ADVERTISEMENT

ಸೋಮವಾರದಿಂದ ಆರ್‌ಬಿಐ ಸಭೆ: ಶೇ 0.35ರಷ್ಟು ಬಡ್ಡಿದರ ಹೆಚ್ಚಳ ಸಾಧ್ಯತೆ

ಪಿಟಿಐ
Published 5 ಜೂನ್ 2022, 16:52 IST
Last Updated 5 ಜೂನ್ 2022, 16:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಹಣದುಬ್ಬರ ಕಡಿಮೆ ಆಗದೇ ಇರುವುದರಿಂದ ಭಾರತೀಯ ರಿಸರ್ವ್‌ ಬ್ಯಾಕ್‌ (ಆರ್‌ಬಿಐ) ರೆಪೊ ದರವನ್ನು ಕನಿಷ್ಠ ಶೇ 0.35ರಷ್ಟುಹೆಚ್ಚಿಸುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆರ್‌ಬಿಐನ ಹಣಕಾಸು ನೀತಿ ಸಮಿತಿಯು ಸೋಮವಾರದಿಂದ ಬುಧವಾರದವರೆಗೆ ಮೂರು ದಿನ ಸಭೆ ನಡೆಸಲಿದ್ದು, ಸಭೆಯ ನಿರ್ಧಾರಗಳನ್ನು ಬುಧವಾರ ಘೋಷಿಸಲಿದೆ.

ಬಡ್ಡಿದರ ನಿರ್ಧರಿಸಲು ಆರ್‌ಬಿಐ ಪ್ರಮುಖವಾಗಿ ಪರಿಗಣನೆಗೆ ತೆಗೆದುಕೊಳ್ಳುವ ಚಿಲ್ಲರೆ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ 7.79ಕ್ಕೆ ಏರಿಕೆ ಅಗಿದ್ದು, ಎಂಟು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಸಗಟು ಹಣದುಬ್ಬರ ಸಹ ಏಪ್ರಿಲ್‌ನಲ್ಲಿ ಶೇ 15.08ಕ್ಕೆ ದಾಖಲೆಯ ಏರಿಕೆ ಕಂಡಿದೆ.

ADVERTISEMENT

‘ಬಡ್ಡಿದರ ಏರಿಕೆಯು ಶೇ 0.25 ರಿಂದ ಶೇ 0.35ಕ್ಕಿಂತಲೂ ಹೆಚ್ಚಿಗೆ ಇರಲಾರದು. ಏಕೆಂದರೆ ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿದರ ಏರಿಕೆ ಮಾಡುವುದರ ಪರವಾಗಿ ಇಲ್ಲ ಎಂದು ಎಂಪಿಸಿಯುಮೇ ತಿಂಗಳಿನಲ್ಲಿ ನಡೆದಿದ್ದ ಸಭೆಯಲ್ಲಿ ಸೂಚನೆ ನೀಡಿದೆ’ ಎಂದು ಬ್ಯಾಂಕ್‌ ಆಫ್‌ ಬರೋಡಾದ ಮುಖ್ಯ ಆರ್ಥಿಕ ತಜ್ಞ ಮದನ್‌ ಸಬ್ನವೀಸ್‌ ಹೇಳಿದ್ದಾರೆ.

ಬಿಒಎಫ್‌ಎ ಸೆಕ್ಯುರಿಟೀಸ್‌ ವರದಿಯ ಪ್ರಕಾರ, ಎಂಪಿಸಿಯು ಬಡ್ಡಿದರವನ್ನು ಜೂನ್‌ನಲ್ಲಿ ಶೇ 0.40ರಷ್ಟು ಮತ್ತು ಆಗಸ್ಟ್‌ನಲ್ಲಿ ಶೇ 0.35ರಷ್ಟು ಹೆಚ್ಚಿಸಲಿದೆ.

‘ಚಾಲ್ತಿ ಖಾತೆ ಕೊರತೆ ಮತ್ತು ವಿತ್ತೀಯ ಕೊರತೆ ಹೆಚ್ಚಾಗಿವೆ. ಹಣದುಬ್ಬರವೂ ಏರಿಕೆ ಆಗುತ್ತಿದೆ. ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರ ಹೆಚ್ಚಿಸುತ್ತಿದೆ. ಹೀಗಾಗಿ ಆರ್‌ಬಿಐಗೆ ಬಡ್ಡಿದರವನ್ನು ಹೆಚ್ಚಳ ಮಾಡದೇ ಬೇರೆ ದಾರಿ ಇಲ್ಲ’ ಎಂದು ಕ್ಲಿಕ್ಸ್‌ ಕ್ಯಾಪಿಟಲ್‌ ಕಂಪನಿಯ ಸಿಇಒ ರಾಕೇಶ್‌ ಕೌಲ್‌ ತಿಳಿಸಿದ್ದಾರೆ.

‘ದರ ಹೆಚ್ಚಾಗುತ್ತದೆ ಎಂಬುದನ್ನು ಹೇಳಲು ಬುದ್ಧಿವಂತಿಕೆ ಬೇಕಾಗಿಲ್ಲ. ರೆಪೊ ಏರಿಕೆ ಆಗುತ್ತದೆ’ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈಚೆಗಷ್ಟೇ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಹೀಗಾಗಿ ಬಡ್ಡಿದರ ಏರಿಕೆ ಆಗುವುದಂತೂ ಖಚಿತ. ಆದರೆ, ಪ್ರಮಾಣ ಎಷ್ಟು ಎನ್ನುವುದನ್ನು ಕಾದು ನೋಡಬೇಕಿದೆ ಎಂದು ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.