ADVERTISEMENT

ರಿಲಯನ್ಸ್ ತೆಕ್ಕೆಗೆ ಸ್ಟೋಕ್‌ ಪಾರ್ಕ್‌

ಪಿಟಿಐ
Published 23 ಏಪ್ರಿಲ್ 2021, 12:46 IST
Last Updated 23 ಏಪ್ರಿಲ್ 2021, 12:46 IST

ನವದೆಹಲಿ: ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್ (ಆರ್‌ಐಎಲ್‌) ಕಂಪನಿಯು ಬ್ರಿಟನ್ನಿನ ‘ಸ್ಟೋಕ್ ಪಾರ್ಕ್‌’ಅನ್ನು ಒಟ್ಟು ₹ 592 ಕೋಟಿಗೆ ಖರೀದಿಸಿದೆ. ಇದು ಐಷಾರಾಮಿ ಗಾಲ್ಫ್‌ ರೆಸಾರ್ಟ್‌ ಹಾಗೂ ಕ್ಲಬ್‌ಅನ್ನು ಒಳಗೊಂಡಿದೆ.

ರಿಲಯನ್ಸ್ ಕಂಪನಿಯು ಒಬೆರಾಯ್‌ ಹೋಟೆಲ್‌ಗಳಲ್ಲಿ ಈಗಾಗಲೇ ಷೇರುಪಾಲು ಹೊಂದಿದೆ.

ಬ್ರಿಟನ್ನಿನ ಬರ್ಕಿಂಗ್‌ಹ್ಯಾಮ್‌ಶೈರ್‌ನಲ್ಲಿ ಹೋಟೆಲ್‌ ಹಾಗೂ ಗಾಲ್ಫ್‌ ಕೋರ್ಸ್‌ ಹೊಂದಿರುವ ಕಂಪನಿಯು ರಿಲಯನ್ಸ್‌ನ ಆಸ್ತಿಯಾಗಲಿದೆ. ‘ಸ್ಟೋಕ್‌ ಪಾರ್ಕ್‌ ಲಿಮಿಟೆಡ್‌ನ ಅಷ್ಟೂ ಷೇರುಗಳನ್ನು ರಿಲಯನ್ಸ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಇಂಡಸ್ಟ್ರೀಸ್‌ ಇನ್ವೆಸ್ಟ್‌ಮೆಂಟ್ಸ್‌ ಆ್ಯಂಡ್‌ ಹೋಲ್ಡಿಂಗ್ಸ್ ಲಿಮಿಟೆಡ್‌ ಖರೀದಿಸಿದೆ’ ಎಂದು ರಿಲಯನ್ಸ್‌ ಕಂಪನಿಯು ಷೇರು ಮಾರುಕಟ್ಟೆಗೆ ಗುರುವಾರ ತಿಳಿಸಿದೆ.

ADVERTISEMENT

ಅಂಬಾನಿ ಅವರು ಬ್ರಿಟನ್ ಮೂಲದ ಖ್ಯಾತ ಕಂಪನಿಗಳನ್ನು ಖರೀದಿಸುತ್ತಿರುವುದು ಇದು ಎರಡನೆಯ ಬಾರಿ. ಈ ಹಿಂದೆ 2019ರಲ್ಲಿ ಅಂಬಾನಿ ಅವರು ಬ್ರಿಟನ್ನಿನ ಹ್ಯಾಮ್ಲೀಸ್‌ ಆಟಿಕೆ ಅಂಗಡಿಯನ್ನು ಖರೀದಿಸಿದ್ದರು.

ಸ್ಟೋಕ್‌ ಪಾರ್ಕ್‌ಗೂ ಸಿನಿಮಾ ಜಗತ್ತಿಗೂ ನಿಕಟ ನಂಟು ಇದೆ. ಜೇಮ್ಸ್‌ ಬಾಂಡ್‌ ಸರಣಿಯ ‘ಗೋಲ್ಡ್‌ಫಿಂಗರ್‌’ ಹಾಗೂ ‘ಟುಮಾರೊ ನೆವರ್‌ ಡೈಸ್‌’ ಸಿನಿಮಾಗಳ ಚಿತ್ರೀಕರಣ ನಡೆದಿದ್ದು ಸ್ಟೋಕ್‌ ಪಾರ್ಕ್‌ನಲ್ಲಿ. ಸ್ಟೋಕ್‌ ‍ಪಾರ್ಕ್‌ನಲ್ಲಿ 49 ಐಷಾರಾಮಿ ಕೊಠಡಿಗಳು, 13 ಟೆನ್ನಿಸ್ ಅಂಗಣಗಳು, 14 ಎಕರೆ ಉದ್ಯಾನವನ ಕೂಡ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.