ADVERTISEMENT

ಅಕ್ಟೋಬರ್‌ನಿಂದ ‘ಭಾರತ್‌’ ಬ್ರ್ಯಾಂಡ್‌ ಅಡಿಯಲ್ಲಿ ರಸಗೊಬ್ಬರ

ಪಿಟಿಐ
Published 27 ಆಗಸ್ಟ್ 2022, 16:01 IST
Last Updated 27 ಆಗಸ್ಟ್ 2022, 16:01 IST
   

ನವದೆಹಲಿ (ಪಿಟಿಐ): ಯೂರಿಯಾ, ಡಿಎಪಿ ಸೇರಿದಂತೆ ಸಬ್ಸಿಡಿ ಇರುವ ಎಲ್ಲ ರಸಗೊಬ್ಬರಗಳನ್ನು ಅಕ್ಟೋಬರ್‌ನಿಂದ ‘ಭಾರತ್’ ಬ್ರ್ಯಾಂಡ್‌ ಅಡಿಯಲ್ಲಿ ಮಾರಾಟ ಮಾಡಲಾಗುತ್ತದೆ. ರಸಗೊಬ್ಬರಗಳು ರೈತರಿಗೆ ಸಕಾಲದಲ್ಲಿ ಸಿಗಬೇಕು, ಇವುಗಳ ಸಾಗಾಟದ ಮೇಲಿನ ಸಬ್ಸಿಡಿ ತಗ್ಗಿಸಬೇಕು ಎಂಬ ಉದ್ದೇಶ ಇದರ ಹಿಂದಿದೆ.

ರಸಗೊಬ್ಬರ ಸಬ್ಸಿಡಿ ಯೋಜನೆ ‘ಪ್ರಧಾನಮಂತ್ರಿ ಭಾರತೀಯ ಜನಉರ್ವರಕ್‌ ಪರಿಯೋಜನಾ’ (ಪಿಎಂಬಿಜೆಪಿ) ಅಡಿಯಲ್ಲಿ ಜಾರಿಗೆ ತರುತ್ತಿರುವ ‘ಒಂದು ದೇಶ ಒಂದು ರಸಗೊಬ್ಬರ’ ಎಂಬ ಹೊಸ ಉಪಕ್ರಮದ ಬಗ್ಗೆ ಮಾಹಿತಿ ನೀಡಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನಸುಖ್ ಮಾಂಡವೀಯ ಅವರು, ‘ಕಂಪನಿಗಳು ತಮ್ಮ ಬ್ರ್ಯಾಂಡ್‌, ಹೆಸರು, ಲೋಗೊ ಮತ್ತು ಉತ್ಪನ್ನಕ್ಕೆ ಸಂಬಂಧಿಸಿದ ಇತರ ಅಗತ್ಯ ವಿವರಗಳನ್ನು ಚೀಲದ ಮೂರನೆಯ ಒಂದರಷ್ಟು ಭಾಗದಲ್ಲಿ ಪ್ರದರ್ಶಿಸಬಹುದು’ ಎಂದು ತಿಳಿಸಿದ್ದಾರೆ.

ಇನ್ನುಳಿದ ಮೂರನೆಯ ಎರಡರಷ್ಟು ಭಾಗದಲ್ಲಿ ಕಂಪನಿಗಳು ‘ಭಾರತ್‌’ ಬ್ರ್ಯಾಂಡ್ ಹಾಗೂ ಪಿಎಂಬಿಜೆಪಿ ಲೋಗೊ ಪ್ರದರ್ಶಿಸಬೇಕಾಗುತ್ತದೆ. ಹಳೆಯ ದಾಸ್ತಾನು ಖಾಲಿ ಮಾಡಲು ಕಂಪನಿಗಳಿಗೆ ವರ್ಷಾಂತ್ಯದವರೆಗೆ ಅವಕಾಶ ಇದೆ.

ADVERTISEMENT

ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ರಸಗೊಬ್ಬರಗಳಿಗೆ ಸಬ್ಸಿಡಿ ನೀಡಲು ₹ 1.62 ಲಕ್ಷ ಕೋಟಿ ವ್ಯಯಿಸಿದೆ. ಕಳೆದ ಆರು ತಿಂಗಳಲ್ಲಿ ಜಾಗತಿಕ ಮಟ್ಟದಲ್ಲಿ ಆಗಿರುವ ಬೆಲೆ ಏರಿಕೆ ಗಮನಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರ ನೀಡಬೇಕಿರುವ ಸಬ್ಸಿಡಿ ಮೊತ್ತವು ₹ 2.25 ಲಕ್ಷ ಕೋಟಿ ಆಗುವ ಸಾಧ್ಯತೆ ಇದೆ.

ಬೇರೆ ಬೇರೆ ಕಂಪನಿಗಳು ತಯಾರಿಸುವ ರಸಗೊಬ್ಬರಗಳು ಒಂದೇ ಆಗಿದ್ದರೂ, ರಸಗೊಬ್ಬರಗಳನ್ನು ಬೇರೆ ಬೇರೆ ಬ್ರ್ಯಾಂಡ್ ಅಡಿ ಬೇರೆ ಬೇರೆ ರಾಜ್ಯಗಳಲ್ಲಿ ತಯಾರಿಸಲಾಗುತ್ತಿದೆ. ರಸಗೊಬ್ಬರಗಳನ್ನು ತಯಾರಿಕಾ ಕೇಂದ್ರಗಳಿಂದ ಬಹುದೂರದ ಪ್ರದೇಶಗಳಿಗೆ ರವಾನೆ ಮಾಡಲಾಗುತ್ತಿದೆ. ಇದರಿಂದಾಗಿ ಸಾಗಣೆ ಸಬ್ಸಿಡಿ ಹೊರೆ ಕೇಂದ್ರದ ಮೇಲೆ ಬೀಳುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.

‘ರಸಗೊಬ್ಬರ ತಯಾರಿಕಾ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಸ್ಥಳೀಯವಾಗಿ ಮಾರಾಟ ಮಾಡುವಂತಾಗಲಿ, ಅನಗತ್ಯ ಸಾರಿಗೆ ಕೆಲಸ ಕಡಿಮೆಯಾಗಲಿ ಎಂಬುದು ಏಕ ಬ್ರ್ಯಾಂಡ್‌ ಜಾರಿಗೆ ತರುವುತ್ತಿರುವುದು ಹಿಂದಿನ ಉದ್ದೇಶ’ ಎಂದು ಹೇಳಿದ್ದಾರೆ.

ಏಕ ಬ್ರ್ಯಾಂಡ್‌ ವ್ಯವಸ್ಥೆ ಜಾರಿಗೆ ಬಂದ ನಂತರ, ಯಾವ ಬ್ರ್ಯಾಂಡ್‌ನ ರಸಗೊಬ್ಬರ ಖರೀದಿಸಬೇಕು ಎಂಬ ಗೊಂದಲವು ರೈತರಲ್ಲಿ ಮೂಡುವುದಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.