
ಏರ್‌ಟೆಲ್
ಬೆಂಗಳೂರು: ನೆಟ್‌ವರ್ಕ್ ಸೇವಾದಾರ ಕಂಪನಿಯಾದ ಏರ್‌ಟೆಲ್, ತನ್ನ ಗ್ರಾಹಕರಿಗೆ ಅಡೋಬಿ ಎಕ್ಸ್‌ಪ್ರೆಸ್ ಪ್ರೀಮಿಯಂ ಆ್ಯಪ್ ಅನ್ನು ಉಚಿತವಾಗಿ ನೀಡಿದೆ.
ಸುಮಾರು ₹4 ಸಾವಿರ ಮೌಲ್ಯದ ಈ ಅಪ್ಲಿಕೇಷನ್ ಅನ್ನು ಈಗಾಗಲೇ 36 ಕೋಟಿ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಒದಗಿಸುತ್ತಿರುವುದಾಗಿ ಹೇಳಿದೆ.
ಈ ಸೌಲಭ್ಯವು ಒಂದು ವರ್ಷಗಳ ಅವಧಿಯದ್ದಾಗಿದ್ದು, ಸಂಪೂರ್ಣ ಉಚಿತವಾಗಿದೆ. ಅಡೋಬ್ ಎಕ್ಸ್‌ಪ್ರೆಸ್ ಪ್ರೀಮಿಯಂ ಚಂದಾದಾರಿಕೆಯನ್ನು ಮೊಬೈಲ್, ವೈಫೈ ಮತ್ತು ಡಿಟಿಎಚ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿರುವ ಏರ್‌ಟೆಲ್ ಗ್ರಾಹಕರಿಗೆ ಲಭ್ಯ. ಇದಕ್ಕೆ ಗ್ರಾಹಕರು ಯಾವುದೇ ಕ್ರೆಡಿಟ್ ಕಾರ್ಡ್‌ನ ಮಾಹಿತಿ ಒದಗಿಸುವ ಅಗತ್ಯವಿಲ್ಲ. ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್‌ಗೆ ಲಾಗಿನ್ ಆಗುವ ಮೂಲಕ ಈ ಚಂದಾದಾರಿಕೆಯನ್ನು ಪಡೆಯಬಹುದು ಎಂದು ಕಂಪನಿ ಹೇಳಿದೆ.
ಈ ಕುರಿತು ಮಾಹಿತಿ ನೀಡಿದ ಭಾರ್ತಿ ಏರ್‌ಟೆಲ್‌ನ ಕನೆಕ್ಟೆಡ್ ಹೋಮ್ಸ್ ಸಿಇಒ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಸಿದ್ಧಾರ್ಥ ಶರ್ಮಾ, ‘ಈ ಸಹಭಾಗಿತ್ವವು ಕೇವಲ ತಂತ್ರಜ್ಞಾನಕ್ಕೆ ಸೀಮಿತವಾಗಿಲ್ಲ. ಬದಲಿಗೆ ಲಕ್ಷಾಂತರ ಭಾರತೀಯರಿಗೆ ಕೃತಕ ಬುದ್ಧಿಮತ್ತೆಯ ಪರಿಕರಗಳ ಮೂಲಕ ಹೊಸತನ್ನು ಸೃಷ್ಟಿಸಲು ಹೆಚ್ಚಿನ ಅವಕಾಶ ಕಲ್ಪಿಸಿದೆ. ವಿದ್ಯಾರ್ಥಿಗಳು, ಸಣ್ಣ ಉದ್ದಿಮೆದಾರರು, ಮಹಿಳೆಯರು ಇದರ ಲಾಭ ಪಡೆಯಬಹುದು’ ಎಂದಿದ್ದಾರೆ.
‘ಕಂಟೆಂಟ್ ಕ್ರಿಯೇಟರ್‌ಗಳಿಗೆ, ಶುಭಾಶಯ ಪತ್ರ ಸಿದ್ಧಪಡಿಸಲು, ಪ್ರಸೆಂಟೇಷನ್ ಮಾಡಲು, ಜಾಹೀರಾತು ಸೇರಿದಂತೆ ಕಂಟೆಂಟ್ ಕ್ರಿಯೇಷನ್‌ಗೆ ಇದು ನೆರವಾಗಲಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.