ಬೆಂಗಳೂರು: ‘ಬೆಂಗಳೂರು, ದೇಶದಲ್ಲಿಯೇ ಅತ್ಯಂತ ಉತ್ಸಾಹದಿಂದ ಕೂಡಿರುವ ನಗರವಾಗಿದೆ. ತಂತ್ರಜ್ಞಾನ ಒಳಗೊಂಡು ಹಲವು ವಿಷಯಗಳಲ್ಲಿ ಭವಿಷ್ಯದಲ್ಲಿ ದೇಶವನ್ನು ಪ್ರತಿನಿಧಿಸಲಿದೆ. ಹೀಗಾಗಿಹೂಡಿಕೆ, ಬೆಳವಣಿಗೆ ಮತ್ತು ಗ್ರಾಹಕರೊಂದಿಗೆ ಸಂವಹನದ ದೃಷ್ಟಿಯಿಂದ ಬೆಂಗಳೂರು ನಗರವು ನಮಗೆ ಬಹಳ ಮುಖ್ಯವಾಗಿದೆ’ ಎಂದು ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಸಿಇಒ ಸಂಜೀವ್ ಛಡ್ಡಾ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರಾಹಕರೊಂದಿಗೆ ಸಂವಹನ ನಡೆಸಿ, ಅವರ ಅಗತ್ಯಗಳನ್ನು ಅರಿತುಕೊಳ್ಳುವುದು. ನಮ್ಮ ಉತ್ಪನ್ನಗಳು ಅವರಿಗೆ ತಲುಪುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದರತ್ತ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಡಿಜಿಟಲೀಕರಣದ ಭಾಗವಾಗಿ ಬಿಒಬಿ ವರ್ಲ್ಡ್ ಆ್ಯಪ್ ಹೆಚ್ಚು ಪರಿಣಾಮಕಾರಿ ಆಗಿದೆ. ಖಾತೆ ತೆರೆಯುವುದರಿಂದ ಹಿಡಿದು, ಹೂಡಿಕೆ, ವರ್ಗಾವಣೆ, ಪಾವತಿ ಸೇರಿದಂತೆ ಎಲ್ಲಾ ಅಗತ್ಯ ಕೆಲಸಗಳನ್ನೂ ನಿರ್ವಹಿಸಬಹುದು. ಇಂದಿನ ಅಗತ್ಯಗಳಿಗೆ ತಕ್ಕಂತೆ ಬ್ಯಾಂಕ್ ಶಾಖೆಗಳನ್ನೂ ಮರುವಿನ್ಯಾಸಗೊಳಿಸಲಾಗುತ್ತಿದೆ. ಗ್ರಾಹಕ ಕೇಂದ್ರಿತ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ’ ಎಂದು ವಿವರಿಸಿದರು.
ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಜಾಯ್ದೀಪ್ ದತ್ ರಾಯ್, ಬೆಂಗಳೂರು ವಲಯದ ಮುಖ್ಯಸ್ಥ ಸುಧಾಕರ್ ಡಿ. ನಾಯಕ್ ಇದ್ದರು.
ಸಾಲ ಸಂಪರ್ಕ ಕಾರ್ಯಕ್ರಮ: ಬ್ಯಾಂಕ್ ಆಫ್ ಬರೋಡಾದ ಬೆಂಗಳೂರು ವಲಯದಲ್ಲಿ ಸೋಮವಾರ ಸಾಲ ಸಂಪರ್ಕ ಕಾರ್ಯಕ್ರಮಕ್ಕೆ ಬ್ಯಾಂಕ್‌ನ ಸಿಇಒ ಸಂಜೀವ್ ಛಡ್ಡಾ ಅವರು ಚಾಲನೆ ನೀಡಿದರು. ವೈಯಕ್ತಿಕ ಗ್ರಾಹಕರು, ರೈತರು, ಉದ್ಯಮಿಗಳು ಮತ್ತು ವ್ಯಾಪಾರ ಸಂಸ್ಥೆಗಳಿಗೆ ಸಾಲ ವಿತರಣೆ ಹಾಗೂ ದೇಶದ ಆರ್ಥಿಕ ಬೆಳವಣಿಗೆಗೆ ಡಿಜಿಟಲ್ ಉತ್ತೇಜನ ಕ್ರಮಗಳನ್ನು ಅನುಷ್ಠಾನಗೊಳಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.