ADVERTISEMENT

ಅದಾನಿ ಎಂಟರ್‌ಪ್ರೈಸಸ್‌ನಿಂದ ₹ 20 ಸಾವಿರ ಕೋಟಿ ಎಫ್‌ಪಿಒ

ಏಜೆನ್ಸೀಸ್
Published 18 ಜನವರಿ 2023, 23:01 IST
Last Updated 18 ಜನವರಿ 2023, 23:01 IST
.
.   

ನವದೆಹಲಿ/ಬೆಂಗಳೂರು: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ನೇತೃತ್ವದ ಅದಾನಿ ಎಂಟರ್‌ಪ್ರೈಸಸ್‌ ಕಂಪನಿಯು ಹೊಸದಾಗಿ ಷೇರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ (ಎಫ್‌ಪಿಒ) ಮೂಲಕ ₹ 20 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಪತ್ರಗಳನ್ನು ಕಂಪನಿಯು ಷೇರುಪೇಟೆಗೆ ಸಲ್ಲಿಸಿದೆ.

ಕಂಪನಿಯ ಎಫ್‌ಪಿಒ ಜನವರಿ 27ರಿಂದ 31ರವರೆಗೆ ನಡೆಯಲಿದೆ. ಸಂಗ್ರಹವಾಗುವ ₹ 20 ಸಾವಿರ ಕೋಟಿಯಲ್ಲಿ ₹ 10,869 ಕೋಟಿಯನ್ನು ಕಂಪನಿಯು ಪರಿಸರಪೂರಕ ಹೈಡ್ರೋಜನ್ ಯೋಜನೆಗಳಿಗೆ, ಕಂಪನಿ ನಿರ್ವಹಿಸುತ್ತಿರುವ ವಿಮಾನ ನಿಲ್ದಾಣಗಳಿಗೆ ಹಾಗೂ ಇನ್ನಿತರ ಕೆಲಸಗಳಿಗೆ ವಿನಿಯೋಗಿಸಲಿದೆ. ₹ 4,165 ಕೋಟಿಯನ್ನು ಕಂಪನಿಯು ಸಾಲ ಮರುಪಾವತಿಗೆ ಬಳಸಿಕೊಳ್ಳಲಿದೆ.

ಅದಾನಿ ಏರ್‌ಪೋರ್ಟ್‌ ಹೋಲ್ಡಿಂಗ್ಸ್ ಲಿಮಿಟೆಡ್, ಅದಾನಿ ರೋಡ್ ಟ್ರಾನ್ಸ್‌ಪೋರ್ಟ್ ಲಿ,. ಮತ್ತು ಮುಂದ್ರಾ ಸೋಲಾರ್ ಲಿ. ಕಂಪನಿಗಳ ಸಾಲ ಮರುಪಾವತಿಗೆ ಈ ಮೊತ್ತ ಬಳಕೆಯಾಗುತ್ತದೆ. ಎಫ್‌ಪಿಒ ಸಂದರ್ಭದಲ್ಲಿ ಷೇರು ಬೆಲೆಯು ಏನಿರುತ್ತದೆ ಎಂಬುದನ್ನು ಅದಾನಿ ಎಂಟರ್‌ಪ್ರೈಸಸ್‌ ಸ್ಪಷ್ಟಪಡಿಸಿಲ್ಲ.

ADVERTISEMENT

ಅದಾನಿ ಸಮೂಹವು ಸಿಮೆಂಟ್‌, ಆರೋಗ್ಯಸೇವೆಯಂತಹ ಕ್ಷೇತ್ರಗಳಿಗೆ ತನ್ನ ಚಟುವಟಿಕೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ಸಮೂಹದ ಸಾಲದ ಮೊತ್ತವು ಹೆಚ್ಚಿದೆ ಎಂಬ ಕಳವಳ ಕೂಡ ಇದೆ. ಡೀಲಾಜಿಕ್‌ ಅಂಕಿ–ಅಂಶದ ಅನ್ವಯ ಅದಾನಿ ಸಮೂಹವು 2022ರಲ್ಲಿ ಒಟ್ಟು ₹ 1.12 ಲಕ್ಷ ಕೋಟಿ ಮೌಲ್ಯದ ಸ್ವಾಧೀನ ಪ್ರಕ್ರಿಯೆಯನ್ನು 2022ರಲ್ಲಿ ನಡೆಸಿದೆ. ಇದು ವರ್ಷವೊಂದರಲ್ಲಿ ಈ ಸಮೂಹ ಸ್ವಾಧೀನಕ್ಕೆ ವಿನಿಯೋಗಿಸಿರುವ ಅತಿದೊಡ್ಡ ಮೊತ್ತ. 2022ರಲ್ಲಿ ಅದಾನಿ ಎಂಟರ್‌ಪ್ರೈಸಸ್‌ ಷೇರು ಮೌಲ್ಯವು ಸರಿಸುಮಾರು ಶೇಕಡ 130ರಷ್ಟು ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.