ADVERTISEMENT

ಎರಡು ಹೊಸ ಭತ್ತದ ತಳಿ ಬಿಡುಗಡೆ ಮಾಡಿದ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌

ಪಿಟಿಐ
Published 4 ಮೇ 2025, 14:32 IST
Last Updated 4 ಮೇ 2025, 14:32 IST
<div class="paragraphs"><p>ಶಿವರಾಜ್‌ ಸಿಂಗ್‌ ಚೌಹಾಣ್‌ </p></div>

ಶಿವರಾಜ್‌ ಸಿಂಗ್‌ ಚೌಹಾಣ್‌

   

–ಪಿಟಿಐ ಚಿತ್ರ

ನವದೆಹಲಿ: ದೇಶದಲ್ಲಿ ಮೊದಲ ಬಾರಿಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನಿಂದ (ಐಸಿಎಆರ್‌) ಜೀನೋಮ್‌ ಎಡಿಟಿಂಗ್‌ ಮೂಲಕ ಅಭಿವೃದ್ಧಿಪಡಿಸಿರುವ ಎರಡು ಹೊಸ ಭತ್ತದ ತಳಿಗಳನ್ನು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು, ಭಾನುವಾರ ಬಿಡುಗಡೆ ಮಾಡಿದ್ದಾರೆ.

ADVERTISEMENT

ಬಳಿಕ ಮಾತನಾಡಿದ ಅವರು, ‘ಡಿಆರ್‌ಆರ್‌ ಧನ್‌ 100’ (ಕಮಲಾ) ಮತ್ತು ‘ಪೂಸಾ ಡಿಎಸ್‌ಟಿ ರೈಸ್ 1’ ಹೆಸರಿನ ಈ ತಳಿಗಳು ರೋಗ ನಿರೋಧಕ ಗುಣ ಹೊಂದಿದ್ದು, ಶೇ 30ರಷ್ಟು ಹೆಚ್ಚು ಇಳುವರಿ ನೀಡುತ್ತವೆ ಎಂದರು.

ಈ ತಳಿಗಳು ನೀರು ಸಂರಕ್ಷಣೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯ ಪ್ರಮಾಣ ತಗ್ಗಿಸುವಲ್ಲಿ ನೆರವಾಗಲಿವೆ. ಶೀಘ್ರವೇ, ದೇಶದ ರೈತರಿಗೆ ಈ ತಳಿಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ದೇಶದಲ್ಲಿ ಅತಿ ಹೆಚ್ಚಾಗಿ ಬೆಳೆಯುವ ಸಾಂಬಾ ಮಹಸೂರಿ (ಬಿಪಿಟಿ5204) ಮತ್ತು ಕೊಟ್ಟೊಂಡೊರಾ ಸನ್ನಾಲು (ಎಂಟಿಯು1010) ಭತ್ತದ ತಳಿ ಬಳಸಿಕೊಂಡು ಈ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹವಾಮಾನ ಸಹಿಷ್ಣು ಮತ್ತು ಅತಿಹೆಚ್ಚು ಇಳುವರಿ ನೀಡುತ್ತವೆ. ಮೂಲ ಭತ್ತದ ವಂಶವಾಹಿ ಗುಣಗಳನ್ನು ಉಳಿಸಿಕೊಂಡೇ ಈ ತಳಿಗಳನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಅತಿಹೆಚ್ಚು ಭತ್ತ ಬೆಳೆಯುವ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ, ಬಿಹಾರ, ಛತ್ತೀಸಗಢ, ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ, ಜಾರ್ಖಂಡ್‌, ಬಿಹಾರ ಮತ್ತು ಪಶ್ಚಿಮ ಬಂಗಾಳದ ರೈತರಿಗೆ ಈ ತಳಿಗಳನ್ನು ನೀಡಲು ನಿರ್ಧರಿಸಲಾಗಿದೆ. 

‘ಡಿಆರ್‌ಆರ್‌ ಧನ್‌ 100 ತಳಿಯ ಭತ್ತವು ಮೂಲ ಭತ್ತಕ್ಕಿಂತ 20 ದಿನಕ್ಕೂ ಮೊದಲೇ ಕಟಾವಿಗೆ ಬರುತ್ತದೆ. ಬೇಗ ಕೊಯ್ಲು ಮಾಡುವುದರಿಂದ ಬೆಳೆ ಮಾರ್ಪಾಡು ಮಾಡಿಕೊಳ್ಳಲು ಅಥವಾ ಬಹು ಬೆಳೆ ಬೆಳೆಯಲು ರೈತರಿಗೆ ನೆರವಾಗಲಿದೆ. ಈ ಭತ್ತವು ಕಡಿಮೆ ಅವಧಿಯಲ್ಲಿ ಕಟಾವಿಗೆ ಬರುವುದರಿಂದ ವರ್ಷದಲ್ಲಿ ಮೂರು ಫಸಲು ತೆಗೆಯಲು ನೆರವಾಗಲಿದೆ’ ಎಂದು ಚೌಹಾಣ್‌ ಹೇಳಿದರು.  

ಈ ಎರಡು ಹೊಸ ತಳಿಗಳನ್ನು 50 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವುದರಿಂದ  ಹೆಚ್ಚುವರಿಯಾಗಿ 45 ಲಕ್ಷ ಟನ್‌ನಷ್ಟು ಭತ್ತದ ಉತ್ಪಾದನೆಯಾಗಲಿದೆ ಎಂದರು.

ಕೃಷಿ ಕ್ಷೇತ್ರದ ಅಭಿವೃದ್ಧಿಯಾಗದ ಹೊರತು ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಾಧ್ಯವಿಲ್ಲ. ಇದಕ್ಕಾಗಿ ನವೀನ ತಂತ್ರಜ್ಞಾನಗಳನ್ನು ಬಳಸಬೇಕಿದೆ. ಐಸಿಎಆರ್‌ ವಿಜ್ಞಾನಿಗಳು ವಿವಿಧ ತಳಿಯ ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಬೀಜಗಳನ್ನು ಅಭಿವೃದ್ಧಿಪಡಿಸುವ ಮೂಲಕ ಆಮದು ಪ್ರಮಾಣವನ್ನು ತಗ್ಗಿಸಬೇಕಿದೆ ಎಂದರು.  

ಜೀನೋಮ್‌ ಎಡಿಟಿಂಗ್‌ ಎಂದರೇನು?:

ಜೀವಿಗಳ ಪ್ರತಿಯೊಂದು ಜೀವಕೋಶದಲ್ಲೂ ತಳಿಸೂತ್ರವಿದೆ. ಜೀವಕೋಶದ ಡಿಎನ್‌ಎಯನ್ನು ಕೃತಕವಾಗಿ ಬದಲಿಸುವ ವಿಧಾನಕ್ಕೆ ಜೀನೋಮ್‌ ಎಡಿಟಿಂಗ್‌ ಎಂದು ಕರೆಯಲಾಗುತ್ತದೆ.

ಜೀವಿಯೊಂದರ ವಂಶವಾಹಿಯನ್ನು ತೆಗೆದು ಅದನ್ನು ಮತ್ತೊಂದು ಜೀವಿಗೆ (ಪ್ರಾಣಿ ಅಥವಾ ಸಸ್ಯ ಅಥವಾ ಸೂಕ್ಷ್ಮಾಣು) ಸೇರಿಸಿ ಅದರ ದೈಹಿಕ ಗುಣಲಕ್ಷಣಗಳಲ್ಲಿ ಬದಲಾವಣೆ ತರಬಹುದಾಗಿದೆ. ಆ ಮೂಲಕ ನಿಸರ್ಗದಲ್ಲಿ ಕಾಣದಿದ್ದ ಹೊಸ ಜೀವಿ ಅಥವಾ ಸಸ್ಯಗಳ ತಳಿ ಸೃಷ್ಟಿಸಲು ಸಾಧ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.