
ನವದೆಹಲಿ: ಕೃತಕ ಬುದ್ಧಿಮತ್ತೆ (ಎ.ಐ) ಅಳವಡಿಕೆಯ ಕಾರಣದಿಂದಾಗಿ ಕಂಪನಿಗಳು ನಡೆಸುವ ಆರಂಭಿಕ ಹಂತದ ಉದ್ಯೋಗಿಗಳ ನೇಮಕಾತಿಯ ಪ್ರಮಾಣವು ಮಂದಗತಿಗೆ ತಿರುಗಿದೆ ಎಂದು ಐಸಿಆರ್‌ಐಇಆರ್ ವರದಿ ಹೇಳಿದೆ.
ಓಪನ್ ಎ.ಐ ಸಹಕಾರದೊಂದಿಗೆ ಅಂತರರಾಷ್ಟ್ರೀಯ ಆರ್ಥಿಕ ಬಾಂಧವ್ಯಕ್ಕೆ ಸಂಬಂಧಿಸಿದ ಭಾರತದ ಸಂಶೋಧನಾ ಮಂಡಳಿಯು (ಐಸಿಆರ್‌ಐಇಆರ್) ನಡೆಸಿದ ಅಧ್ಯಯನವು, ವಿವಿಧ ವಲಯಗಳಲ್ಲಿ ಎ.ಐ ಬಳಕೆಯು ನೇಮಕಾತಿಯಲ್ಲಿನ ಆದ್ಯತೆಗಳನ್ನು ಬದಲಾಯಿಸಿದೆ ಎಂದು ಹೇಳಿದೆ.
ನಿರ್ದಿಷ್ಟ ಕ್ಷೇತ್ರದಲ್ಲಿ ಹೆಚ್ಚಿನ ಪರಿಣತಿ ಹೊಂದಿರುವವರು ಮತ್ತು ಎ.ಐ ಅಥವಾ ದತ್ತಾಂಶ ಕೌಶಲ ಹೊಂದಿರುವ ಅಭ್ಯರ್ಥಿಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 63ರಷ್ಟು ಕಂಪನಿಗಳು ಹೇಳಿವೆ.
ದೇಶದ 10 ನಗರಗಳಲ್ಲಿನ 650 ಮಾಹಿತಿ ತಂತ್ರಜ್ಞಾನ ಕಂಪನಿಗಳಿಂದ ಸಂಗ್ರಹಿಸಿದ ಪ್ರತಿಕ್ರಿಯೆ ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಕಳೆದ ನವೆಂಬರ್‌ನಿಂದ ಈ ಜನವರಿವರೆಗೆ ಅಧ್ಯಯನ ನಡೆಸಲಾಗಿದೆ.
ತಂತ್ರಾಂಶ ಅಭಿವೃದ್ಧಿಪಡಿಸುವವರು ಮತ್ತು ದತ್ತಾಂಶಕೋಶ ನಿರ್ವಾಹಕರಿಗೆ ಬೇಡಿಕೆ ಹೆಚ್ಚಳವಾಗುತ್ತಿದೆ. ಶೇ 50ರಷ್ಟಕ್ಕಿಂತ ಹೆಚ್ಚು ಕಂಪನಿಗಳು ವಿವಿಧ ತರಬೇತಿಗಳ ಮೂಲಕ ಈಗಾಗಲೇ ಎ.ಐ ಬಳಕೆಗೆ ನೆರವು ನೀಡುತ್ತಿವೆ ಎಂದು ವರದಿ ತಿಳಿಸಿದೆ.
ಆದರೆ, ತರಬೇತಿ ನೀಡುವ ಪ್ರಮಾಣ ಕಡಿಮೆ ಇದೆ. ಅರ್ಹತೆ ಹೊಂದಿರುವ ತರಬೇತುದಾರರು ಸಿಗುತ್ತಿಲ್ಲ. ಹೆಚ್ಚಿನ ವೆಚ್ಚ ಮತ್ತು ಅನಿಶ್ಚಿತ ಗಳಿಕೆ ಸೇರಿದಂತೆ ವಿವಿಧ ಅಂಶಗಳು ವಲಯಕ್ಕೆ ಪ್ರಮುಖ ಸವಾಲಾಗಿವೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.