ADVERTISEMENT

ವಾಹನ ರಿಟೇಲ್‌ ಮಾರಾಟ ಶೇ 10ರಷ್ಟು ಹೆಚ್ಚಳ

ಪಿಟಿಐ
Published 8 ಏಪ್ರಿಲ್ 2024, 14:41 IST
Last Updated 8 ಏಪ್ರಿಲ್ 2024, 14:41 IST
Vehicles
Vehicles   

ನವದೆಹಲಿ: ದೇಶದಲ್ಲಿ ವಾಹನಗಳ ರಿಟೇಲ್‌ (ಚಿಲ್ಲರೆ) ಮಾರಾಟವು 2023–24ರ ಹಣಕಾಸು ವರ್ಷದಲ್ಲಿ ಶೇ 10ರಷ್ಟು ಹೆಚ್ಚಳ ಕಂಡಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಸೋಮವಾರ ತಿಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ 2.22 ಕೋಟಿ ವಾಹನ ಮಾರಾಟವಾಗಿದ್ದರೆ, 2023–24ರ ಹಣಕಾಸು ವರ್ಷದಲ್ಲಿ 2.45 ಕೋಟಿ ಮಾರಾಟವಾಗಿವೆ ಎಂದು ತಿಳಿಸಿದೆ.

ದೇಶದ ಆಟೊಮೊಬೈಲ್‌ ವಲಯವು ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಪ್ರಯಾಣಿಕ ವಾಹನಗಳು (ಪಿ.ವಿ), ಟ್ರಾಕ್ಟರ್‌ಗಳು ಮತ್ತು ವಾಣಿಜ್ಯ ವಾಹನಗಳು ಬಲವಾದ ಬೇಡಿಕೆಯನ್ನು ದಾಖಲಿಸುವುದರೊಂದಿಗೆ ಎರಡಂಕಿಯ ಬೆಳವಣಿಗೆಯನ್ನು ಸಾಧಿಸಿದೆ ಎಂದು ಎಫ್‌ಎಡಿಎ ಅಧ್ಯಕ್ಷ ಮನೀಶ್ ರಾಜ್ ಸಿಂಘಾನಿಯಾ ಹೇಳಿದ್ದಾರೆ.

ADVERTISEMENT

ಪ್ರಯಾಣಿಕ ವಾಹನ, ತ್ರಿಚಕ್ರ ವಾಹನ ಮತ್ತು ಟ್ರಾಕ್ಟರ್ ವಿಭಾಗಗಳು ಹಿಂದಿನ ವರ್ಷಗಳ ಮಾರಾಟವನ್ನು ಮೀರಿಸಿವೆ. ಹೊಸ ಮಾದರಿಗಳ ಬಿಡುಗಡೆ ಸೇರಿದಂತೆ ವಿವಿಧ ಅಂಶದಿಂದ ವಾಹನ ಮಾರಾಟ ಹೆಚ್ಚಳವಾಗಿದೆ. ಪ್ರಯಾಣಿಕ ವಾಹನಗಳ ಮಾರಾಟವು 36.40 ಲಕ್ಷದಿಂದ 39.48 ಲಕ್ಷಕ್ಕೆ ಏರಿಕೆ ಆಗಿದ್ದು, ಶೇ 8ರಷ್ಟು ಏರಿಕೆ ಕಂಡಿದೆ ಎಂದು ಸಿಂಘಾನಿಯಾ ತಿಳಿಸಿದ್ದಾರೆ.

ತ್ರಿಚಕ್ರ ವಾಹನಗಳ ಮಾರಾಟವು ಶೇ 49ರಷ್ಟು ಹೆಚ್ಚಳವಾಗಿದೆ. 11.65 ಲಕ್ಷ ವಾಹನಗಳು ಮಾರಾಟವಾಗಿವೆ. ಹಿಂದಿನ ಇದೇ ಅವಧಿಯಲ್ಲಿ 7.83 ಲಕ್ಷ ವಾಹನಗಳು ಮಾರಾಟವಾಗಿದ್ದವು. ಟ್ರ್ಯಾಕ್ಟರ್‌ ಮಾರಾಟ 8.29 ಲಕ್ಷದಿಂದ 8.92 ಲಕ್ಷಕ್ಕೆ ಹೆಚ್ಚಳ ಆಗಿದೆ. ದ್ವಿಚಕ್ರ ವಾಹನಗಳು ಮಾರಾಟದಲ್ಲಿ ಶೇ 8ರಷ್ಟು ಏರಿಕೆ ಆಗಿದ್ದು, 1.75 ಕೋಟಿ ವಾಹನಗಳು ಮಾರಾಟವಾಗಿವೆ. ಹಿಂದಿನ ಇದೇ ಅವಧಿಯಲ್ಲಿ 1.60 ಕೋಟಿ ಮಾರಾಟವಾಗಿದ್ದವು.

ಮಾರ್ಚ್‌ನಲ್ಲಿ 21 ಲಕ್ಷ ವಾಹನ ಮಾರಾಟ

ಮಾರ್ಚ್‌ನಲ್ಲಿ ಒಟ್ಟಾರೆ ಎಲ್ಲ ವಾಹನಗಳ ಮಾರಾಟ ವರ್ಷದಿಂದ ವರ್ಷಕ್ಕೆ ಶೇ 3ರಷ್ಟು ಏರಿಕೆ ಆಗಿದ್ದು ಒಟ್ಟು 21.27 ಲಕ್ಷ ಮಾರಾಟವಾಗಿವೆ. ಆದರೆ ಪ್ರಯಾಣಿಕ ವಾಹನಗಳ ಮಾರಾಟ ಶೇ 6ರಷ್ಟು ಇಳಿಕೆ ಆಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 3.43 ಲಕ್ಷ ವಾಹನಗಳು ಮಾರಾಟವಾಗಿದ್ದರೆ ಈ ವರ್ಷದ ಮಾರ್ಚ್‌ನಲ್ಲಿ 3.22 ಲಕ್ಷ ಮಾರಾಟವಾಗಿವೆ. ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ 5ರಷ್ಟು ಹೆಚ್ಚಳವಾಗಿದ್ದು 15.29 ಲಕ್ಷ ಮಾರಾಟವಾಗಿವೆ. ತ್ರಿಚಕ್ರ ವಾಹನಗಳ ಮಾರಾಟವು ಶೇ 17ರಷ್ಟು ಏರಿಕೆಯಾಗಿದ್ದು 1.05 ಲಕ್ಷ ಮಾರಾಟವಾಗಿವೆ. ವಾಣಿಜ್ಯ ವಾಹನಗಳು ಮಾರಾಟವು ಶೇ 6ರಷ್ಟು ಇಳಿಕೆಯಾಗಿ 91289 ಮಾರಾಟವಾಗಿವೆ. ಟ್ರ್ಯಾಕ್ಟರ್‌ ಮಾರಾಟವು ಶೇ 3ರಷ್ಟು ಕಡಿಮೆ ಆಗಿದ್ದು 78446 ಮಾರಾಟವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.