ADVERTISEMENT

ಭಾರತದಲ್ಲಿ 1,500ಕ್ಕೂ ಅಧಿಕ ನೇಮಕ: ಅಟ್ಲಾಸಿಯನ್ ಸಾಫ್ಟ್‌ವೇರ್ ಕಂಪನಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 12:27 IST
Last Updated 8 ಸೆಪ್ಟೆಂಬರ್ 2022, 12:27 IST

ಬೆಂಗಳೂರು: ಭಾರತದಲ್ಲಿ ತನ್ನ ವಹಿವಾಟಿನ ಬೆಳವಣಿಗೆಗಾಗಿ 2023–24ನೇ ಹಣಕಾಸು ವರ್ಷದ ಒಳಗಾಗಿ 1,500ಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಲಾಗುವುದು ಎಂದು ಆಸ್ಟ್ರೇಲಿಯಾದ ಪ್ರಮುಖ ಸಾಫ್ಟ್‌ವೇರ್ ಕಂಪನಿಯಾಗಿರುವ ಅಟ್ಲಾಸಿಯನ್‌ ಕಾರ್ಪೊರೇಷನ್‌ ಗುರುವಾರ ಹೇಳಿದೆ.

2018ರಲ್ಲಿ ಭಾರತದಲ್ಲಿ ವಹಿವಾಟು ಆರಂಭಿಸಿದ ಕಂಪನಿಯು ಸದ್ಯ 1,400ಕ್ಕೂ ಹೆಚ್ಚಿನ ನೌಕರರನ್ನು ಹೊಂದಿದೆ. ಸ್ಥಳೀಯವಾಗಿ ಇನ್ನಷ್ಟು ಬೆಳವಣಿಗೆ ಸಾಧಿಸುವ ಸಲುವಾಗಿ ಎಂಜಿನಿಯರಿಂಗ್‌, ಉತ್ಪನ್ನಗಳು ಮತ್ತು ವಿನ್ಯಾಸ ಸೇರಿದಂತೆ ಹಲವು ವಿಭಾಗಗಳಲ್ಲಿ ದೇಶದಾದ್ಯಂತ ಹೊಸಬರನ್ನು, ಅನುಭವಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದೆ.

‘ಭಾರತದ ತಂತ್ರಜ್ಞಾನ ಕೌಶಲವು ವಿಶ್ವದರ್ಜೆಯದ್ದಾಗಿದೆ. ವೇಗವಾಗಿ ಬೆಳವಣಿಗೆ ಕಾಣುತ್ತಿರುವ ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿಗೆ ಭಾರತವು ನೆಲೆಯಾಗಿದೆ. ಹೀಗಾಗಿ, ದೇಶದಾದ್ಯಂತ ನಾವು ನೇಮಕಾತಿ ನಡೆಸಲಿದ್ದೇವೆ’ ಎಂದು ಕಂಪನಿಯ ಸಹಸ್ಥಾಪಕ ಮೈಕ್‌ ಕ್ಯಾನನ್‌ ಬ್ರೂಕ್ಸ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಜಾಗತಿಕ ವಹಿವಾಟು ವಿಸ್ತರಣೆಯ ಭಾಗವಾಗಿ 2025–26ರ ವೇಳೆಗೆ ಒಟ್ಟು ಸಿಬ್ಬಂದಿ ಸಂಖ್ಯೆಯನ್ನು 25 ಸಾವಿರಕ್ಕೆ ಹೆಚ್ಚಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

‘ರಿಮೋಟ್‌ ಮತ್ತು ಹೈಬ್ರಿಡ್‌ ಕೆಲಸದ ಮಾದರಿಗಳಿಗೆ ಅನುಗುಣವಾಗಿ ಕಂಪನಿಯು 2020ರಲ್ಲಿ ‘ಟೀಮ್‌ ಎನಿವೇರ್‌’ ಸೌಲಭ್ಯ ಪರಿಚಯಿಸಿದೆ. ಇದರಿಂದಾಗಿ ಉದ್ಯೋಗಿಗಳು ಮನೆಯಿಂದ, ಕಚೇರಿಯಿಂದ ಅಥವಾ ಎರಡೂ ಕಡೆಗಳಿಂದ ಕೆಲಸ ಮಾಡುವುದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ದೊರೆತಿದೆ. ಇದರಿಂದಾಗಿಯೇ ದೇಶದಾದ್ಯಂತ ಹೊಸಬರನ್ನು ನೇಮಕ ಮಾಡಿಕೊಳ್ಳಲು ಕಂಪನಿಯ ಸಾಮರ್ಥ್ಯ ಹೆಚ್ಚಾಗಿದೆ’ ಎಂದು ಕಂಪನಿಯ ಭಾರತದ ಮುಖ್ಯಸ್ಥ ದಿನೇಶ್‌ ಅಜ್ಮೆರಾ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.