ADVERTISEMENT

ಏಕಸ್‌ ಎಸ್‌ಇಜೆಡ್‌ನಲ್ಲಿ ಫ್ರಾನ್ಸ್‌ನ ಲಾಟೆಕೋರ್

ಸಿಇಒ ಅರವಿಂದ ಮೆಳ್ಳಿಗೇರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 18:00 IST
Last Updated 20 ಜೂನ್ 2018, 18:00 IST

ಬೆಳಗಾವಿ: ವಿಮಾನಗಳ ವೈರಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಫ್ರಾನ್ಸ್ ಮೂಲದ ಲಾಟೆಕೋರ್ ಗ್ರೂಪ್, ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನಲ್ಲಿರುವ ಏಕಸ್‌ ವಿಶೇಷ ಆರ್ಥಿಕ ವಲಯದಲ್ಲಿ (ಎಸ್‌ಇಜೆಡ್‌) ತನ್ನ ಘಟಕ ಸ್ಥಾಪಿಸಲಿದೆ ಎಂದು ಏಕಸ್‌ ಸಮೂಹದ ಅಧ್ಯಕ್ಷ ಮತ್ತು ಸಿಇಒ ಅರವಿಂದ್ ಮೆಳ್ಳಿಗೇರಿ ತಿಳಿಸಿದ್ದಾರೆ.

‘ಎಸ್‌ಇಜೆಡ್‌ನಲ್ಲಿ ವಿಮಾನಕ್ಕೆ ಸಂಬಂಧಿಸಿದ ತಂತ್ರಜ್ಞಾನ ಅಭಿವೃದ್ಧಿ ಮತ್ತು ಬಿಡಿ ಭಾಗಗಳನ್ನು ತಯಾರಿಸಲಾಗುತ್ತಿದೆ. ಲಾಟೆಕೋರ್, ಈ ಆರ್ಥಿಕ ವರ್ಷದ 3ನೇ ತ್ರೈಮಾಸಿಕ ಅವಧಿಯಲ್ಲಿ ಈಗ ಲಭ್ಯವಿರುವ 1,300 ಚ.ಮೀ ಜಾಗದಲ್ಲಿ ಮೊದಲು ತಯಾರಿಕೆ ಆರಂಭಿಸಲಿದೆ. ಈ ಕಂಪನಿಗಾಗಿ 4 ಸಾವಿರ ಚ.ಮೀ ಜಾಗ ಇದೆ’ ಎಂದು ಮಾಹಿತಿ ನೀಡಿದ್ದಾರೆ.

‘ಈ ವಿಶೇಷ ಆರ್ಥಿಕ ವಲಯವು 250 ಎಕರೆಗಳಷ್ಟು ವಿಶಾಲವಾಗಿದ್ದು, 2009ರಲ್ಲಿ ಆರಂಭಗೊಂಡಿದೆ. ಏರೋಸ್ಪೇಸ್ ಸೇವೆಗಳಿಗೆ ಸಂಬಂಧಿಸಿದ ತಂತ್ರಜ್ಞಾನವನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಜಾಗತಿಕವಾಗಿ ಏರೋಸ್ಪೇಸ್ ಉದ್ಯಮದ ದಿಗ್ಗಜ ಕಂಪನಿಗಳು ಈ ಆರ್ಥಿಕ ವಲಯದ ಕುರಿತು ಆಸಕ್ತಿ ವ್ಯಕ್ತಪಡಿಸಿದ್ದವು. ಅಮೆರಿಕ ಮತ್ತು ಫ್ರಾನ್ಸ್‌ನಲ್ಲಿ ಹಲವು ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡ ಬಳಿಕ ದೊಡ್ಡ ಪ್ರಮಾಣದ ಆರ್ಥಿಕ ವಲಯ ಹೊಂದಿರುವ ವಿಶ್ವದ ಮೊದಲ ಏರೋಸ್ಪೇಸ್ ಇಕೊಸಿಸ್ಟಮ್ ಎನಿಸಿಕೊಂಡಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಇಲ್ಲಿ ಪ್ರತಿ ಕಂಪನಿಯೂ ಶಕ್ತಿಶಾಲಿಯಾಗಿ ಬೆಳೆಯಲು ಪೂರಕ ವಾತಾವರಣ ಕಲ್ಪಿಸಲಾಗುತ್ತಿದೆ. ಇಲ್ಲಿರುವಂತೆ, ಏರೋಸ್ಪೇಸ್‌ಗೆ ಸಂಬಂಧಿಸಿದ ಎಲ್ಲ ಕಂಪನಿಗಳು ಒಂದೆಡೆಯೇ ಇರುವುದು ವಿಶ್ವದಲ್ಲಿಯೇ ಅಪರೂಪ’ ಎಂದು ಪ‍್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಇಲ್ಲಿರುವ ಇಂಟರ್‌ ಕನೆಕ್ಷನ್ ಸಿಸ್ಟಮ್‌ನ ತಂತ್ರಜ್ಞಾನಕ್ಕೆ ಜಾಗತಿಕ ಮನ್ನಣೆ ದೊರೆಯುತ್ತಿದೆ. ಹೊಸ ಘಟಕದಿಂದಾಗಿ ಸಮೂಹ ಇನ್ನಷ್ಟು ಸ್ಪರ್ಧಾತ್ಮಕವಾಗಲಿದೆ. ಗ್ರಾಹಕರ ಪ್ರಗತಿಪರ ಕಾರ್ಯಕ್ರಮಗಳಿಗೆ ಸ್ಪಂದಿಸಲು ಸಹಕಾರಿಯಾಗಲಿದೆ’ ಎಂದು ಲಾಟೆಕೋರ್‌ನ ಸಿಇಒ ಯಾನಿಕ್ ಅಸೋದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.