ADVERTISEMENT

ವಿಶೇಷ ಹೂಡಿಕೆ ವಲಯ ಸ್ಥಾಪನೆಗೆ ಕಾಯ್ದೆ: ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 16:56 IST
Last Updated 13 ಫೆಬ್ರುವರಿ 2021, 16:56 IST
ಜಗದೀಶ್‌ ಶೆಟ್ಟರ್‌
ಜಗದೀಶ್‌ ಶೆಟ್ಟರ್‌   

ಹುಬ್ಬಳ್ಳಿ: ಕೈಗಾರಿಕೆಗಳ ಸ್ಥಾಪನೆಯಲ್ಲಿ ಹಿಂದುಳಿದಿರುವ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಬಂಡವಾಳ ಹೂಡಿಕೆಗೆ ಅನುಕೂಲ ಕಲ್ಪಿಸಲು ಹುಬ್ಬಳ್ಳಿ–ಧಾರವಾಡ, ಶಿವಮೊಗ್ಗ ಹಾಗೂ ಕಲಬುರ್ಗಿಯನ್ನು ಕೇಂದ್ರವಾಗಿರಿಸಿಕೊಂಡು ವಿಶೇಷ ಹೂಡಿಕೆ ವಲಯ ಸ್ಥಾಪನೆಗೆ ಕಾಯ್ದೆ ರಚಿಸಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ನೂತನ ಕೈಗಾರಿಕಾ ನೀತಿ 2020–25 ಮತ್ತು ಹೂಡಿಕೆ ಅವಕಾಶಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದ ಅವರು ‘ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ಹಿಂದುಳಿದ ತಾಲ್ಲೂಕುಗಳನ್ನು ವಲಯವಾರು ಗುಂಪುಗಳಾಗಿ ವಿಂಗಡಿಸಲಾಗಿದೆ. ವಿಶೇಷ ಹೂಡಿಕೆ ವಲಯ ಸ್ಥಾಪಿಸಿ, ಪ್ರತ್ಯೇಕ ಪ್ರೋತ್ಸಾಹ, ರಿಯಾಯಿತಿ ನೀಡಲಾಗುವುದು. ಬರುವ ವಿಧಾನ ಮಂಡಲ ಅಧಿವೇಶನದಲ್ಲಿ ವಿಶೇಷ ಹೂಡಿಕೆ ವಲಯ ಮಸೂದೆ ಮಂಡಿಸಲಾಗುವುದು’ ಎಂದರು.

‘ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ಯಮಿಗಳಿಗೆ ಅನುಕೂಲ ಕಲ್ಪಿಸಲು ಪರವಾನಗಿಗೆ ಸಲ್ಲಿಸಿದ ಅರ್ಜಿಗಳನ್ನು ಆಯಾ ತಿಂಗಳಲ್ಲೇ ಪರಿಶೀಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.

ADVERTISEMENT

‘ನೀತಿ ಆಯೋಗದಿಂದ ತುಮಕೂರು ನಾಡ್ ಕಾರಿಡಾರ್ ಸ್ಥಾಪನೆಗೆ ₹1,700 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ₹600 ಕೋಟಿ ಭೂಸ್ವಾಧೀನ ಪ್ರಕ್ರಿಯೆಗೆ ಬಳಸಿಕೊಳ್ಳಲಾಗುತ್ತದೆ. ನೀತಿ ಆಯೋಗದ ಸೂಚನೆ ಮೇರೆಗೆ ರಾಜ್ಯದಲ್ಲಿ 4,000ಕ್ಕೂ ಹೆಚ್ಚು ಭೂಮಿ ಸ್ವಾಧೀನ ಪಡಿಸಿಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.