car
ನವದೆಹಲಿ: ನವರಾತ್ರಿಯ ಮೊದಲ ದಿನದಿಂದ ಜಿಎಸ್‌ಟಿ ದರ ಪರಿಷ್ಕರಣೆ ಜಾರಿಗೆ ಬಂದಿರುವುದು ವಾಹನ ಮಾರುಕಟ್ಟೆಯಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ನವರಾತ್ರಿಯ ಮೊದಲ ದಿನ ತನ್ನ ಡೀಲರ್‌ಗಳು ಒಟ್ಟು 10 ಸಾವಿರ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದ್ದಾರೆ ಎಂದು ಟಾಟಾ ಮೋಟರ್ಸ್ ಹೇಳಿದೆ. ಅಲ್ಲದೆ, ದೇಶದಾದ್ಯಂತ ಪ್ರಯಾಣಿಕ ವಾಹನ ಡೀಲರ್‌ಗಳ ಬಳಿ ಒಟ್ಟು 25 ಸಾವಿರ ಮಂದಿ ವಾಹನಗಳ ಬಗ್ಗೆ ವಿಚಾರಣೆ ನಡೆಸಿದ್ದಾರೆ ಎಂದು ತಿಳಿಸಿದೆ.
ಮಾರುತಿ ಸುಜುಕಿ ಕಂಪನಿಯು ಸರಿಸುಮಾರು 30 ಸಾವಿರ ವಾಹನಗಳನ್ನು ಮಾರಾಟ ಮಾಡಿರುವುದಾಗಿ ಹೇಳಿದೆ. ಹುಂಡೈ ಕಂಪನಿಯು ತನ್ನ ಡೀಲರ್‌ಗಳು ಒಟ್ಟು 11 ಸಾವಿರ ವಾಹನಗಳಿಗೆ ಬಿಲ್ ಸಿದ್ಧಪಡಿಸಿದ್ದಾರೆ ಎಂದು ತಿಳಿಸಿದೆ.
ಹುಂಡೈ ಪಾಲಿಗೆ ಇದು ಕಳೆದ ಐದು ವರ್ಷಗಳಲ್ಲಿ ಒಂದು ದಿನದಲ್ಲಿ ಆಗಿರುವ ದಾಖಲೆಯ ಮಾರಾಟ.
‘ಬಹಳಷ್ಟು ಗ್ರಾಹಕರು ವಾಹನಗಳ ಬಗ್ಗೆ ವಿಚಾರಿಸುತ್ತಿದ್ದಾರೆ. ಬಹಳಷ್ಟು ಮಂದಿ ಮಳಿಗೆಗಳಿಗೆ ಭೇಟಿ ನೀಡಿದ್ದಾರೆ, ಅವರಿಗೆ ವಾಹನ ಖರೀದಿಸಬೇಕಿದೆ’ ಎಂದು ಆಟೊಮೊಬೈಲ್ ಡೀಲರ್‌ಗಳ ಸಂಘಟನೆಗಳ ಒಕ್ಕೂಟದ (ಎಫ್‌ಎಡಿಎ) ಅಧ್ಯಕ್ಷ ಸಿ.ಎಸ್. ವಿಘ್ನೇಶ್ವರ ತಿಳಿಸಿದ್ದಾರೆ.
‘ಹಬ್ಬಗಳ ಋತುವಿನ ಆರಂಭದ ದಿನವು ಬಹಳ ಚೆನ್ನಾಗಿತ್ತು. ಜಿಎಸ್‌ಟಿ ದರ ಪರಿಷ್ಕರಣೆ ಹಾಗೂ ಹಬ್ಬದ ನೆಪದಲ್ಲಿ ನೀಡಿರುವ ವಿಶೇಷ ರಿಯಾಯಿತಿ, ಕೊಡುಗೆಗಳು ಗ್ರಾಹಕರಲ್ಲಿ ಅಸಾಮಾನ್ಯ ಉತ್ಸಾಹ ಮೂಡಿಸಿವೆ’ ಎಂದು ಭಾರತೀಯ ಆಟೊಮೊಬೈಲ್ ತಯಾರಕರ ಒಕ್ಕೂಟದ (ಎಸ್‌ಐಎಎಂ) ಅಧ್ಯಕ್ಷ ಶೈಲೇಶ್ ಚಂದ್ರ ಹೇಳಿದ್ದಾರೆ.
‘ಆರಂಭಿಕ ಹಂತದ ದ್ವಿಚಕ್ರ ವಾಹನಗಳು ಹಾಗೂ ಆರಂಭಿಕ ಹಂತದ ಸಣ್ಣ ಕಾರುಗಳ ಬೆಲೆ ವಿಚಾರದಲ್ಲಿ ಕೆಲವು ಸಮಸ್ಯೆಗಳು ಇದ್ದವು. ಆದರೆ ಜಿಎಸ್‌ಟಿ ದರ ಪರಿಷ್ಕರಣೆಯ ಪರಿಣಾಮವಾಗಿ, ಆರಂಭಿಕ ಹಂತದ ವಾಹನಗಳ ಮಾರಾಟ ಚುರುಕಾಗುವ ನಿರೀಕ್ಷೆ ಇದೆ’ ಎಂದು ವಿಘ್ನೇಶ್ವರ ಅವರು ಹೇಳಿದ್ದಾರೆ.
ವಾಹನ ಕಂಪನಿಗಳ ಷೇರು ಜಿಗಿತ: ಮಂಗಳವಾರದ ಷೇರುಪೇಟೆ ವಹಿವಾಟಿನಲ್ಲಿ ವಾಹನ ತಯಾರಿಕಾ ಕಂಪನಿಗಳ ಷೇರು ಮೌಲ್ಯವು ಜಿಗಿತ ಕಂಡಿದೆ. ನವರಾತ್ರಿಯ ಮೊದಲ ದಿನ ವಾಹನಗಳ ಮಾರಾಟವು ಜೋರಾಗಿ ನಡೆದಿರುವುದು ಈ ಜಿಗಿತಕ್ಕೆ ಒಂದು ಕಾರಣವಾಗಿ ಒದಗಿಬಂತು.
ಷೇರುಪೇಟೆಯ ಪ್ರಮುಖ ಸೂಚ್ಯಂಕಗಳು ಮಂಗಳವಾರ ಕುಸಿತ ದಾಖಲಿಸಿದ್ದರೂ, ಅಶೋಕ್ ಲೇಲ್ಯಾಂಡ್ (ಶೇ 3.41ರಷ್ಟು ಏರಿಕೆ), ಮಾರುತಿ ಸುಜುಕಿ (ಶೇ 1.83), ಮಹೀಂದ್ರ ಆ್ಯಂಡ್ ಮಹೀಂದ್ರ (ಶೇ 0.89) ಕಂಪನಿಯ ಷೇರು ಬೆಲೆ ಏರಿಕೆ ದಾಖಲಿಸಿತು. ಟಾಟಾ ಮೋಟರ್ಸ್ (ಶೇ 0.78ರಷ್ಟು), ಹುಂಡೈ ಮೋಟರ್ (ಶೇ 0.08ರಷ್ಟು) ಷೇರು ಬೆಲೆ ಕೂಡ ಜಿಗಿತ ಕಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.