ADVERTISEMENT

ಒಪ್ಪಿಗೆ ಪಡೆಯದೇ ಷೇರು ಸ್ವಾಧೀನ: ಎನ್‌ಡಿಟಿವಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 16:25 IST
Last Updated 24 ಆಗಸ್ಟ್ 2022, 16:25 IST

ಬೆಂಗಳೂರು: ನ್ಯೂಡೆಲ್ಲಿ ಟೆಲಿವಿಷನ್‌ ಲಿಮಿಟೆಡ್‌ (ಎನ್‌ಡಿಟಿವಿ) ಅಥವಾ ಅದರ ಸ್ಥಾಪಕ ಪ್ರವರ್ತಕರ ಒಪ್ಪಿಗೆ ಪಡೆಯದೇ ಶೇಕಡ 29ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂಬ ನೋಟಿಸ್‌ಅನ್ನು ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈ.ಲಿ. (ವಿಸಿಪಿಎಲ್‌) ನೀಡಿದೆ ಎಂದು ಎನ್‌ಡಿಟಿವಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಎನ್‌ಡಿಟಿವಿಯ ಪ್ರವರ್ತಕ ಸಮೂಹ ಕಂಪನಿ ಆಗಿರುವ ಆರ್‌ಆರ್‌ಪಿಆರ್‌ ಹೋಲ್ಡಿಂಗ್‌ ಪ್ರೈವೇಟ್‌ ಲಿಮಿಟೆಡ್‌ಅನ್ನುತನ್ನನಿಯಂತ್ರಣಕ್ಕೆಪಡೆದುಕೊಂಡಿರುವುದಾಗಿ ವಿಸಿಪಿಎಲ್‌, ಎನ್‌ಡಿಟಿವಿ ಮತ್ತು ಅದರ ಪ್ರವರ್ತಕರಿಗೆ ನೋಟಿಸ್‌ ಮೂಲಕ ತಿಳಿಸಿದೆ. ಷೇರುಗಳನ್ನು ವಿಸಿಪಿಎಲ್‌ಗೆ ವರ್ಗಾವಣೆ ಮಾಡಲು ಆರ್‌ಆರ್‌ಪಿಆರ್‌ ಕಂಪನಿಗೆ ಎರಡು ದಿನ ಸಮಯ ನೀಡಲಾಗಿದೆ.

ವಿಸಿಪಿಎಲ್‌ ಕಂಪನಿಯು ಎನ್‌ಡಿಟಿವಿಗೆ ಸಾಲ ನೀಡಿತ್ತು. ಈ ಕುರಿತು ಎನ್‌ಡಿಟಿವಿ ಸ್ಥಾಪಕರಾದ ರಾಧಿಕಾ ಮತ್ತು ಪ್ರಣಯ್‌ ರಾಯ್‌ ಅವರೊಂದಿಗೆ 2009–10ರಲ್ಲಿ ಸಾಲ ಒಪ್ಪಂದ ಮಾಡಿಕೊಂಡಿತ್ತು.

ADVERTISEMENT

ನವದೆಹಲಿ (ಪಿಟಿಐ ವರದಿ): ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಆದೇಶವೊಂದರಲ್ಲಿ ಇರುವ ಮಾಹಿತಿಯ ಪ್ರಕಾರ, ವಿಸಿಪಿಎಲ್‌ನ ವಾರ್ಷಿಕ ವಹಿವಾಟು ಮೊತ್ತವು 2017ನೇ ಹಣಕಾಸು ವರ್ಷದಲ್ಲಿ ₹ 60 ಸಾವಿರ. ಆದರೆ, 2009ರಲ್ಲಿ ಈ ಕಂಪನಿಯು ಎನ್‌ಡಿಟಿವಿಗೆ ಬಡ್ಡಿ ರಹಿತವಾಗಿ ₹ 400 ಕೋಟಿ ಸಾಲ ನೀಡಿದೆ.

ಆರ್‌ಆರ್‌ಪಿಆರ್‌ ಅನ್ನು ಮಾರಾಟ ಮಾಡಲು ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಖರೀದಿದಾರರನ್ನು ಹುಡುಕಲು ಎರಡೂ ಕಂಪನಿಗಳಿಗೆ ಸಾಲ ಒಪ್ಪಂದಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ, ಖರೀದಿದಾರ ಎನ್‌ಡಿಟಿವಿಯ ಬ್ರ್ಯಾಂಡ್‌ ಮತ್ತು ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳಬೇಕು ಎಂದು ಹೇಳಲಾಗಿತ್ತು.

ರಾಧಿಕಾ ರಾಯ್‌ ಮತ್ತು ಪ್ರಣಯ್‌ ರಾಯ್‌ ಅವರು ಆರ್‌ಆರ್‌ಪಿಆರ್‌ ಹೋಲ್ಡಿಂಗ್ಸ್‌ ಅನ್ನು ಸ್ಥಾಪಿಸಿದ್ದು, ಈ ಕಂಪನಿಯು ಎನ್‌ಡಿಟಿವಿಯಲ್ಲಿ ಶೇ 29.18ರಷ್ಟು ಷೇರುಪಾಲು ಹೊಂದಿತ್ತು. ಅದನ್ನು ವಿಸಿಪಿಎಲ್‌ಗೆ ವರ್ಗಾಯಿಸಲಾಗಿದೆ. ಆ ಬಳಿಕ ಅದಾನಿ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ಮತ್ತು ಎಎಂಜಿ ಮೀಡಿಯಾ ನೆಟ್‌ವರ್ಕ್ಸ್‌ ಲಿಮಿಟೆಡ್‌ಗೆ ಮಾರಾಟ ಮಾಡಲಾಗಿದೆ.

ವಿಸಿಪಿಎಲ್‌ನಿಂದ ಬಡ್ಡಿ ರಹಿತ ಸಾಲ!:

ಇಂಡಿಯಾಬುಲ್ಸ್‌ನಿಂದ ಪಡೆದಿದ್ದ ಸಾಲವನ್ನು ತೀರಿಸಲು ಎನ್‌ಡಿಟಿವಿಯು ಐಸಿಐಸಿಐ ಬ್ಯಾಂಕ್‌ನಿಂದ ವರ್ಷಕ್ಕೆ ಶೇ 19ರಷ್ಟು ಬಡ್ಡಿದರಕ್ಕೆ ಸಾಲ ಪಡೆಯಿತು. ಆ ಬಳಿಕ ಐಸಿಐಸಿಐ ಬ್ಯಾಂಕ್‌ನಿಂದ ಪಡೆದಿದ್ದ ಸಾಲವನ್ನು ತೀರಿಸಲು ಎನ್‌ಡಿಟಿವಿಯು 2009ರಲ್ಲಿ ವಿಸಿಪಿಎಲ್‌ನಿಂದ ₹ 350 ಕೋಟಿ ಸಾಲವನ್ನು ಬಡ್ಡಿ ರಹಿತವಾಗಿ ಪ‍ಡೆಯಿತು. ಒಂದು ವರ್ಷದ ಬಳಿಕ ವಿಸಿಪಿಎಲ್‌ನಿಂದ ಮತ್ತೆ ₹ 53.85 ಕೋಟಿ ಸಾಲ ಪಡೆದುಕೊಂಡಿತು.

ಒಪ್ಪಂದದ ಪ್ರಕಾರ, ಆರ್‌ಆರ್‌ಪಿಆರ್‌ನಲ್ಲಿ ಪ್ರವರ್ತಕರು ಹೊಂದಿರುವ ಎಲ್ಲ ಷೇರುಗಳನ್ನು ಖರೀದಿಸುವ ಹಕ್ಕನ್ನು ವಿಸಿಪಿಎಲ್‌ ಪಡೆದುಕೊಂಡಿದೆ.

ವಿಸಿಪಿಎಲ್‌ ಆಗಲಿ ಅದರ ಸಹವರ್ತಿ ಕಂಪ‍ನಿಗಳಾಗಲಿ ಸಾಲ ನೀಡಿರುವ ಯಾವುದೇ ಇತಿಹಾಸವೂ ಇಲ್ಲ. ಮೇಲಾಗಿ ಬಡ್ಡಿರಹಿತವಾಗಿ ಸಾಲ ನೀಡುವ ಸಾಮರ್ಥ್ಯವನ್ನೂ ಹೊಂದಿರುವಂತೆ ಕಾಣುತ್ತಿಲ್ಲ ಎನ್ನುವುದನ್ನು ಸೆಬಿ ಗುರುತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.