
ಬೆಂಗಳೂರು/ನವದೆಹಲಿ: ದೂರಸಂಪರ್ಕ ಸೇವಾ ಕಂಪನಿ ಭಾರ್ತಿ ಏರ್‌ಟೆಲ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹8,651 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹4,153 ಕೋಟಿ ಲಾಭ ಗಳಿಸಿತ್ತು. ಈ ಲಾಭಕ್ಕೆ ಹೋಲಿಸಿದರೆ ಈ ಬಾರಿಯ ಲಾಭ ಎರಡು ಪಟ್ಟು ಹೆಚ್ಚಳವಾಗಿದೆ ಎಂದು ಕಂಪನಿ ಸೋಮವಾರ ತಿಳಿಸಿದೆ.
ವರಮಾನದಲ್ಲಿ ಶೇ 25.7ರಷ್ಟು ಏರಿಕೆ ಆಗಿದ್ದು, ₹52,145 ಕೋಟಿಗೆ ತಲುಪಿದೆ. ಸ್ಮಾರ್ಟ್‌ಫೋನ್ ಬಳಸುವ ಗ್ರಾಹಕರ ಸಂಖ್ಯೆ ಮತ್ತು ಪೋಸ್ಟ್‌ಪೇಯ್ಡ್ ಸಂಪರ್ಕ ಹೆಚ್ಚಳವೇ ಲಾಭದ ಪ್ರಮಾಣ ಏರಿಕೆಗೆ ಕಾರಣವಾಗಿದೆ ಎಂದು ತಿಳಿಸಿದೆ.
ಕಂಪನಿಯು ತನ್ನ ಪ್ರತಿ ಗ್ರಾಹಕನಿಂದ ತಿಂಗಳೊಂದರಲ್ಲಿ ಪಡೆಯುತ್ತಿರುವ ಸರಾಸರಿ ವರಮಾನದಲ್ಲಿ (ಎಆರ್‌ಪಿಯು) ಶೇ 10ರಷ್ಟು ಹೆಚ್ಚಳವಾಗಿದ್ದು, ₹256 ಆಗಿದೆ. ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಇದು ₹233 ಇತ್ತು.
ಮೊಬೈಲ್ ಡೇಟಾ ಬಳಕೆ ಪ್ರಮಾಣ ಕಳೆದ ವರ್ಷದ ಸೆಪ್ಟೆಂಬರ್‌ಗೆ ಹೋಲಿಸಿದರೆ ಶೇ 26.6ರಷ್ಟು ಹೆಚ್ಚಳವಾಗಿದೆ. ಪ್ರತಿ ತಿಂಗಳಿಗೆ ಗ್ರಾಹಕನೊಬ್ಬ ಬಳಸುವ ಸರಾಸರಿ ಡೇಟಾ 28.3 ಜಿಬಿ ಆಗಿದೆ.
ದೇಶದಲ್ಲಿ ಕಂಪನಿಯು 45 ಕೋಟಿ ಗ್ರಾಹಕರನ್ನು ಹೊಂದಿದೆ. ಒಂದು ವರ್ಷದಲ್ಲಿ ಕಂಪನಿಯು 12,796 ಹೊಸ ಟವರ್ ಸ್ಥಾಪಿಸಿದೆ ಮತ್ತು 20,841 ಮೊಬೈಲ್ ಬ್ರಾಡ್‌ಬ್ಯಾಂಡ್ ಸ್ಟೇಷನ್ ನಿರ್ಮಿಸಿದೆ. 44,104 ಕಿ.ಮೀ ಉದ್ದದ ಫೈಬರ್ ಅಳವಡಿಕೆ ಮಾಡಿದೆ. ಕಂಪನಿಯ ನಿವ್ವಳ ಸಾಲವು ಶೇ 5ರಷ್ಟು ಕಡಿಮೆಯಾಗಿದ್ದು, ₹1,94,713 ಕೋಟಿಗೆ ಇಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.