ADVERTISEMENT

ಅದಾನಿ ಸಮೂಹದ ಮೌಲ್ಯ ಶೇ 88 ಏರಿಕೆ

ರಿಲಯನ್ಸ್ ಮಾರುಕಟ್ಟೆ ಮೌಲ್ಯ ಶೇ 13.4ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 20:30 IST
Last Updated 15 ಜೂನ್ 2022, 20:30 IST
   

ಮುಂಬೈ : ಏಪ್ರಿಲ್‌ಗೆ ಕೊನೆಗೊಂಡ ಆರು ತಿಂಗಳ ಅವಧಿಯಲ್ಲಿ (2021ರ ನವೆಂಬರ್‌ನಿಂದ 2022ರ ಏಪ್ರಿಲ್‌ ಕೊನೆಯವರೆಗೆ) ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯವು ಶೇಕಡ 88.1ರಷ್ಟು ಹೆಚ್ಚಾಗಿ, ₹ 17.6 ಲಕ್ಷ ಕೋಟಿಗೆ ತಲುಪಿದೆ.

ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾರುಕಟ್ಟೆಯ ಮೌಲ್ಯವು ಇದೇ ಅವಧಿಯಲ್ಲಿ ಶೇ 13.4ರಷ್ಟು ಏರಿಕೆ ಕಂಡು, ₹ 18.87 ಲಕ್ಷ ಕೋಟಿಗೆ ತಲುಪಿದೆ ಎಂದು ಬರ್ಗುಂಡಿ ಪ್ರೈವೇಟ್ ಹುರೂನ್ ಇಂಡಿಯಾ 500 ವರದಿ ಹೇಳಿದೆ.

ಮಾರುಕಟ್ಟೆ ಬಂಡವಾಳದ ಲೆಕ್ಕಾಚಾರದಲ್ಲಿ ದೇಶದ ಎರಡನೆಯ ಅತಿದೊಡ್ಡ ಕಂಪನಿಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮಾರುಕಟ್ಟೆ ಮೌಲ್ಯವು ಶೇ 0.9ರಷ್ಟು ಜಾಸ್ತಿ ಆಗಿದ್ದು, ₹ 12.97 ಲಕ್ಷ ಕೋಟಿಗೆ ತಲುಪಿದೆ ಎಂದು ವರದಿ ಹೇಳಿದೆ. ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೊಸಿಸ್ ಮತ್ತು ಐಸಿಐಸಿಐ ಬ್ಯಾಂಕ್ ನಂತರದ ಸ್ಥಾನಗಳಲ್ಲಿ ಇವೆ. ಅದಾನಿ ಸಮೂಹಕ್ಕೆ ಸೇರಿದ ಅದಾನಿ ಗ್ರೀನ್ ಎನರ್ಜಿ ಕಂಪನಿಯ ಮಾರುಕಟ್ಟೆ ಮೌಲ್ಯವು ಶೇ 139ರಷ್ಟು ಜಾಸ್ತಿ ಆಗಿ, ₹ 4.50 ಲಕ್ಷ ಕೋಟಿಗೆ ತಲುಪಿದೆ. ಅದಾನಿ ವಿಲ್ಮರ್ ಮೌಲ್ಯವು ಸರಿ
ಸುಮಾರು ಶೇ 190ರಷ್ಟು, ಅದಾನಿ ಪವರ್ ಮೌಲ್ಯ ಶೇ 157.8ರಷ್ಟು ಬೆಳವಣಿಗೆ ಕಂಡಿದೆ.

ADVERTISEMENT

‘ಆರು ತಿಂಗಳಲ್ಲಿ ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯ ಶೇ 88.1ರಷ್ಟು ಬೆಳವಣಿಗೆ ಕಂಡರೆ, ಟಾಪ್–500 ಪಟ್ಟಿಯ ಇತರ ಕಂಪನಿಗಳ ಮಾರುಕಟ್ಟೆ ಮೌಲ್ಯವು ಶೇ 2ರಷ್ಟು ಹೆಚ್ಚಾಗಿದೆ’ ಎಂದು ವರದಿ ಹೇಳಿದೆ.

ಭಾರತದ ಕಂಪನಿಗಳ ಸಾಧನೆಯು ಜಾಗತಿಕ ಮಟ್ಟದ ಇತರ ಕಂಪನಿಗಳಿಗಿಂತ ಉತ್ತಮವಾಗಿರುವುದು ದೇಶದ ಅರ್ಥ ವ್ಯವಸ್ಥೆಯ ಶಕ್ತಿಯನ್ನು ತೋರಿಸುತ್ತಿದೆ ಎಂದು ಹುರೂನ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಸಂಶೋಧಕ ಅನಸ್ ರಹಮಾನ್ ಜುನೈದ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.