ADVERTISEMENT

ಕೋವಿಡ್‌: ಮೂರು ಪಟ್ಟುನೆರವು ಹೆಚ್ಚಿಸಿದ ‘ಎಡಿಬಿ’

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 19:30 IST
Last Updated 13 ಏಪ್ರಿಲ್ 2020, 19:30 IST
   

ನವದೆಹಲಿ: ‘ಕೋವಿಡ್‌–19’ ಪಿಡುಗು ತಡೆಗಟ್ಟಲು ತನ್ನ ಸದಸ್ಯ ದೇಶಗಳಿಗೆ ನೀಡುವ ನೆರವಿನ ಪ್ರಮಾಣವನ್ನು ಮೂರು ಪಟ್ಟು ಹೆಚ್ಚಿಸಿರುವುದಾಗಿ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಪ್ರಕಟಿಸಿದೆ.

ಒಟ್ಟು ₹ 1.50 ಲಕ್ಷ ಕೋಟಿ ನೆರವು ನೀಡಲು ಬ್ಯಾಂಕ್‌ ಮುಂದಾಗಿದೆ. ಇದರಲ್ಲಿ ₹ 18,700 ಕೋಟಿ ಮೊತ್ತದ ನೆರವು ರಿಯಾಯ್ತಿ ಮತ್ತು ಅನುದಾನ ರೂಪದಲ್ಲಿ ಇರಲಿದೆ. ಮಾರ್ಚ್‌ನಲ್ಲಿ ಪ್ರಕಟಿಸಿದ್ದ ₹ 48,750 ಕೋಟಿಗಳ ಆರಂಭಿಕ ನೆರವನ್ನು ಈ ಹೊಸ ಕೊಡುಗೆಯು ಗಮನಾರ್ಹವಾಗಿ ಹೆಚ್ಚಿಸಿದೆ.

‘ಕೋವಿಡ್‌’ನಿಂದಾಗಿ ಆರ್ಥಿಕ ಸಂಕಷ್ಟ ಮತ್ತು ಆರೋಗ್ಯ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ದೇಶಗಳಿಗೆ ಈ ಹಣಕಾಸಿನ ನೆರವು ಪ್ರಯೋಜನಕ್ಕೆ ಬರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

‘ಕೋವಿಡ್‌ ಪಿಡುಗಿನ ಬೆದರಿಕೆಯು ಏಷ್ಯಾ ಮತ್ತು ಪೆಸಿಫಿಕ್‌ ಪ್ರದೇಶದಲ್ಲಿನ ದೇಶಗಳ ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿನ ಪ್ರಗತಿಗೆ ಮಾರಕವಾಗಿ ಪರಿಣಮಿಸಿದೆ. ಅರ್ಥ ವ್ಯವಸ್ಥೆಯು ಹಿಂಜರಿತಕ್ಕೆ ಒಳಗಾಗುವಂತೆ ಮಾಡಿದೆ’ ಎಂದು ‘ಎಡಿಬಿ’ ಅಧ್ಯಕ್ಷ ಮಸತ್ಸುಗು ಅಸಕಾವಾ ಹೇಳಿದ್ದಾರೆ.

’ಪಿಡುಗು ನಿಯಂತ್ರಣದಲ್ಲಿ ಎದುರಾಗಿರುವ ಸವಾಲುಗಳನ್ನು ಸರ್ಕಾರ ಮತ್ತು ಖಾಸಗಿ ವಲಯವು ತುರ್ತಾಗಿ ಎದುರಿಸಲು ಈ ಕೊಡುಗೆಯನ್ನು ತ್ವರಿತವಾಗಿ ನೀಡಲಾಗುವುದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.