ADVERTISEMENT

ಮಾರ್ಚ್‌ನಲ್ಲಿ ₹1.60 ಲಕ್ಷ ಕೋಟಿ ಜಿಎಸ್‌ಟಿ ವರಮಾನ ಸಂಗ್ರಹ

2022–23ನೇ ಹಣಕಾಸು ವರ್ಷದಲ್ಲಿ ಶೇ 22ರಷ್ಟು ಹೆಚ್ಚಳ

ಪಿಟಿಐ
Published 1 ಏಪ್ರಿಲ್ 2023, 13:59 IST
Last Updated 1 ಏಪ್ರಿಲ್ 2023, 13:59 IST

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಮೂಲಕ ಮಾರ್ಚ್‌ನಲ್ಲಿ ₹1,60,122 ಕೋಟಿ ವರಮಾನ ಸಂಗ್ರಹ ಆಗಿದೆ. ಜಿಎಸ್‌ಟಿ ವ್ಯವಸ್ಥೆಯು ಜಾರಿಗೆ ಬಂದಾಗಿನಿಂದ ಈವರೆಗಿನ ಅವಧಿಯಲ್ಲಿ ಎರಡನೇ ಅತ್ಯಧಿಕ ಸಂಗ್ರಹ ಇದಾಗಿದೆ. 2022ರ ಏಪ್ರಿಲ್‌ನಲ್ಲಿ 1.67 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿತ್ತು.

ಕಳೆದ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಈ ಮಾರ್ಚ್‌ನಲ್ಲಿ ವರಮಾನ ಸಂಗ್ರಹದಲ್ಲಿ ಶೇ 13ರಷ್ಟು ಏರಿಕೆ ಕಂಡುಬಂದಿದೆ. ಈ ಮಾರ್ಚ್‌ನಲ್ಲಿ ಸಂಗ್ರಹ ಆಗಿರುವ ಒಟ್ಟು ಮೊತ್ತದಲ್ಲಿ ಸಿಜಿಎಸ್‌ಟಿ ₹29,546 ಕೋಟಿ, ಎಸ್‌ಜಿಎಸ್‌ಟಿ ₹37,314 ಕೋಟಿ, ಐಜಿಎಸ್‌ಟಿ ₹82,907 ಕೋಟಿ ಮತ್ತು ಸೆಸ್ ₹10,355 ಕೋಟಿ ಸೇರಿದೆ ಎಂದು ಹಣಕಾಸು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

2022–23ನೇ ಹಣಕಾಸು ವರ್ಷದಲ್ಲಿ 18.10 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. ಇದು ಹಿಂದಿನ ಅವಧಿಗಿಂತಲೂ ಶೇ 22ರಷ್ಟು ಹೆಚ್ಚಿಗೆ ಇದೆ.

ADVERTISEMENT

ಮಾರ್ಚ್‌ನಲ್ಲಿ ಸರಕುಗಳ ಆಮದಿನಿಂದ ಬರುವ ವರಮಾನವು ಶೇ 8ರಷ್ಟು ಹೆಚ್ಚಾಗಿದೆ. ದೇಶಿ ವಹಿವಾಟಿನಿಂದ (ಸೇವೆಗಳ ಆಮದು ಸೇರಿ) ಬರುವ ವರಮಾನ ಶೇ 14ರಷ್ಟು ಹೆಚ್ಚಾಗಿದೆ.

ಭಾರತದ ಆರ್ಥಿಕತೆಯು ಬೆಳವಣಿಗೆಯ ಹಾದಿಯಲ್ಲಿದೆ ಎನ್ನುವುದನ್ನು ತಿಂಗಳ ಮತ್ತು ವಾರ್ಷಿಕ ಜಿಎಸ್‌ಟಿ ಸಂಗ್ರಹವು ಸೂಚಿಸುತ್ತಿದೆ ಎಂದು ಕೆಪಿಎಂಜಿ ಇಂಡಿಯಾದ ಪರೋಕ್ಷ ತೆರಿಗೆ ಪಾಲುದಾರ ಅಭಿಷೇಕ್‌ ಜೈನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.