ADVERTISEMENT

Artificial intelligence: ಭಾರತ ಮಂಟಪದಲ್ಲಿ ‘ಎ.ಐ. ಇಂಪ್ಯಾಕ್ಟ್‌ ಶೃಂಗ’

ಪಿಟಿಐ
Published 15 ಫೆಬ್ರುವರಿ 2026, 16:11 IST
Last Updated 15 ಫೆಬ್ರುವರಿ 2026, 16:11 IST
‘ಇಂಡಿಯಾ ಎ.ಐ ಇಂಪ್ಯಾಕ್ಟ್‌ ಶೃಂಗ’ವು ಸೋಮವಾರದಿಂದ ಆರಂಭವಾಗಲಿದ್ದು, ಭಾರತ ಮಂಟಪಕ್ಕೆ ಅರೆಸೇನಾ ಸಿಬ್ಬಂದಿ ಭದ್ರತೆ ಕಲ್ಪಿಸಿದ್ದರು. –ಎಎಫ್‌ಪಿ ಚಿತ್ರ
‘ಇಂಡಿಯಾ ಎ.ಐ ಇಂಪ್ಯಾಕ್ಟ್‌ ಶೃಂಗ’ವು ಸೋಮವಾರದಿಂದ ಆರಂಭವಾಗಲಿದ್ದು, ಭಾರತ ಮಂಟಪಕ್ಕೆ ಅರೆಸೇನಾ ಸಿಬ್ಬಂದಿ ಭದ್ರತೆ ಕಲ್ಪಿಸಿದ್ದರು. –ಎಎಫ್‌ಪಿ ಚಿತ್ರ   

ನವದೆಹಲಿ: ಕೃತಕ ಬುದ್ಧಿಮತ್ತೆ ಕ್ಷೇತ್ರದ ಪ್ರಮುಖ ಕಂಪನಿಗಳು, ಜಾಗತಿಕ ನಾಯಕರನ್ನು ಒಂದೆಡೆ ಕರೆತರಲಿರುವ ‘ಎ.ಐ. ಇಂಪ್ಯಾಕ್ಟ್‌ ಶೃಂಗ’ಕ್ಕೆ ಭಾರತವು ಆತಿಥ್ಯ ವಹಿಸಿದೆ. ಶೃಂಗವು ಸೋಮವಾರದಿಂದ ಶುಕ್ರವಾರದವರೆಗೆ ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿದೆ. ನೀತಿ ನಿರೂಪಕರು, ತಂತ್ರಜ್ಞಾನ ಕ್ಷೇತ್ರದ ಸಂಶೋಧಕರು ಕೂಡ ಈ ಶೃಂಗದಲ್ಲಿ ಭಾಗಿಯಾಗಲಿದ್ದಾರೆ.

ಭಾರತದ ಪಾಲಿಗೆ ಈ ಶೃಂಗವು ಮಹತ್ವದ್ದಾಗಲಿದೆ. ಇದು ಎ.ಐ. ಜಗತ್ತಿನಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸುವ, ತನ್ನ ಉದ್ದೇಶವನ್ನು ಹೇಳುವ ಅವಕಾಶವನ್ನು ಭಾರತಕ್ಕೆ ನೀಡಲಿದೆ. ಎ.ಐ. ಲೋಕಕ್ಕೆ ಸಂಬಂಧಿಸಿದ ನಿಯಮಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಭಾರತದ ಉದ್ದೇಶವನ್ನು ಕೂಡ ಈ ಶೃಂಗವು ಹೇಳುತ್ತಿದೆ.

‘ಎ.ಐ. ವಿಚಾರದಲ್ಲಿ ಆಗುವುದೆಲ್ಲವೂ ಮಾನವ ಕೇಂದ್ರಿತವಾಗಿ ಹಾಗೂ ಎಲ್ಲರನ್ನೂ ಒಳಗೊಳ್ಳುವ ಬಗೆಯಲ್ಲಿ ಇರಬೇಕು ಎಂಬುದು ಈ ಕಾರ್ಯಕ್ರಮದ ಮೂಲಕ ನಾವು ರವಾನಿಸಲು ಬಯಸುವ ಪ್ರಮುಖ ಸಂದೇಶ. ಎ.ಐ ಸಂಪನ್ಮೂಲವು ಎಲ್ಲರಿಗೂ ಲಭ್ಯವಿರುವಂತೆ ಕೂಡ ಆಗಬೇಕು’ ಎಂದು ಕೇಂದ್ರದ ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ಎಸ್. ಕೃಷ್ಣನ್ ಹೇಳಿದ್ದಾರೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಜಗತ್ತಿನ ಹಲವು ನಾಯಕರು ಶೃಂಗಕ್ಕೆ ಬರಲಿದ್ದಾರೆ. ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರನ್, ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವ ಈ ‍ಪೈಕಿ ಪ್ರಮುಖರು. 45ಕ್ಕೂ ಹೆಚ್ಚು ದೇಶಗಳ ಸಚಿವರ ನಿಯೋಗಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿವೆ. ಪ್ರಧಾನಿ ಮೋದಿ ಅವರು ಶೃಂಗವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಡೀಪ್‌ಫೇಕ್‌ಗಳು ಹಾಗೂ ಎ.ಐ ಆಧಾರಿತ ಸುಳ್ಳು ಮಾಹಿತಿಯನ್ನು ತಡೆಯಲು ಭಾರತವು ಯಾವೆಲ್ಲ ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ಈ ಶೃಂಗವು ಪ್ರಧಾನವಾಗಿ ತೋರಿಸಲಿದೆ.

ಐರೋಪ್ಯ ಒಕ್ಕೂಟವು ನಿಯಂತ್ರಣ ಕ್ರಮವು ಹೆಚ್ಚಿರುವ ಎ.ಐ ಕಾಯ್ದೆಯನ್ನು ಹೊಂದಿದೆ. ಅಮೆರಿಕವು ಮಾರುಕಟ್ಟೆಯ ಅಗತ್ಯವನ್ನು ಆಧರಿಸಿದ ಕಾನೂನು ಹೊಂದಿದೆ. ಆದರೆ ಭಾರತವು ಆವಿಷ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ಕ್ರಮವನ್ನು ಅನುಸರಿಸುತ್ತಿದೆ.

ಇದು ಅಭಿವೃದ್ಧಿ ಹೊಂದುತ್ತಿರುವ ದೇಶವೊಂದರಲ್ಲಿ ನಡೆಯುತ್ತಿರುವ ಜಾಗತಿಕ ಮಟ್ಟದ ಮೊದಲ ಎ.ಐ. ಶೃಂಗ ಕೂಡ ಹೌದು.

ಯಾರೆಲ್ಲ ಬರುತ್ತಿದ್ದಾರೆ?

  • ಸುಂದರ್ ಪಿಚೈ (ಗೂಗಲ್‌ ಸಿಇಒ)

  • ಸ್ಯಾಮ್‌ ಆಲ್ಟ್‌ಮ್ಯಾನ್‌ (ಓಪನ್‌ ಎಐ ಸಿಇಒ)

  • ಡ್ಯಾರಿಯೊ ಅಮೊಡಿ (ಆ್ಯಂಥ್ರೊಪಿಕ್‌ ಸಿಇಒ)

  • ಬ್ರ್ಯಾಡ್ ಸ್ಮಿತ್‌ (ಮೈಕ್ರೊಸಾಫ್ಟ್‌ ಅಧ್ಯಕ್ಷ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.