ADVERTISEMENT

₹20 ಲಕ್ಷ ಕೋಟಿಗೂ ಹೆಚ್ಚು ಕೃಷಿ ಸಾಲ ವಿತರಣೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 15:56 IST
Last Updated 22 ಫೆಬ್ರುವರಿ 2024, 15:56 IST
   

ನವದೆಹಲಿ: ಪ್ರಸಕ್ತ ವರ್ಷದ ಜನವರಿ ಅಂತ್ಯದವರೆಗೆ ದೇಶದಲ್ಲಿ ರೈತರಿಗೆ ₹20.39 ಲಕ್ಷ ಕೋಟಿಯಷ್ಟು ಕೃಷಿ ಸಾಲ ವಿತರಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.

2023–24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಸರ್ಕಾರವು ₹20 ಲಕ್ಷ ಕೋಟಿ ಸಾಲ ನೀಡುವ ಗುರಿ ನಿಗದಿಪಡಿಸಿತ್ತು. ಆದರೆ, ಬ್ಯಾಂಕ್‌ಗಳು ಈ ಗುರಿಯನ್ನು ಮೀರಿ ಸಾಲ ನೀಡಿವೆ ಎಂದು ಹೇಳಿದೆ.

2013–14ನೇ ಸಾಲಿನಡಿ ಕೃಷಿ ವಲಯಕ್ಕೆ ಒಟ್ಟು ₹7.3 ಲಕ್ಷ ಕೋಟಿ ಸಾಲ ನೀಡಲಾಗಿತ್ತು. ಒಂದು ದಶಕದ ಅವಧಿಯಲ್ಲಿ ಸಾಲ ನೀಡಿಕೆಯಲ್ಲಿ ಗಮನಾರ್ಹವಾಗಿ ಹೆಚ್ಚಳವಾಗಿದೆ ಎಂದು ತಿಳಿಸಿದೆ.

ADVERTISEMENT

ಕೃಷಿ ಮತ್ತು ಇತರೆ ಪೂರಕ ಚಟುವಟಿಕೆಗಳಲ್ಲಿ ತೊಡಗಿರುವ ರೈತರಿಗೆ ವಾರ್ಷಿಕ ಶೇ 7ರ ಬಡ್ಡಿದರದಲ್ಲಿ ₹3 ಲಕ್ಷದ ವರೆಗೆ ಅಲ್ಪಾವಧಿ ಕೃಷಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ತ್ವರಿತ ಮತ್ತು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ರೈತರಿಗೆ ಹೆಚ್ಚುವರಿಯಾಗಿ ಶೇ 3ರ ಬಡ್ಡಿ ಸಹಾಯಧನವೂ ದೊರೆಯಲಿದೆ. ಹಾಗಾಗಿ, ಸಕಾಲದಲ್ಲಿ ಮರುಪಾವತಿಸುವ ರೈತರು ವಾರ್ಷಿಕ ಶೇ 4ರಷ್ಟು ಬಡ್ಡಿಯನ್ನಷ್ಟೇ ಪಾವತಿಸುತ್ತಾರೆ ಎಂದು ಹೇಳಿದೆ.

2022–23ರಲ್ಲಿ ₹18.50 ಲಕ್ಷ ಕೋಟಿ ಕೃಷಿ ಸಾಲ ನೀಡುವ ಗುರಿ ಹೊಂದಿದ್ದು, ಒಟ್ಟು ₹21.55 ಲಕ್ಷ ಕೋಟಿ ಸಾಲ ವಿತರಿಸಲಾಗಿತ್ತು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.