ADVERTISEMENT

ಸಣ್ಣ ಸಾಲಕ್ಕೆ ಬ್ಯಾಂಕ್‌ಗಳ ಹಿಂದೇಟು

ರೆಪೊ ದರ ತಗ್ಗಿಸಿ, ಮಾರುಕಟ್ಟೆಯಲ್ಲಿ ಬೇಡಿಕೆ ಉತ್ತೇಜಿಸುವ ಆರ್‌ಬಿಐ ಆಸೆಗೆ ತಣ್ಣೀರು?

ಏಜೆನ್ಸೀಸ್
Published 29 ಜುಲೈ 2025, 15:54 IST
Last Updated 29 ಜುಲೈ 2025, 15:54 IST
Indian currency notes of 500 denomination and 10 denomination coins
Image
Indian currency notes of 500 denomination and 10 denomination coins Image   

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರವನ್ನು ಕಡಿಮೆ ಮಾಡಿರುವುದರ ಪ್ರಯೋಜನವು ಎಲ್ಲರನ್ನೂ ತಲುಪಲು ಆರಂಭವಾಗುತ್ತಿರುವ ಹೊತ್ತಿನಲ್ಲಿ ಬ್ಯಾಂಕ್‌ಗಳು ಸಣ್ಣ ಮೊತ್ತದ ಸಾಲವನ್ನು ನೀಡಲು ಹಿಂದೇಟು ಹಾಕುತ್ತಿವೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ವಿವಿಧ ಉತ್ಪನ್ನಗಳ ಬೇಡಿಕೆಯ ಮೇಲೆ ಕೆಟ್ಟ ಪರಿಣಾಮ ಉಂಟಾಬಹುದು ಎಂಬ ಆತಂಕ ಉಂಟಾಗಿದೆ.

ರೆಪೊ ದರವನ್ನು ತಗ್ಗಿಸುವುದಷ್ಟೇ ಅಲ್ಲದೆ, ಹಣಕಾಸು ವ್ಯವಸ್ಥೆಯಲ್ಲಿ ನಗದು ಲಭ್ಯತೆಯನ್ನು ಹೆಚ್ಚಿಸುವ ಇತರ ಕೆಲವು ಕ್ರಮಗಳನ್ನೂ ಆರ್‌ಬಿಐ ಈಚೆಗೆ ತೆಗೆದುಕೊಂಡಿದೆ. ಈ ಮೂಲಕ ಹೂಡಿಕೆ ಹಾಗೂ ಬೇಡಿಕೆಯನ್ನು ಹೆಚ್ಚಿಸುವ ಉದ್ದೇಶವು ಆರ್‌ಬಿಐಗೆ ಇದೆ.

ಆದರೆ, ಅನುತ್ಪಾದಕ ಸಾಲಗಳ ಸಂಖ್ಯೆ ಹೆಚ್ಚಬಾರದು ಎಂಬ ಉದ್ದೇಶದಿಂದ ಬ್ಯಾಂಕ್‌ಗಳು ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಸಾಲ ನೀಡುವಿಕೆಗೆ ಹೆಚ್ಚು ಉತ್ಸಾಹ ತೋರಿಸುತ್ತಿಲ್ಲ. ಮನೆಬಳಕೆಯ ಉಪಕರಣ, ಕಾರುಗಳ ಖರೀದಿಗೆ ನೀಡುವ ಸಾಲವನ್ನು ಮಂಜೂರು ಮಾಡುವಾಗಲೂ ಅವು ಹೆಚ್ಚು ಉಮೇದು ತೋರಿಸುತ್ತಿಲ್ಲ.

ADVERTISEMENT

ಈ ವಲಯಗಳಿಗೆ ನೀಡುವ ಸಾಲದ ಬೆಳವಣಿಗೆ ಪ್ರಮಾಣವು ಮೇ ತಿಂಗಳಲ್ಲಿ ಒಂದಂಕಿಗೆ ತಗ್ಗಿದೆ. ಎನ್‌ಪಿಎ ಪ್ರಮಾಣ ಹೆಚ್ಚಾಗುತ್ತಿರುವುದನ್ನು ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಾದ ಎಚ್‌ಡಿಎಫ್‌ಸಿ, ಐಸಿಐಸಿಐ, ಎಕ್ಸಿಸ್ ಮತ್ತು ಕೋಟಕ್ ಮಹೀಂದ್ರ ತಮ್ಮ ಏಪ್ರಿಲ್–ಜೂನ್‌ ಅವಧಿಯ ಹಣಕಾಸಿನ ಫಲಿತಾಂಶದಲ್ಲಿ ಹೇಳಿವೆ. ಪ್ರಮುಖ ಎನ್‌ಬಿಎಫ್‌ಸಿ ಬಜಾಜ್‌ ಫೈನಾನ್ಸ್‌ ಕೂಡ ಎನ್‌ಪಿಎ ಹೆಚ್ಚಾಗುತ್ತಿರುವುದನ್ನು ಹೇಳಿದೆ.

ಸಣ್ಣ ಮೊತ್ತದ ವೈಯಕ್ತಿಕ ಸಾಲ ಪಡೆಯುವುದು ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತವಾದ ನಂತರ ಆರ್‌ಬಿಐ 2023ರಲ್ಲಿ, ಈ ಬಗೆಯ ಸಾಲಗಳಿಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಿತ್ತು. ಆದರೆ ಈ ವರ್ಷದ ಆರಂಭದಲ್ಲಿ ನಿಯಮಗಳನ್ನು ಸಡಿಲಿಸಲಾಗಿದೆ.

2023ರ ಮಾರ್ಚ್‌ನಲ್ಲಿ ಇದ್ದ ಸ್ಥಿತಿಗೆ ಹೋಲಿಸಿದರೆ ಈ ವರ್ಷದ ಮಾರ್ಚ್‌ನಲ್ಲಿ, 90 ದಿನಗಳಿಗೂ ಹೆಚ್ಚಿನ ಅವಧಿಯಿಂದ ಬಾಕಿ ಇರುವ ಕ್ರೆಡಿಟ್‌ ಕಾರ್ಡ್‌ ಸಾಲದ ಮೊತ್ತವು ಎರಡು ಪಟ್ಟಿಗಿಂತ ಹೆಚ್ಚಾಗಿದೆ ಎಂಬುದನ್ನು ಸಿಆರ್‌ಐಎಫ್‌ ಹೈ ಮಾರ್ಕ್‌ ವರದಿಯು ಹೇಳಿದೆ.

‘ಅಡಮಾನದ ಭದ್ರತೆ ಇಲ್ಲದ ಸಣ್ಣ ಸಾಲಗಳ ವಿಚಾರದಲ್ಲಿ (ಅಂದರೆ, ಕ್ರೆಡಿಟ್ ಕಾರ್ಡ್ ಸಾಲ ಮತ್ತು ವೈಯಕ್ತಿಕ ಸಾಲ) ಸಾಲ ನೀಡುವ ಕಂಪನಿಗಳು ಬಹಳ ಎಚ್ಚರಿಕೆಯ ಹೆಜ್ಜೆ ಇರಿಸುತ್ತಿವೆ’ ಎಂದು ಸಿಆರ್‌ಐಎಫ್‌ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ನಿರ್ದೇಶಕ ಸಚಿನ್ ಸೇಠ್ ಹೇಳಿದ್ದಾರೆ.

ವ್ಯಕ್ತಿಗಳಿಗೆ ವಾಣಿಜ್ಯ ಉದ್ದೇಶದ ವಾಹನ ಖರೀದಿಸಲು ನೀಡುವ ಸಾಲಗಳಲ್ಲಿ ಮರುಪಾವತಿ ಆಗದೆ ಇರುವುದು ಹೆಚ್ಚುತ್ತಿದೆ ಎಂದು ಕೋಟಕ್ ಮಹೀಂದ್ರ ಬ್ಯಾಂಕ್‌ ಕಳೆದ ವಾರ ಹೇಳಿದೆ. ಈ ಬಗೆಯ ಸಾಲ ನೀಡಿಕೆಗೆ ಅನುಸರಿಸುವ ನಿಯಮಗಳನ್ನು ಅದು ಬಿಗಿಗೊಳಿಸಿದೆ.

ದೇಶದ ಕೌಟುಂಬಿಕ ಸಾಲದ ಮಟ್ಟವು ಈಚಿನ ವರ್ಷಗಳಲ್ಲಿ ಹೆಚ್ಚಳ ಕಂಡಿದೆ ಎಂಬುದನ್ನು ಆರ್‌ಬಿಐ ಸಿದ್ಧಪಡಿಸಿರುವ ಹಣಕಾಸು ಸ್ಥಿರತೆ ವರದಿಯು ಹೇಳಿದೆ. ಕಡಿಮೆ ಕ್ರೆಡಿಟ್ ಅಂಕ ಹೊಂದಿರುವವರು ಸಾಲವನ್ನು ಹೆಚ್ಚು ಮಾಡಿಕೊಳ್ಳುವುದರ ಮೇಲೆ ನಿಗಾ ಇರಿಸಬೇಕಿದೆ ಎಂದು ಆರ್‌ಬಿಐ ಹೇಳಿದೆ.

ಸಾಲ ನೀಡುವ ಕಂಪನಿಗಳು ತಾವು ಪರಿಗಣಿಸುವ ಕ್ರೆಡಿಟ್ ಅಂಕದ ಮಟ್ಟವನ್ನು ಹೆಚ್ಚಿಸಿವೆ, ಈಗಾಗಲೇ ಒಂದು ಸಾಲ ಇರುವವರಿಗೆ ಹೊಸದಾಗಿ ಸಾಲ ನೀಡಲು ಹಿಂದೇಟು ಹಾಕುತ್ತಿವೆ, ಅಡಮಾನ ಸಾಲಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ ಎಂದು ಫಿನ್‌ಟೆಕ್‌ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಸಾಲ ಮರುಪಾವತಿ ಸಾಮರ್ಥ್ಯವು ಯಾವ ಪ್ರಮಾಣದಲ್ಲಿ ಹೆಚ್ಚಳ ಕಾಣುತ್ತಿದೆಯೋ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಲ ಬೆಳೆಯುತ್ತಿದೆ’ ಎಂದು ಬರ್ನ್‌ಸ್ಟೀನ್‌ ಸಂಸ್ಥೆಯ ಹಿರಿಯ ವಿಶ್ಲೇಷಕ ಪ್ರಣವ್ ಜಿ. ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.