ADVERTISEMENT

‘ವಿಮಾನಗಳ ಹಾರಾಟ: ಪರಿಶೀಲನೆ ಬಳಿಕ ನಿರ್ಧಾರ’

ಪಾಕ್‌ ವಾಯುಪ್ರದೇಶದಲ್ಲಿ ಭಾರತದ ವಿಮಾನಗಳ ಹಾರಾಟಕ್ಕೆ ನಿರ್ಬಂಧ

ಪಿಟಿಐ
Published 28 ಏಪ್ರಿಲ್ 2025, 16:21 IST
Last Updated 28 ಏಪ್ರಿಲ್ 2025, 16:21 IST
ಕೆ. ರಾಮ್‌ಮೋಹನ್‌ನಾಯ್ಡು
ಕೆ. ರಾಮ್‌ಮೋಹನ್‌ನಾಯ್ಡು   

ನವದೆಹಲಿ (ಪಿಟಿಐ): ಪಾಕಿಸ್ತಾನವು ತನ್ನ ವಾಯುಪ್ರದೇಶದಲ್ಲಿ ಭಾರತದ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಿದ್ದರಿಂದ ಎದುರಾಗಿರುವ ತೊಂದರೆಗಳ ಕುರಿತು ಸಮಗ್ರ ಪರಿಶೀಲನೆಯ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮ್‌ಮೋಹನ್‌ನಾಯ್ಡು ಸೋಮವಾರ ಹೇಳಿದ್ದಾರೆ.

ಈಗಿನ ಪರಿಸ್ಥಿತಿಯನ್ನು ಸರ್ಕಾರವು ವಿಮಾನಯಾನ ಸಂಸ್ಥೆಗಳೊಂದಿಗೆ ಅವಲೋಕಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಿದೆ. ಪಾಕಿಸ್ತಾನ ಕಳೆದ ವಾರ ತನ್ನ ವಾಯುಪ್ರದೇಶವನ್ನು ಭಾರತೀಯ ವಿಮಾನಯಾನ ಸಂಸ್ಥೆಗಳು ಬಳಸುವುದನ್ನು ನಿಷೇಧಿಸಿತ್ತು.

ADVERTISEMENT

ಇದು ಉತ್ತರ ಭಾರತದ ಪ್ರಮುಖ ನಗರಗಳಿಂದ ಸಾಗುವ ಅಂತರರಾಷ್ಟ್ರೀಯ ವಿಮಾನಗಳ ಮೇಲೆ ಪರಿಣಾಮ ಬೀರಿದೆ. ಪ್ರಯಾಣದ ಅವಧಿ ಹೆಚ್ಚಳ, ಇಂಧನ ವೆಚ್ಚ ಹೆಚ್ಚಾಗಲಿದೆ. ಅದರ ಜತೆಗೆ ಪ್ರಯಾಣ ದರದಲ್ಲೂ ಏರಿಕೆಯಾಗಲಿದೆ. ಈ ಎಲ್ಲ ವಿಷಯಗಳನ್ನು ಅವಲೋಕಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ಪ್ರಸ್ತುತ ಸಂದರ್ಭದಲ್ಲಿ ವಿಮಾನಯಾನ ಸಚಿವಾಲಯವು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.

ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಸೇರಿದ 800ಕ್ಕೂ ಹೆಚ್ಚು ವಿಮಾನಗಳು ಪ್ರತಿ ವಾರ ಉತ್ತರ ಭಾರತದ ಪ್ರಮುಖ ನಗರಗಳಿಂದ ಬ್ರಿಟನ್‌ ಸೇರಿದಂತೆ ಯುರೋಪ್‌ನ ವಿವಿಧ ದೇಶಗಳು, ಉತ್ತರ ಅಮೆರಿಕ, ಮತ್ತು ಮಧ್ಯಪ್ರಾಚ್ಯದತ್ತ ಸಂಚರಿಸುತ್ತವೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.