ADVERTISEMENT

ಫೆ.20ರೊಳಗೆ ₹10,000 ಕೋಟಿ ಪಾವತಿ; ಏರ್‌ಟೆಲ್ ಭರವಸೆ: ಒಟ್ಟು ಬಾಕಿ ₹35,586 ಕೋಟಿ

ಏಜೆನ್ಸೀಸ್
Published 15 ಫೆಬ್ರುವರಿ 2020, 6:25 IST
Last Updated 15 ಫೆಬ್ರುವರಿ 2020, 6:25 IST
ಭಾರ್ತಿ ಏರ್‌ಟೆಲ್‌
ಭಾರ್ತಿ ಏರ್‌ಟೆಲ್‌    

ನವದೆಹಲಿ:ದೇಶದ ಪ್ರಮುಖ ದೂರಸಂಪರ್ಕ ಕಂಪನಿಗಳಲ್ಲಿ ಒಂದಾದ ಭಾರ್ತಿ ಏರ್‌ಟೆಲ್‌ ₹10,000 ಕೋಟಿ ಪಾವತಿಸುವುದಾಗಿ ದೂರಸಂಪರ್ಕ ಇಲಾಖೆಗೆ ತಿಳಿಸಿದೆ.

ಫೆಬ್ರುವರಿ 20ರೊಳಗೆ₹10,000 ಕೋಟಿ ಪಾವತಿಸುತ್ತೇವೆ, ಉಳಿದ ಮೊತ್ತವನ್ನು ಮುಂದಿನ ವಿಚಾರಣೆಗೂ ಮೊದಲು ಪಾವತಿಸುವುದಾಗಿ ಪತ್ರ ಮುಖೇನ ಭರವಸೆ ನೀಡಿದೆ.ಬಾಕಿ ಮೊತ್ತವನ್ನು ಶುಕ್ರವಾರ ಮಧ್ಯರಾತ್ರಿಯೊಳಗೆ ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆದೂರಸಂಪರ್ಕ ಇಲಾಖೆ ನೋಟಿಸ್‌ ನೀಡಿತ್ತು.

ತರಂಗಾಂತರಗಳ ಬಳಕೆ, ಪರವಾನಗಿ ಶುಲ್ಕ ಸೇರಿದಂತೆ ಏರ್‌ಟೆಲ್‌ ಸರ್ಕಾರಕ್ಕೆ ಸುಮಾರು ₹35,586 ಕೋಟಿ ಪಾವತಿಸಬೇಕಿದೆ.ಸುಪ್ರೀಂ ಕೋರ್ಟ್‌ 2019ರ ಅಕ್ಟೋಬರ್‌ 24ರಂದು ನೀಡಿದ್ದ ಆದೇಶದ ಪ್ರಕಾರ ಜನವರಿ 23ರಂದು ಟೆಲಿಕಾಂ ಆಪರೇಟರ್‌ಗಳು ಬಾಕಿ ಮೊತ್ತ ಸರ್ಕಾರಕ್ಕೆ ಪಾವತಿಸಬೇಕಿತ್ತು.

ADVERTISEMENT

ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌) ಸಂಬಂಧಿಸಿ ಟೆಲಿಕಾಂ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ₹1.47 ಲಕ್ಷ ಕೋಟಿ ಪಾವತಿಸುವ ಬಗ್ಗೆ ನೀಡಿದ್ದ ಆದೇಶ ಪಾಲನೆಯಾಗದ್ದಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

ಬಾಕಿ ಇರುವ ಮೊತ್ತವನ್ನು ಪಾವತಿಸಲು ಕಂಪನಿಗಳ ಮೇಲೆ ಒತ್ತಡ ಹೇರಬಾರದು ಮತ್ತು ಕಂಪೆನಿಗಳ ವಿರುದ್ಧ ಕ್ರಮವನ್ನೂ ಕೈಗೊಳ್ಳಬಾರದು ಎಂದು ಸೂಚಿಸಿ ಪ್ರಧಾನ ಲೆಕ್ಕಾಧಿಕಾರಿಗೆ ಪತ್ರ ರವಾನಿಸಿದ್ದ ಅಧಿಕಾರಿಗೆ ಕೋರ್ಟ್‌ ಎಚ್ಚರಿಕೆ ನೀಡಿದ ಬೆನ್ನಲೇ,ಕಳುಹಿಸಿದ್ದ ಪತ್ರವನ್ನು ದೂರಸಂಪರ್ಕ ಇಲಾಖೆ ಹಿಂದಕ್ಕೆ ಪಡೆದಿದೆ. ಅದಾದ ಬಳಿಕ, ಬಾಕಿ ಮೊತ್ತವನ್ನು ಶುಕ್ರವಾರ ಮಧ್ಯರಾತ್ರಿಯೊಳಗೆ ಪಾವತಿಸುವಂತೆ ನೋಟಿಸ್‌ ನೀಡಿತ್ತು.

ಆದೇಶಿಸಿದಂತೆ ಬಾಕಿ ಮೊತ್ತ ಪಾವತಿಸದಿದ್ದರೆ, ಟೆಲಿಕಾಂ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದೆ.ಕಂಪೆನಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಯಾಕೆ ದಾಖಲಿಸಿಕೊಳ್ಳಬಾರದು ಎಂದೂ ಪ್ರಶ್ನಿಸಿದೆ.

ಇತರೆ ಟೆಲಿಕಾಂ ಕಂಪನಿಗಳ ಬಾಕಿ ಮೊತ್ತ

₹53,000 ಕೋಟಿ -ವೊಡಾಫೋನ್‌ ಐಡಿಯಾ

₹16,456 ಕೋಟಿ -ರಿಲಯನ್ಸ್‌ ಕಮ್ಯುನಿಕೇಷನ್ಸ್‌

₹14,000 ಕೋಟಿ -ಟಾಟಾ ಟೆಲಿ ಸರ್ವಿಸಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.