ಮುಂಬೈ: ದೇಶದ ಬ್ಯಾಂಕಿಂಗ್ ವಲಯದಲ್ಲಿ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು 18,461 ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಆರ್‌ಬಿಐ ವರದಿ ಗುರುವಾರ ಹೇಳಿದೆ.
ವಂಚನೆಯ ಪ್ರಕರಣಗಳಿಗೆ ಸಂಬಂಧಿಸಿದ ಮೊತ್ತವು 8 ಪಟ್ಟು ಹೆಚ್ಚಾಗಿದ್ದು, ₹21,367 ಕೋಟಿ ಆಗಿದೆ ಎಂದು ತಿಳಿಸಿದೆ.
2023-24 ಮತ್ತು 2024–25ರ ಹಣಕಾಸು ವರ್ಷದಲ್ಲಿನ ಇದುವರೆಗಿನ ಬ್ಯಾಂಕಿಂಗ್ ವಲಯದ ಪ್ರಗತಿಯ ವರದಿಯನ್ನು ಆರ್‌ಬಿಐ ಬಿಡುಗಡೆ ಮಾಡಿದೆ. ಈ ಅವಧಿಯಲ್ಲಿ ವಾಣಿಜ್ಯ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕುಗಳು ಮತ್ತು ಹಣಕಾಸೇತರ ಬ್ಯಾಂಕಿಂಗ್ ಸಂಸ್ಥೆಗಳು ಸೇರಿದಂತೆ ಬ್ಯಾಂಕಿಂಗ್ ಕ್ಷೇತ್ರದ ಕಾರ್ಯಕ್ಷಮತೆಯನ್ನು ವರದಿಯಲ್ಲಿ ತಿಳಿಸಿದೆ.
2023–24ರ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ 14,480 ವಂಚನೆ ಪ್ರಕರಣಗಳು ದಾಖಲಾಗಿದ್ದವು. ಇದರ ಮೊತ್ತ ₹2,623 ಕೋಟಿಯಷ್ಟಾಗಿತ್ತು. ಆದರೆ, ಪ್ರಸಕ್ತ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ 18,461ಕ್ಕೆ ಏರಿಕೆಯಾಗಿದೆ. ಮೊತ್ತವು ₹21,367 ಕೋಟಿಯಷ್ಟಾಗಿದೆ ಎಂದು ತಿಳಿಸಿದೆ.
ವಂಚನೆಗಳಿಂದಾಗಿ ಬ್ಯಾಂಕಿಂಗ್ ವಲಯವು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಬ್ಯಾಂಕ್‌ಗಳ ಹೆಸರು ಕೆಡುತ್ತದೆ, ಕಾರ್ಯಾಚರಣೆಗೆ ತೊಡಕಾಗುತ್ತದೆ, ವಹಿವಾಟು ಕುಂಠಿತಗೊಳ್ಳುತ್ತದೆ ಮತ್ತು ಗ್ರಾಹಕರು ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
2023–24ರ ಹಣಕಾಸು ವರ್ಷದಲ್ಲಿ ಶೇ 44ರಷ್ಟು ಪ್ರಕರಣಗಳು ವರದಿಯಾಗಿರುವುದು ಕಾರ್ಡ್ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್ ಪಾವತಿಯಿಂದ ಎಂದು ಹೇಳಿದೆ. ವಂಚನೆಯ ಒಟ್ಟು ಮೊತ್ತದಲ್ಲಿ ಇದರ ಪಾಲು ಶೇ 85ರಷ್ಟು ಆಗಿದೆ.
ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಂಚನೆ ಪ್ರಕರಣಗಳು ವರದಿಯಾಗಿದ್ದು, ಶೇ 67ರಷ್ಟಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಕಾರ್ಡ್ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್ ವಂಚನೆ ಪ್ರಕರಣ ನಡೆದಿವೆ. ಇದು ಬ್ಯಾಂಕ್‌ಗಳನ್ನು ಗಂಭೀರ ಆರ್ಥಿಕ ಅಪಾಯಗಳಿಗೆ ಒಡ್ಡುತ್ತದೆ. ಆದ್ದರಿಂದ, ಈ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಬ್ಯಾಂಕ್‌ಗಳು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಆರ್‌ಬಿಐ ವರದಿಯಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.