ADVERTISEMENT

ಮಹಿಳೆಯರ ಜನಧನ್‌ ಖಾತೆಗೆ ಇಂದಿನಿಂದ ₹ 500 ಪಾವತಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 19:45 IST
Last Updated 2 ಏಪ್ರಿಲ್ 2020, 19:45 IST
   

ಬೆಂಗಳೂರು: ಮಹಿಳೆಯರ ಜನಧನ್‌ ಖಾತೆಗೆ ₹ 500 ನೆರವಿನ ಮೊದಲ ಕಂತು ಶುಕ್ರವಾರ ಜಮೆಯಾಗಲಿದೆ.

ದಿಗ್ಬಂಧನದಿಂದಾಗಿ ಬಡ ಕುಟುಂಬಗಳಿಗೆ ಎದುರಾಗಿರುವ ಸಂಕಷ್ಟದ ಪರಿಸ್ಥಿತಿಗೆ ನೆರವಾಗಲು ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಪ್ಯಾಕೇಜ್‌ನಡಿ ಜನಧನ್‌ ಖಾತೆಗಳಿಗೆ ಮೂರು ತಿಂಗಳವರೆಗೆ ಪ್ರತಿ ತಿಂಗಳೂ ₹ 500 ಪಾವತಿಸಲು ಘೋಷಿಸಲಾಗದೆ. ಈ ನೆರವಿಗೆ ಈಗ ಚಾಲನೆ ದೊರೆತಿದೆ ಎಂದು ಭಾರತದ ಬ್ಯಾಂಕ್‌ಗಳ ಸಂಘ (ಐಬಿಎ) ತಿಳಿಸಿದೆ.

ಸಾಮಾಜಿಕ ಅಂತರ ಕಾಯ್ದುಕೊಂಡು ಫಲಾನುಭವಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಹಣ ವಿತರಿಸಲು ಬ್ಯಾಂಕ್‌ಗಳು ನಿಗದಿತ ವೇಳಾಪಟ್ಟಿ ನಿಗದಿಪಡಿಸಿವೆ. ಬ್ಯಾಂಕ್‌ ಖಾತೆ ಸಂಖ್ಯೆಯ ಕೊನೆಯ ಅಂಕಿಗೆ ಅನುಗುಣವಾಗಿ ಹಣ ಹಿಂದೆ ಪಡೆಯಲು ದಿನ ನಿಗದಿಪಡಿಸಲಾಗಿದೆ. ಇದೇ 3 ರಿಂದ 9ರವರೆಗೆ ನಿರ್ದಿಷ್ಟ ಫಲಾನುಭವಿಗಳು ತಮ್ಮ ಖಾತೆಯಿಂದ ಹಣ ಹಿಂದೆ ಪಡೆಯಬಹುದು. ಸುರಕ್ಷತೆ ದೃಷ್ಟಿಯಿಂದ ಬ್ಯಾಂಕ್‌ಗಳಲ್ಲಿ ದಟ್ಟಣೆ ತಡೆಗಟ್ಟಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಮನವಿ ‘ಐಬಿಎ’ ಮಾಡಿಕೊಂಡಿದೆ.

ADVERTISEMENT

ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಜಮಾವಣೆ ಆಗುವುದರಿಂದ ಹಣ ಹಿಂದೆ ಪಡೆಯಲು ಯಾರೊಬ್ಬರೂ ಧಾವಂತ ಪಡಬಾರದು. ಯಾವುದೇ ಬ್ಯಾಂಕ್‌ನ ಎಟಿಎಂಗಳಿಂದಲೂ ಹಣ ಹಿಂದೆ ಪಡೆಯಲು ಶುಲ್ಕ ವಿಧಿಸಲಾಗುತ್ತಿಲ್ಲ. ಹೀಗಾಗಿ ಮನೆ ಸಮೀಪದ ಎಟಿಎಂಗಳಲ್ಲಿ ರೂಪೆ ಕಾರ್ಡ್‌ ಬಳಸಿ ಹಣ ಪಡೆಯಬಹುದು. ಬ್ಯಾಂಕ್‌ ಮಿತ್ರ, ಗ್ರಾಹಕರ ಸೇವಾ ಕೇಂದ್ರಗಳ (ಸಿಎಸ್‌ಪಿ) ಮೂಲಕವೂ ಹಣ ಹಿಂದೆ ಪಡೆಯಬಹುದು. ಏ. 9ರ ನಂತರ ಫಲಾನುಭವಿಗಳು ತಮಗೆ ಅನುಕೂಲಕರವಾದ ದಿನ ಹಣ ಹಿಂದೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಖಾತೆಯ ಕೊನೆಯ ಸಂಖ್ಯೆ; ಹಣ ಹಿಂದೆ ಪಡೆಯುವ ದಿನ

0 ಅಥವಾ 1; ಏಪ್ರಿಲ್‌ 3

2 ಅಥವಾ 3; ಏಪ್ರಿಲ್‌ 4

4 ಅಥವಾ 5; ಏಪ್ರಿಲ್‌ 7

6 ಅಥವಾ 7; ಏಪ್ರಿಲ್‌ 8

8 ಅಥವಾ 9; ಏಪ್ರಿಲ್‌ 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.