ADVERTISEMENT

ಬಂಡವಾಳ ಮಾರುಕಟ್ಟೆ: ಆರೋಗ್ಯ ವಿಮೆ ಕ್ಲೇಮ್ ತಿರಸ್ಕೃತ ಆದರೆ ಮಾಡುವುದೇನು?

ಅವಿನಾಶ್ ಕೆ.ಟಿ
Published 11 ಏಪ್ರಿಲ್ 2021, 19:31 IST
Last Updated 11 ಏಪ್ರಿಲ್ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಆರೋಗ್ಯ ವಿಮೆ ಮಾಡಿಸಿದ ಮೇಲೆ ಮುಂದೇನು? ನೀವು ಪ್ರೀಮಿಯಂ ಪಾವತಿಸುತ್ತೀರಿ, ಪಾಲಿಸಿಯನ್ನು ನವೀಕರಿಸುತ್ತೀರಿ, ಅಗತ್ಯವೆನಿಸಿದಾಗ ವಿಮಾ ಮೊತ್ತವನ್ನು ಹೆಚ್ಚಿಸಿಕೊಳ್ಳುತ್ತೀರಿ. ಆದರೆ, ನಿಯಮಾನುಸಾರವಾಗಿ ಇಷ್ಟೆಲ್ಲ ಮಾಡಿದ ಮೇಲೆಯೂ ವಿಮೆ ಕ್ಲೇಮ್ ತಿರಸ್ಕೃತವಾದರೆ ಏನು ಮಾಡಬೇಕು?!

‘ಅಯ್ಯೋ ಈ ಕರ್ಮಕ್ಕೆ ಹೆಲ್ತ್ ಇನ್ಶೂರೆನ್ಸ್ ಬೇಕಿತ್ತಾ’ ಅಂತ ನೀವು ಕೇಳಬಹುದು. ಆದರೆ ಇಂತಹ ಪ್ರಶ್ನೆಗಳನ್ನು ಯಾರಲ್ಲೋ ಕೇಳುವ ಮೊದಲು ನಿಮ್ಮನ್ನು ನೀವು ಕೇಳಿಕೊಳ್ಳಬೇಕು. ನೀವು ನ್ಯಾಯಯುತ ಮಾರ್ಗದಲ್ಲಿ ಕ್ಲೇಮ್ ಸೆಟಲ್ಮೆಂಟ್ ಮಾಡಿಸಲು ಎಲ್ಲ ಪ್ರಯತ್ನ ನಡೆಸಬೇಕು. ಹೀಗೆ ಮಾಡಬೇಕು ಅಂದರೆ ನೀವು ವಿಮೆ ಖರೀದಿಸುವ ಮುನ್ನ ದಾಖಲೆಗಳನ್ನು ಸರಿಯಾಗಿ ಓದಿರಬೇಕು. ಯಾವ ಚಿಕಿತ್ಸೆಗೆವಿಮೆ ಸಿಗುವುದಿಲ್ಲ, ಯಾವ ಅನಾರೋಗ್ಯಕ್ಕೆ ಚಿಕಿತ್ಸೆ ಸಿಗುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಕ್ಲೇಮ್ ತಿರಸ್ಕೃತ ಆಗಬಹುದು.

ಕ್ಲೇಮ್ ನಿರಾಕರಿಸಲು ಪ್ರಮುಖ ಕಾರಣಗಳು: ನೀವು ಪಡೆದಿರುವ ನಿರ್ದಿಷ್ಟ ಚಿಕಿತ್ಸೆಗೆ ಪಾಲಿಸಿ ದಾಖಲೆಯ ಪ್ರಕಾರ ವಿಮೆ ಇಲ್ಲದೆ ಇರುವಾಗ, ಕ್ಲೇಮ್ ಅರ್ಜಿಯನ್ನು ಅಸಮರ್ಪಕವಾಗಿ ಭರ್ತಿ ಮಾಡಿದ್ದಾಗ, ಅಸಮರ್ಪಕ ದಾಖಲೆಗಳನ್ನು ಸಲ್ಲಿಸಿದ್ದಾಗ, ನಿಗದಿತ ಕಾಲಮಿತಿಯಲ್ಲಿ ಕ್ಲೇಮ್ ಅರ್ಜಿ ಸಲ್ಲಿಸದಿದ್ದಾಗ, ಹಾಗೂ ಅನಗತ್ಯವಾಗಿ ವೈದ್ಯಕೀಯ ವೆಚ್ಚ ಮಾಡಿದಾಗ ವಿಮಾ ಕ್ಲೇಮ್ ತಿರಸ್ಕೃತಗೊಳ್ಳುವ ಸಾಧ್ಯತೆ ಇರುತ್ತದೆ.

ADVERTISEMENT

ತಿರಸ್ಕೃತ ಆಗುವುದನ್ನು ತಡೆಯುವುದು ಹೇಗೆ?: ನೀವು ವಿಮಾ ಕಂಪನಿಗೆ ಅಥವಾ ಥರ್ಡ್ ಪಾರ್ಟಿ ಅಡ್ಮಿನಿಸ್ಟ್ರೇಟರ್‌ಗೆ (ಟಿಪಿಎ) ನೀಡುವ ಎಲ್ಲ ದಾಖಲೆಗಳ ಒಂದು ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ವಿಮೆ ಮಾಡಿಸುವಾಗ ಪ್ರಪೋಸಲ್ ಫಾರಂ, ಕಂಪನಿಯ ಒರಿಜಿನಲ್ ಬ್ರೋಷರ್, ಪರಿಗಣಿಸದ ಆರೋಗ್ಯ ಸಮಸ್ಯೆಗಳ ಪಟ್ಟಿ, ವೇಯ್ಟಿಂಗ್ ಪೀರಿಯಡ್ ಮುಂತಾದ ವಿಚಾರಗಳನ್ನು ಓದಿ ಸಮರ್ಪಕ ಮಾಹಿತಿ ಪಡೆದುಕೊಳ್ಳಿ. ನಿಮ್ಮ ಪಾಲಿಸಿಯಲ್ಲಿ ನಮೂದಿಸಿರುವಂತೆ ನಿಗದಿತ ಸಮಯದಲ್ಲಿ ಕ್ಲೇಮ್ ಅರ್ಜಿ ಸಲ್ಲಿಸಿ. ನಿಮ್ಮ ಎಲ್ಲ ವೈದ್ಯಕೀಯ ದಾಖಲೆಗಳು ಮತ್ತು ಆಸ್ಪತ್ರೆಗೆ ದಾಖಲಾಗಿದ್ದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಟಿಪಿಎಗೆ ನೀಡಿ. ಕ್ಲೇಮ್ ಅರ್ಜಿಯನ್ನು ಎರಡೆರಡು ಬಾರಿ ಪರಿಶೀಲಿಸಿ. ಹೆಚ್ಚುವರಿಯಾಗಿ ಮತ್ತೊಂದು
ಖಾಲಿ ಕ್ಲೇಮ್ ಅರ್ಜಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಕೆಲ ತಿದ್ದುಪಡಿಗಳು ಅಗತ್ಯವಿದ್ದಲ್ಲಿ ನೀವು ಕೂಡಲೇ ಅದನ್ನುಮಾಡಲು ಹೆಚ್ಚುವರಿ ಅರ್ಜಿ ನೆರವಾಗುತ್ತದೆ.

ಟಿಪಿಎಗೆ ಸಲ್ಲಿಸಲು ಆಸ್ಪತ್ರೆ ಬಿಲ್, ವೈದ್ಯರು ನೀಡಿದ ಔಷಧಿ ಚೀಟಿಗಳು ಹಾಗೂ ಇತರ ಪೂರಕ ದಾಖಲೆಗಳನ್ನು ಸಂಗ್ರಹಿಸಿಕೊಳ್ಳಿ.

ಮುಂದೇನು ಮಾಡಬೇಕು?: ನಿಮ್ಮ ವಿಮೆ ಕ್ಲೇಮ್ ನ್ಯಾಯಯುತವಾಗಿದೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಲು ನೀವು ಸಫಲರಾದಲ್ಲಿ ವಿಮಾ ಕಂಪನಿಯು ನಿಮ್ಮ ಕ್ಲೇಮ್ ಅರ್ಜಿಯನ್ನು ಮರುಪರಿಶೀಲನೆಗೆ ಒಳಪಡಿಸಬಹುದು. ಹೀಗೆ ಮಾಡುವಾಗ ಕ್ಲೇಮ್ ನಿರಾಕರಣೆಗೆ ಪ್ರಮುಖ ಕಾರಣ ಏನು ಎನ್ನುವುದನ್ನು ತಿಳಿದುಕೊಂಡರೆ ನಿಮಗೆ ಸಹಾಯವಾಗುತ್ತದೆ. ನಿಮ್ಮ ಕ್ಲೇಮ್ ಅರ್ಜಿಯಲ್ಲಿ ಆಗಿರುವ ತಪ್ಪೇನು ಎನ್ನುವುದನ್ನು ತಿಳಿದ ಬಳಿಕ ಕೆಲ ಪ್ರಕ್ರಿಯೆಗಳನ್ನು ನೀವು ಮಾಡಬೇಕಾಗುತ್ತದೆ.

*ನಿಮ್ಮ ವಿಮಾ ಕ್ಲೇಮ್ ನ್ಯಾಯಸಮ್ಮತವಾಗಿದೆ ಎನ್ನುವುದನ್ನು ಸಾಕ್ಷೀಕರಿಸುವ ದಾಖಲೆಗಳೊಂದಿಗೆ ಒಂದು ಅಧಿಕೃತ ಪತ್ರವನ್ನು ವಿಮಾ ಕಂಪನಿಗೆ ಕಳುಹಿಸಿ.

*ಅನಾರೋಗ್ಯಕ್ಕೆ ಒಳಗಾಗಿದ್ದ ಮತ್ತು ಆಸ್ಪತ್ರೆಗೆ ದಾಖಲಾಗಿದ್ದ ಸಮಯದ ಎಲ್ಲ ಪೂರಕ ದಾಖಲೆಗಳನ್ನು ಕಂಪನಿಗೆ ಒದಗಿಸಿ. ಇದರ ಜತೆಗೆ ನಿಮ್ಮ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ನೋಂದಾಯಿತ ವೈದ್ಯರೊಬ್ಬರ ವೈದ್ಯಕೀಯ ಅಭಿಪ್ರಾಯವನ್ನು ಪಡೆದು ವಿಮಾ ಕಂಪನಿಗೆ ರವಾನಿಸಿ.

*ನಿಮ್ಮ ಕ್ಲೇಮ್ ನ್ಯಾಯಯುತವಾಗಿದೆ ಎನ್ನುವುದನ್ನು ನಿರೂಪಿಸಲು ಹಲವು ಬಾರಿ ಮೇಲ್ಮನವಿ ಸಲ್ಲಿಸಬಹುದು.

*ನಿಮ್ಮ ಪತ್ರಕ್ಕೆ ವಿಮಾ ಕಂಪನಿಯು 30 ದಿನಗಳ ಒಳಗಾಗಿ ಲಿಖಿತ ಉತ್ತರ ನೀಡಬೇಕಾಗುತ್ತದೆ. ಒಂದೊಮ್ಮೆ ವಿಮಾ ಕಂಪನಿ ಉತ್ತರಿಸದಿದ್ದಲ್ಲಿ ನೀವು ಇನ್ಶೂರೆನ್ಸ್ ಒಂಬುಡ್ಸ್‌ಮನ್ ಕಚೇರಿಗೆ ತೆರಳಿ ಕಂಪನಿಯ ವಿರುದ್ಧ ದೂರು ದಾಖಲಿಸಬಹುದು.

*ಇನ್ಶೂರೆನ್ಸ್ ಒಂಬುಡ್ಸ್‌ಮನ್ ಕಚೇರಿಯಿಂದ ನಿಮಗೆ ನೆರವು ಸಿಗದಿದ್ದರೆ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಬಹುದು.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂ ನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.