
ಆದರ್ಶ್ ಹಿರೇಮಠ
ಎಕ್ಸ್ ಚಿತ್ರ
ವಾಷಿಂಗ್ಟನ್: ವಯಸ್ಸು 22, ಹಾರ್ವರ್ಡ್ ವಿಶ್ವವಿದ್ಯಾಲಯದ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಕನ್ನಡಿಗ ಆದರ್ಶ ಹಿರೇಮಠ ಅವರು ಸ್ನೇಹಿತರ ಜತೆಗೂಡಿ ತಮ್ಮದೇ ಸಂಸ್ಥೆ ಸ್ಥಾಪಿಸುವ ಮೂಲಕ ಶತಕೋಟಿ ಒಡೆಯ ಎನಿಸಿಕೊಂಡಿದ್ದಾರೆ.
ಫೇಸ್‌ಬುಕ್‌ನ ಸಂಸ್ಥಾಪ ಮಾರ್ಕ್ ಝುಕರ್‌ಬರ್ಗ್ ಒಂದು ಕಾಲದಲ್ಲಿ ಹೊಂದಿದ್ದ ಯುವ ಶತಕೋಟಿ ಒಡೆಯ ಬಿರುದನ್ನು ಈಗ ತಮ್ಮದಾಗಿಸಿಕೊಂಡಿದ್ದಾರೆ ಆದರ್ಶ್.
ಶತಕೋಟಿ ಒಡೆಯನಾಗಲು ಆದರ್ಶ್ ಅವರಿಗೆ ನೆರವಾಗಿದ್ದು ಕೃತಕ ಬುದ್ಧಿಮತ್ತೆ. ಸ್ಟಾರ್ಟ್‌ಅಪ್‌ಗಳಿಗೆ ನೆರವಾಗಿರುವ ಇವರ ತಂತ್ರಾಂಶದ ಮೌಲ್ಯ 10 ಶತಕೋಟಿ ಅಮೆರಿಕನ್ ಡಾಲರ್ ಅಂದರೆ ₹90 ಸಾವಿರ ಕೋಟಿಗೆ ಏರಿಕೆಯಾಗಿದ್ದು, ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಮಾಡಿದೆ.
ಈ ಸಾಹಸದಲ್ಲಿ ಆದರ್ಶ್ ಅವರಿಗೆ ನೆರವಾದವರು ಅವರ ಸ್ನೇಹಿತರಾದ ಭಾರತ ಮೂಲದ ಸೂರ್ಯ ಮಿಧಾ ಮತ್ತು ಅಮೆರಿಕದವರೇ ಆದ ಬ್ರೆಂಡಾನ್ ಫುಡಿ. ಈ ಮೂವರು ಮೊದಲು ಭೇಟಿಯಾಗಿದ್ದು ಶಾಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ. ಇದೇ ತಂಡ ಪ್ರತಿಷ್ಠಿತ ಥೀಲ್ ಶಿಷ್ಯವೇತನವನ್ನೂ ಪಡೆಯಿತು. ನಂತರ ಕಾಲೇಜು ತೊರೆದ ಈ ತಂಡ ಆರಂಭಿಸಿದ್ದು ಸ್ಟಾರ್ಟ್‌ಅಪ್. ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಅಭಿವೃದ್ಧಿಪಡಿಸುವ ಮೂಲಕ ಅತಿದೊಡ್ಡ ನೇಮಕಾತಿ ಮಾರುಕಟ್ಟೆ ವೇದಿಕೆಯನ್ನು ಇವರು ಕಲ್ಪಿಸಿದ್ದಾರೆ.
2023ರಲ್ಲಿ ಇವರ ಕಂಪನಿ ಆರಂಭಗೊಂಡಿತು. ಅದೇ ವರ್ಷ 9 ತಿಂಗಳ ಒಳಗಾಗಿ ಇವರ ಕಂಪನಿ ₹9 ಕೋಟಿ ಆದಾಯ ಗಳಿಸಿತು. ಆದರೆ 2025ರ ಜೂನ್‌ನಲ್ಲಿ ಮೆಟಾ ಕಂಪನಿಯು ಸ್ಕೇಲ್.ಎಐನ ಶೇ 49ರಷ್ಟು ಪಾಲನ್ನು ₹1.25 ಲಕ್ಷ ಕೋಟಿ ಕೊಟ್ಟು ಖರೀದಿಸಿತು. ಇದರಿಂದ ಬಹಳಷ್ಟು ಬಳಕೆದಾರರು ಸ್ಕೇಲ್ ತೊರೆದು ತಟಸ್ಥ ಧೋರಣೆ ಹೊಂದಿರುವ ಆದರ್ಶ್ ಅವರ ಮೆರ್ಕರ್‌ನ ಎಐ ಸಾಧನ ಬಳಸಲು ಆರಂಭಿಸಿದರು.
ಇದರ ಪರಿಣಾಮ ಮೆರ್ಕರ್ ವೇದಿಕೆಯು ವಾರ್ಷಿಕ ₹4.5 ಸಾವಿರ ಕೋಟಿ ಆದಾಯ ಖರೀದಿಸಿತು. ವೈದ್ಯರು, ವಕೀಲರು, ಸಮಾಲೋಚಕರು, ಬ್ಯಾಂಕರ್‌ಗಳನ್ನು ಒಳಗೊಂಡ 30 ಸಾವಿರ ತಜ್ಞರೊಂದಿಗೆ ಕಂಪನಿ ಒಡಂಬಡಿಕೆ ಮಾಡಿಕೊಂಡಿತು. ಅವರಿಗೆ ತರಬೇತಿ, ಪರೀಕ್ಷೆ ಮತ್ತು ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ತಮ್ಮ ಕೃತಕ ಬುದ್ಧಿಮತ್ತೆಗೆ ತುಂಬಿದರು. ಇದಕ್ಕಾಗಿ ತಜ್ಞರಿಗೆ ಪ್ರತಿ ಗಂಟೆಗೆ 85 ಡಾಲರ್ ನೀಡಿತು. ಸದ್ಯ ಮೆರ್ಕರ್ ಕಂಪನಿಯು ತಮ್ಮ ಈ ಸಂಪರ್ಕ ಜಾಲಕ್ಕಾಗಿಯೇ ಪ್ರತಿನಿತ್ಯ ₹13.5 ಕೋಟಿ ಖರ್ಚು ಮಾಡುತ್ತಿದೆ.
ಕಂಪನಿಯ ಈ ಬೆಳವಣಿಗೆಯು 2 ಶತಕೋಟಿ ಡಾಲರ್ ಕಂಪನಿಯನ್ನು 10 ಶತಕೋಟಿ ಡಾಲರ್ ಕಂಪನಿಯ ಮಟ್ಟಕ್ಕೆ ಬೆಳೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.