ಮುಂಬೈನಲ್ಲಿ ಟಾಟಾ ಮೋಟರ್ಸ್‌ನ ಆಲ್ಟ್ರೋಜ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ವಿನ್ಯಾಸ ವಿಭಾಗದ ಮುಖ್ಯಸ್ಥ ಮಾರ್ಟಿನ್ ಎಂ.ಉಹ್ಲಾರಿಕ್, ವಾಣಿಜ್ಯ ವಿಭಾಗದ ಮುಖ್ಯಸ್ಥ ವಿವೇಕ್ ಶ್ರೀವಾಸ್ತವ, ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಇದ್ದರು
ಮುಂಬೈ: ಟಾಟಾ ಮೋಟರ್ಸ್ ತನ್ನ ಜನಪ್ರಿಯ ಆಲ್ಟ್ರೋಜ್ ಹ್ಯಾಚ್‌ಬ್ಯಾಕ್‌ನ ಫೇಸ್‌ಲಿಫ್ಟ್ ಆವೃತ್ತಿಯನ್ನು ಗುರುವಾರ ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಎಕ್ಸ್ ಷೋರೂಂ ಬೆಲೆ ₹6.89 ಲಕ್ಷ ಆಗಿದೆ.
2020ರಲ್ಲಿ ಮಾರುಕಟ್ಟೆಗೆ ಪರಿಚಯಿಸಿದ್ದ ಈ ಕಾರಿನ ನವೀಕರಿಸಿದ ಮಾದರಿಯು ಬಿಡುಗಡೆ ಆಗಿರಲಿಲ್ಲ. ಈಗ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಪ್ರಿಯರ ಬೇಡಿಕೆಗೆ ತಕ್ಕಂತೆ ಬಾಹ್ಯ ವಿನ್ಯಾಸದಲ್ಲಿ ಸಂಪೂರ್ಣ ಬದಲಾವಣೆ ಮಾಡಲಾಗಿದ್ದು, ಹೊಸ ಫೀಚರ್‌ಗಳನ್ನು ಅಳವಡಿಸಲಾಗಿದೆ.
ಮಾರುಕಟ್ಟೆಯಲ್ಲಿರುವ ಮಾರುತಿ ಬೊಲೆನೊ, ಹುಂಡೈ ಐ20, ಟೊಯೊಟೊ ಗ್ಲಾಜಾದಂತಹ ಕಾರುಗಳೊಂದಿಗೆ ಸ್ಪರ್ಧಿಸಲು ಅನುವಾಗುವಂತೆ ವಿನ್ಯಾಸ ರೂಪಿಸಲಾಗಿದೆ. ಜೂನ್ 2ರಿಂದ ವಾಹನದ ಬುಕಿಂಗ್ ಆರಂಭವಾಗಲಿದೆ.
ವೈಶಿಷ್ಟ್ಯ ಏನು?: ಆಲ್ಟ್ರೋಜ್ ಫೇಸ್‌ಲಿಫ್ಟ್ ಮುಖ್ಯವಾಗಿ ಪ್ರಿಸ್ಟೈನ್ ವೈಟ್, ಪ್ಯೂರ್ ಗ್ರೇ, ರಾಯಲ್ ಬ್ಲೂ, ಎಂಬರ್ ಗ್ಲೊ ಮತ್ತು ಡ್ಯೂನ್ ಗ್ಲೊ ಬಣ್ಣದಲ್ಲಿ ದೊರೆಯಲಿದೆ. ಡ್ಯಾಶ್‌ಬೋರ್ಡ್ ಹೊಸದಾಗಿ ವಿನ್ಯಾಸಗೊಂಡಿದೆ. ಡ್ರೈವರ್ ಡಿಸ್ಪ್ಲೇಯಲ್ಲಿಯೂ ನ್ಯಾವಿಗೇಷನ್ ಸೌಲಭ್ಯ ವಿದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಸೌಲಭ್ಯವಿದೆ. ಇದು ವೈರ್‌ಲೆಸ್ ಆ್ಯಂಡ್ರ್ಯಾಯ್ಡ್ ಆಟೊ ಮತ್ತು ಆ್ಯಪಲ್ ಕಾರ್ ಪ್ಲೇ ಅನ್ನು ಬೆಂಬಲಿಸುತ್ತದೆ. ಸಿಂಗಲ್ ಪ್ಯಾನ್ ಸನ್‌ರೂಫ್, ಹೊಸ ಆರಾಮದಾಯಕ ಸೀಟುಗಳು ಮತ್ತು 360 ಡಿಗ್ರಿ ಕ್ಯಾಮೆರಾ ವೈಶಿಷ್ಟ್ಯವನ್ನು ಹೊಂದಿದೆ.
ಗ್ರಿಲ್, ಹೆಡ್‌ಲ್ಯಾಂಪ್, ಟೈಲ್‌ಲ್ಯಾಂಪ್, ಕನೆಕ್ಟಿಂಗ್ ಎಲ್‌ಇಡಿ ಬಾರ್ ಮತ್ತು ಫ್ಲಶ್ ಡೋರ್ ಹ್ಯಾಂಡಲ್ ಹಾಗೂ ಹೊಸ ವಿನ್ಯಾಸದ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. 1.2 ಲೀಟರ್ ಪೆಟ್ರೋಲ್, 1.5 ಲೀಟರ್ ಟರ್ಬೊ ಡೀಸೆಲ್ ಮತ್ತು ಎರಡು ಸಿಲಿಂಡರ್ ಸಹಿತ 1.2 ಲೀಟರ್ ಸಾಮರ್ಥ್ಯದ ಸಿಎನ್‌ಜಿ ಎಂಜಿನ್ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.