ADVERTISEMENT

ರೆಪೊ ಇಳಿಕೆ ಪ್ರಯೋಜನ ವರ್ಗಾಯಿಸಿ: ಎಲ್ಲ ಬ್ಯಾಂಕುಗಳಿಗೆ ಆರ್‌ಬಿಐ

ಆರ್‌ಬಿಐನ ಜೂನ್‌ ತಿಂಗಳ ವಾರ್ತಾಪತ್ರದಲ್ಲಿನ ಲೇಖನದಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 15:03 IST
Last Updated 26 ಜೂನ್ 2025, 15:03 IST
ಆರ್‌ಬಿಐ
ಆರ್‌ಬಿಐ   

ಮುಂಬೈ: ರೆಪೊ ದರದಲ್ಲಿ ಶೇಕಡ 0.50ರಷ್ಟು ಇಳಿಕೆ ಮಾಡುವ ಹಣಕಾಸು ನೀತಿ ಸಮಿತಿಯ (ಎಂಪಿಸಿ) ತೀರ್ಮಾನದ ಪ್ರಯೋಜನವು ಗ್ರಾಹಕರಿಗೆ ತ್ವರಿತವಾಗಿ ಲಭ್ಯವಾಗುವಂತೆ ಮಾಡಲು ಎಲ್ಲ ಬ್ಯಾಂಕ್‌ಗಳು ತಮ್ಮ ಸಾಲಗಳ ಮೇಲಿನ ಬಡ್ಡಿ ದರವನ್ನು ತಗ್ಗಿಸಬೇಕು ಎಂದು ಆರ್‌ಬಿಐ ವಾರ್ತಾಪತ್ರ ಹೇಳಿದೆ.

ಆರ್‌ಬಿಐನ ಜೂನ್‌ ತಿಂಗಳ ವಾರ್ತಾಪತ್ರದಲ್ಲಿ ಪ್ರಕಟವಾಗಿರುವ ಲೇಖನವೊಂದು, ರೆಪೊ ದರದಲ್ಲಿನ ಇಳಿಕೆಯನ್ನು ವರ್ಗಾವಣೆ ಮಾಡಲು ಹಣಕಾಸು ಪರಿಸ್ಥಿತಿಯು ಅನುಕೂಲಕರವಾಗಿ ಇದೆ ಎಂದು ಹೇಳಿದೆ. ಫೆಬ್ರುವರಿ ಹಾಗೂ ಏಪ್ರಿಲ್‌ನಲ್ಲಿ ಆದ ರೆಪೊ ಇಳಿಕೆಯ ನಿರ್ಧಾರದ ಪ್ರಯೋಜನವನ್ನು ಬಹುತೇಕ ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾವಣೆ ಮಾಡಿವೆ.

ಜೂನ್‌ 6ರಂದು ಆರ್‌ಬಿಐ ರೆಪೊ ದರವನ್ನು ಶೇ 0.50ರಷ್ಟು ಕಡಿಮೆ ಮಾಡಿದೆ. ಎಸ್‌ಬಿಐ, ಬ್ಯಾಂಕ್‌ ಆಫ್ ಬರೋಡ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನಂತಹ ಹಲವು ದೊಡ್ಡ ಬ್ಯಾಂಕ್‌ಗಳು ಈ ಇಳಿಕೆಯ ಪ್ರಯೋಜನವನ್ನು ಕೂಡ ತಮ್ಮ ಗ್ರಾಹಕರಿಗೆ ಕೆಲವೇ ದಿನಗಳಲ್ಲಿ ವರ್ಗಾವಣೆ ಮಾಡಿವೆ.

ADVERTISEMENT

ರೆಪೊ ದರವನ್ನು ಶೇ 0.50ರಷ್ಟು ತಗ್ಗಿಸಿದ್ದಷ್ಟೇ ಅಲ್ಲದೆ, ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್‌) ಶೇ 1ರಷ್ಟು ಕಡಿಮೆ ಮಾಡುವ ಘೋಷಣೆಯನ್ನು ಕೂಡ ಆರ್‌ಬಿಐ ಜೂನ್‌ನಲ್ಲಿ ಮಾಡಿದೆ.

ಸಿಆರ್‌ಆರ್‌ ಪ್ರಮಾಣ ಕಡಿಮೆ ಮಾಡಿರುವುದು ಬ್ಯಾಂಕಿಂಗ್‌ ವ್ಯವಸ್ಥೆಗೆ ಡಿಸೆಂಬರ್‌ ವೇಳೆಗೆ ಅಂದಾಜು ₹2.5 ಲಕ್ಷ ಕೋಟಿ ಸಿಗುವಂತೆ ಮಾಡುತ್ತದೆ.

‘ಇದು ನಗದು ಹರಿವನ್ನು ನೀಡುವುದಲ್ಲದೆ, ಬ್ಯಾಂಕ್‌ಗಳು ತಾವು ಸಾಲ ನೀಡಲು ಅಗತ್ಯವಿರುವ ಹಣವನ್ನು ಕಡಿಮೆ ವೆಚ್ಚದಲ್ಲಿ ಸಂಗ್ರಹಿಸುವುದಕ್ಕೆ ನೆರವಾಗುತ್ತದೆ’ ಎಂದು ಲೇಖನವು ಹೇಳಿದೆ. ಈ ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವು ಲೇಖಕರದ್ದೇ ವಿನಾ ತನ್ನದಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.