ADVERTISEMENT

ಕೆನರಾ ಬ್ಯಾಂಕ್‌ಗೆ ₹ 1.50 ಲಕ್ಷ ದಂಡ

ಗ್ರಾಹಕರ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 11:28 IST
Last Updated 16 ಜೂನ್ 2018, 11:28 IST
ಕೆನರಾ ಬ್ಯಾಂಕ್‌ಗೆ ₹ 1.50 ಲಕ್ಷ ದಂಡ
ಕೆನರಾ ಬ್ಯಾಂಕ್‌ಗೆ ₹ 1.50 ಲಕ್ಷ ದಂಡ   

ಬೆಂಗಳೂರು: ಗ್ರಾಹಕರ ಗಮನಕ್ಕೆ ಬರದಂತೆ ಖಾತೆಯಿಂದ ₹ 2.36 ಲಕ್ಷವನ್ನು ಅಪರಿಚಿತರು ವರ್ಗಾಯಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನರಾ ಬ್ಯಾಂಕ್‌ಗೆ ಜಿಲ್ಲಾ ಗ್ರಾಹಕರ 1ನೇ ಹೆಚ್ಚುವರಿ ನ್ಯಾಯಾಲಯ ₹ 1.50 ಲಕ್ಷ ದಂಡ ವಿಧಿಸಿದೆ.

ಪ್ರಕರಣದ ಖರ್ಚು ₹ 10 ಸಾವಿರವನ್ನು ಗ್ರಾಹಕರಿಗೆ ಕೊಡಬೇಕು ಎಂದೂ ಆದೇಶಿಸಿದೆ.

ಪ್ರಕರಣದ ವಿವರ: ಮಾಗಡಿ ತಾಲ್ಲೂಕು ಕರ್ಲಮಂಗಲ ಸಮೀಪ ಉಕ್ಕಡ ನಿವಾಸಿ ಟಿ.ಶಿವಣ್ಣ ಅವರು ಅದೇ ತಾಲ್ಲೂಕಿನ ವೀರಗೌಡನದೊಡ್ಡಿ ಶಾಖೆಯಲ್ಲಿ ಎಸ್‌ಬಿ ಖಾತೆ ಹೊಂದಿದ್ದರು. ಅವರ ಖಾತೆಯಿಂದ 2016ರ ನ. 14ರಿಂದ 23ರ ನಡುವೆ ₹ 2.36 ಲಕ್ಷವನ್ನು ಅನಧಿಕೃತವಾಗಿ ತೆಗೆದುಕೊಳ್ಳಲಾಗಿತ್ತು. 2017ರ ಜ 9ರಂದು ಪಾಸ್‌ಬುಕ್‌ನಲ್ಲಿ ನಮೂದಿಸುವಾಗ ಈ ಘಟನೆ ಶಿವಣ್ಣ ಅವರ ಗಮನಕ್ಕೆ ಬಂದಿತು. ತಕ್ಷಣ ಅವರು ಶಾಖಾ ವ್ಯವಸ್ಥಾಪಕರ ಗಮನಕ್ಕೆ ತಂದರು. ಜ. 10ರಂದು ಬ್ಯಾಂಕ್‌ ವ್ಯವಸ್ಥಾಪಕರಿಗೆ ದೂರು ನೀಡಿದರು.

ADVERTISEMENT

‘ಶಾಖಾ ವ್ಯವಸ್ಥಾಪಕರು ಸೂಚಿಸಿದಂತೆ ಘಟನೆ ಬಗ್ಗೆ 2017ರ ಜ. 31ರಂದು ಪೊಲೀಸ್‌ ದೂರು ದಾಖಲಿಸಿದೆ. ಮುಂದೆ ಆ ಹಣವನ್ನು ಮರುಪಾವತಿಸುವ ಬಗ್ಗೆ ಬ್ಯಾಂಕ್‌ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಸ್ಪಂದಿಸಲೂ ಇಲ್ಲ' ಎಂದು ಶಿವಣ್ಣ ಗ್ರಾಹಕರ ವೇದಿಕೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಗ್ರಾಹಕರು ಘಟನೆ ಬಗ್ಗೆ ತಡವಾಗಿ ದೂರು ನೀಡಿದ್ದಾರೆ. ಮಾತ್ರವಲ್ಲ, 2017ರ ಜ. 10ರಂದು ಡೆಬಿಟ್‌ ಕಾರ್ಡ್‌ ನೀಡುವಂತೆ ಕೋರಿಕೆ ಸಲ್ಲಿಸಿದ್ದಾರೆ. ಇಲ್ಲಿ ತಮ್ಮ ಯಾವುದೇ ಲೋಪ ಇಲ್ಲ ಎಂದು ಬ್ಯಾಂಕ್‌ ವ್ಯವಸ್ಥಾಪಕರು ಪ್ರತಿಪಾದಿಸಿದರು.

ಪ್ರಕರಣದ ವಿಚಾರಣೆ ನಡೆಸಿದ ವೇದಿಕೆಯ ಅಧ್ಯಕ್ಷ ಎಚ್‌.ಆರ್‌.ಶ್ರೀನಿವಾಸ್‌, ‘ಬ್ಯಾಂಕ್‌ ಸೇವಾ ಲೋಪ ಎಸಗಿರುವುದು ಸಾಬೀತಾಗಿದೆ. ಅದನ್ನು ನಿರಾಕರಿಸುವ ಯಾವುದೇ ಸಾಕ್ಷ್ಯಗಳನ್ನು ಹಾಜರುಪಡಿಸುವಲ್ಲಿ ಬ್ಯಾಂಕ್‌ ವಿಫಲವಾಗಿದೆ. ಈ ಹಿಂದೆಯೂ ಗ್ರಾಹಕರ ಖಾತೆಯಿಂದ ಮುಂಬೈನ ಎಫ್‌ಎಸ್‌ಎಸ್‌ಇಎ ಎನ್‌ಡಿಸಿ ಪೇಮೆಂಟ್ಸ್‌ ಅವೆನ್ಯೂಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಹೆಸರಿನ ಸಂಸ್ಥೆ ಪೇಮೆಂಟ್‌ ಗೇಟ್‌ವೇ ಮೂಲಕ₹ 2,500ರಿಂದ ಹಿಡಿದು ₹ 39,381 ಮೊತ್ತದವರೆಗೆ ಹಲವು ಬಾರಿ ಹಣ ಪಡೆದಿತ್ತು. ಮಾತ್ರವಲ್ಲ ಹಲವು ಬಾರಿ ಗ್ರಾಹಕರ ಖಾತೆಗೆ ಕನ್ನ ಹಾಕಲು ಯತ್ನ ನಡೆದಿತ್ತು. ಅಂಥ ಅನಧಿಕೃತ ವರ್ಗಾವಣೆ ಆದಾಗ ಹಣ ಖಾತೆಗೆ ವಾಪಸ್‌ ಆಗಿತ್ತು’.

‘ಹೀಗೆ ಭಾರೀ ಮೊತ್ತದ ಹಣದ ವಹಿವಾಟು ನಡೆಯುವಾಗ ಅದರ ಮೇಲೆ ಕಣ್ಣಿಡುವುದು, ಸೈಬರ್‌ ಅಪರಾಧ ಮತ್ತು ಮೋಸದಿಂದ ಮುಗ್ಧ ಗ್ರಾಹಕನ ಖಾತೆಯನ್ನು ದುರುಪಯೋಗವಾಗದಂತೆ ನೋಡಿಕೊಳ್ಳುವುದು ಬ್ಯಾಂಕ್‌ನ ಹೊಣೆ. ನಂಬಿಕೆ ಆಧಾರದಲ್ಲಿಯೇ ಬ್ಯಾಂಕಿಂಗ್‌ ವಹಿವಾಟುಗಳು ನಡೆಯುತ್ತವೆ. ಇಲ್ಲಿ ತನಗೆ ಮೋಸವಾಗಿರುವುದನ್ನು ಗಮನಕ್ಕೆ ತಂದ ಬಳಿಕವೂ ಬ್ಯಾಂಕ್‌ ಯಾವುದೇ ಕ್ರಮ ಕೈಗೊಳ್ಳದಿರುವುದು, ಸೈಬರ್‌ ಅಪರಾಧ ವಿಭಾಗದ ಪೊಲೀಸರಿಗೆ ದೂರು ಕೊಟ್ಟು ತನಿಖೆಗೆ ಸಹಕರಿಸುವ ಯಾವುದೇ ಪ್ರಕ್ರಿಯೆ ನಡೆಸಿಲ್ಲ.

‘ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಗ್ರಾಹಕರ ಖಾತೆಯಿಂದ ವರ್ಗಾವಣೆಯಾದ ಹಣವನ್ನು ಬಡ್ಡಿ ಸಹಿತ ಅವರ ಖಾತೆಗೆ ಹಿಂದಿರುಗಿಸಬೇಕು, ಬೇಜವಾಬ್ದಾರಿ, ಗ್ರಾಹಕರಿಗಾದ ಮಾನಸಿಕ ಹಿಂಸೆಗೆ ಪರಿಹಾರ ಕೊಡಬೇಕು’ ಎಂದು ತೀರ್ಪಿನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.