ADVERTISEMENT

ಮುಷ್ಕರ: ಬ್ಯಾಂಕಿಂಗ್ ವಹಿವಾಟಿಗೆ ಧಕ್ಕೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 18:15 IST
Last Updated 21 ಡಿಸೆಂಬರ್ 2018, 18:15 IST

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಸೇರಿದ 3.20 ಲಕ್ಷ ಅಧಿಕಾರಿಗಳು, ವೇತನ ಪರಿಷ್ಕರಣೆಗೆ ಒತ್ತಾಯಿಸಿ ಶುಕ್ರವಾರ ಮುಷ್ಕರ ಆಚರಿಸಿದರು.

ಇದರಿಂದ ದೇಶದಾದ್ಯಂತ ಬ್ಯಾಂಕಿಂಗ್‌ ವಹಿವಾಟಿಗೆ ಧಕ್ಕೆ ಒದಗಿತು.ಬಹುತೇಕ ಕಡೆಗಳಲ್ಲಿ ಬ್ಯಾಂಕ್‌ಗಳಿಗೆ ಬಾಗಿಲು ಹಾಕಲಾಗಿತ್ತು.

ಶ್ರೇಣಿ 1 ರಿಂದ 7ರ ವರೆಗಿನ ಅಧಿಕಾರಿಗಳಿಗೆ 2017ರ ನವೆಂಬರ್‌ ತಿಂಗಳಿನಿಂದ ವೇತನ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟವು (ಎಐಬಿಒಸಿ) ಒಂದು ದಿನದ ಮುಷ್ಕರಕ್ಕೆ ಕರೆ ಕೊಟ್ಟಿತ್ತು.

ADVERTISEMENT

ಒಕ್ಕೂಟ ಮತ್ತು ಭಾರತದ ಬ್ಯಾಂಕ್‌ ಸಂಘದ (ಐಬಿಎ) ಮಧ್ಯೆ 13 ತಿಂಗಳವರೆಗೆ ಸಂಧಾನ ಮಾತುಕತೆ ನಡೆದಿದ್ದರೂ ಇದುವರೆಗೆ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಶೇ 8ರಷ್ಟು ವೇತನ ಪರಿಷ್ಕರಿಸಲು ಐಬಿಎ ಮುಂದಾಗಿದೆ. ಇದಕ್ಕೆ ಒಕ್ಕೂಟವು ಒಪ್ಪಿಕೊಂಡಿಲ್ಲ. 2012ರಿಂದ 2017ರ ಅವಧಿಯಲ್ಲಿ ಶೇ 15ರಷ್ಟು ವೇತನ ಪರಿಷ್ಕರಣೆ ಮಾಡಲಾಗಿತ್ತು.

26ರಂದು ಮುಷ್ಕರ: ವಿಜಯ ಬ್ಯಾಂಕ್‌, ದೇನಾ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಬರೋಡಾಗಳ ಉದ್ದೇಶಿತ ವಿಲೀನ ವಿರೋಧಿಸಿ, ಬ್ಯಾಂಕ್‌ ಕಾರ್ಮಿಕ ಸಂಘಟನೆಗಳ ಸಂಯುಕ್ತ ಒಕ್ಕೂಟವು ಇದೇ 26ರಂದು ಒಂದು ದಿನದ ಮುಷ್ಕರಕ್ಕೆ ಕರೆ ನೀಡಿವೆ.

ತಿಂಗಳ ನಾಲ್ಕನೆ ಶನಿವಾರ (ಡಿ.22), ಭಾನುವಾರ (ಡಿ.23) ಮತ್ತು ಮಂಗಳವಾರ (ಡಿ. 25) ಕ್ರಿಸ್ಮಸ್‌ ಪ್ರಯುಕ್ತ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಹೀಗಾಗಿ ಮುಂದಿನ ನಾಲ್ಕು ದಿನಗಳಲ್ಲಿ ಸೋಮವಾರ (ಡಿ. 24) ಮಾತ್ರ ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.