಹೆಚ್ಚಿನ ರಿಸ್ಕ್ ಬೇಡ ಎನ್ನುವವರಿಗೆ ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಅಥವಾ ಡೈನಾಮಿಕ್ ಅಸೆಟ್ ಅಲೊಕೇಷನ್ ಫಂಡ್ ಸರಿ ಹೂಂದುತ್ತದೆ.

ಈ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆದಾರರ ಹಣವನ್ನು ಷೇರು ಮಾರುಕಟ್ಟೆ (ಈಕ್ವಿಟಿ) ಆಧಾರಿತ ಹೂಡಿಕೆಗಳು ಮತ್ತು ನಿಶ್ಚಿತ ಠೇವಣಿ (ಡೆಟ್) ಮಾದರಿಯ ಹೂಡಿಕೆಗಳಲ್ಲಿ ತೊಡಗಿಸಲಾಗುತ್ತದೆ. ಮಾರುಕಟ್ಟೆಯ ಸ್ಥಿತಿ ಆಧರಿಸಿ ಫಂಡ್ ಮ್ಯಾನೇಜರ್ ಹೂಡಿಕೆದಾರರ ಹಣವನ್ನು ಡೆಟ್ ಮತ್ತು ಈಕ್ವಿಟಿ ಹೂಡಿಕೆಗಳಲ್ಲಿ ಬದಲಾಯಿಸುತ್ತಿರುತ್ತಾರೆ.

ಮಾರುಕಟ್ಟೆ ಏರುಗತಿಯಲ್ಲಿ ಇರುವಾಗ ಫಂಡ್ ಮ್ಯಾನೇಜರ್, ಈಕ್ವಿಟಿಗಳಲ್ಲಿ ಹೆಚ್ಚು ಹಣ ತೊಡಗಿಸುತ್ತಾರೆ. ಮಾರುಕಟ್ಟೆ ಕುಸಿತದಲ್ಲಿರುವಾಗ ಹೆಚ್ಚು ಡೆಟ್ ಫಂಡ್‌ಗಳಲ್ಲಿ ಫಂಡ್ ಮ್ಯಾನೇಜರ್ ಹಣ ತೊಡಗಿಸುತ್ತಾರೆ. ಮಾರುಕಟ್ಟೆ ಕುಸಿತವಾದಾಗ ಆತಂಕಗೊಳ್ಳುವ ಹೂಡಿಕೆದಾರರಿಗೆ ಬ್ಯಾಲೆನ್ಸ್ಡ್ ಫಂಡ್‌ಗಳು ಉತ್ತಮ ಆಯ್ಕೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್‌ಗಳು ವಾರ್ಷಿಕ ಸರಾಸರಿ ಲೆಕ್ಕಾಚಾರದಲ್ಲಿ ಶೇ 10.37ರಷ್ಟು ಲಾಭಾಂಶ ನೀಡಿವೆ. 

(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.