ADVERTISEMENT

ಪೇಟೆ ವಹಿವಾಟು ಸಾರ್ವಕಾಲಿಕ ದಾಖಲೆ

ಕೇಂದ್ರದಿಂದ ಸುಧಾರಣಾ ಕ್ರಮಗಳ ಜಾರಿ ವಿಶ್ವಾಸ: ಹೆಚ್ಚಿದ ವಿದೇಶಿ ಬಂಡವಾಳ ಒಳಹರಿವು

ಪಿಟಿಐ
Published 28 ಮೇ 2019, 18:41 IST
Last Updated 28 ಮೇ 2019, 18:41 IST
   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಮೂರನೇ ವಹಿವಾಟು ಅವಧಿಯಲ್ಲಿಯೂ ಸಕಾರಾತ್ಮಕ ಚಲನೆ ಮುಂದುವರಿದಿದೆ.

ಸೋಮವಾರವಷ್ಟೇ ಹೊಸ ಎತ್ತರದಲ್ಲಿ ವಹಿವಾಟು ಅಂತ್ಯಗೊಳಿಸಿದ್ದ ಷೇರುಪೇಟೆಗಳು ಮಂಗಳವಾರದ ವಹಿವಾಟಿನಲ್ಲಿ ವಿದೇಶಿ ಹೂಡಿಕೆಯ ಬಲದಿಂದ ಮತ್ತೊಂದು ಹೊಸ ಎತ್ತರವನ್ನು ತಲುಪಿದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 66 ಅಂಶ ಹೆಚ್ಚಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 39,749 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ಕೇವಲ 4 ಅಂಶ ಹೆಚ್ಚಾಗಿ ‌11,928 ಅಂಶಗಳಿಗೆ ತಲುಪಿತು.ಹೂಡಿಕೆದಾರರು, ಜಾಗತಿಕ ವಿದ್ಯಮಾನಗಳ ಕಡೆಗೂ ಗಮನ ನೀಡಿದ್ದರಿಂದ ದಿನದ ವಹಿವಾಟು ಚಂಚಲತೆಯನ್ನೂ ಅನುಭವಿಸುವಂತಾಯಿತು. ಇದರಿಂದ ಸೂಚ್ಯಂಕದ ಏರಿಕೆಯ ವೇಗಕ್ಕೆ ಕಡಿವಾಣ ಬಿದ್ದಿತು.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಸುಧಾರಣೆಗೆ ಹೆಚ್ಚಿನ ಗಮನ ನೀಡಲಿದೆ ಎನ್ನುವುದು ಹೂಡಿಕೆದಾರರ ವಿಶ್ವಾಸವಾಗಿದೆ. ಇದರಿಂದಾಗಿ ಚುನಾವಣಾ ಫಲಿತಾಂಶದ ಬಳಿಕ ಸೂಚ್ಯಂಕಗಳು ಏರುಮುಖ ಚಲನೆಯಲ್ಲಿವೆ.

ಆದರೆ, ಅಮೆರಿಕ–ಚೀನಾ ವಾಣಿಜ್ಯ ಸಂಘರ್ಷ, ಮುಂಗಾರು, ಹಣದುಬ್ಬರ, ಕೈಗಾರಿಕಾ ಪ್ರಗತಿಯ ಅಂಶಗಳ ಮೇಲೆಯೂ ಹೂಡಿಕೆದಾರರು ಗಮನ ಕೇಂದ್ರೀಕರಿಸಿದ್ದರಿಂದ ಮಂಗಳವಾರದ ವಹಿವಾಟಿನಲ್ಲಿ ಸೂಚ್ಯಂಕ ಅಲ್ಪ ಏರಿಕೆಯನ್ನಷ್ಟೇ ಕಾಣಲು ಸಾಧ್ಯವಾಯಿತು.

ಯೆಸ್‌ ಬ್ಯಾಂಕ್‌ ಷೇರುಗಳು ಶೇ 4.06ರಷ್ಟು ಗರಿಷ್ಠ ಗಳಿಕೆ ಕಂಡುಕೊಂಡಿತು. ಕೋಲ್‌ ಇಂಡಿಯಾ, ಇನ್ಫೊಸಿಸ್‌, ವೇದಾಂತ, ರಿಲಯನ್ಸ್‌, ಟಿಸಿಎಸ್‌ ಷೇರುಗಳು ಸಹ ಉತ್ತಮ ಗಳಿಕೆ ಕಂಡಿವೆ.

ರೂಪಾಯಿ ಮೌಲ್ಯ ಇಳಿಕೆ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 18 ಪೈಸೆ ಇಳಿಕೆಯಾಗಿದ್ದು, ಒಂದು ಡಾಲರ್‌ಗೆ ₹ 69.69 ರಂತೆ ವಿನಿಮಯಗೊಂಡಿತು.

ರಫ್ತದಾರರಿಂದ ಡಾಲರ್‌ಗೆ ಹೆಚ್ಚಿನ ಬೇಡಿಕೆ ಬಂದಿರುವುದು ಹಾಗೂ ಕಚ್ಚಾ ತೈಲ ದರ ಏರಿಕೆಯಿಂದಾಗಿ ರೂಪಾಯಿ ಮೌಲ್ಯದಲ್ಲಿ ಇಳಿಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಬ್ರೆಂಟ್‌ ತೈಲ ದರ ಶೇ 0.53ರಷ್ಟು ಹೆಚ್ಚಾಗಿ ಒಂದು ಬ್ಯಾರೆಲ್‌ಗೆ 70.48 ಡಾಲರ್‌ಗಳಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.