ಮುಂಬೈ: ದೇಶದ ಷೇರುಪೇಟೆ ಸೂಚ್ಯಂಕಗಳು ಸೋಮವಾರದ ವಹಿವಾಟಿನಲ್ಲಿ ಹೊಸ ದಾಖಲೆಯ ಮಟ್ಟ ತಲುಪಿದವು. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರು ಹಾಗೂ ಐ.ಟಿ. ವಲಯದ ಕಂಪನಿಗಳ ಷೇರು ಖರೀದಿ ಜೋರಾಗಿ ನಡೆದಿದ್ದು ಈ ಏರಿಕೆಗೆ ಕೊಡುಗೆ ನೀಡಿತು.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್ 166 ಅಂಶ ಏರಿಕೆಯಾಗಿ ದಾಖಲೆಯ 58,296 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ವಹಿವಾಟಿನ ನಡುವಿನಲ್ಲಿ ಸೂಚ್ಯಂಕವು 58,515 ಅಂಶವನ್ನು ತಲುಪಿತ್ತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 54 ಅಂಶ ಹೆಚ್ಚಾಗಿ ದಾಖಲೆಯ ಮಟ್ಟವಾದ 17,377ರಲ್ಲಿ ವಹಿವಾಟು ಕೊನೆಗೊಳಿಸಿತು.
‘ಆರ್ಥಿಕ ಚಟುವಟಿಕೆಗಳು ಸಹಜವಾಗುತ್ತಿರುವುದರಿಂದ ರಿಯಾಲ್ಟಿ ವಲಯದ ಷೇರುಗಳತ್ತ ಖರೀದಿದಾರರು ಮುಖ ಮಾಡುವಂತೆ ಆಗಿದೆ. ಐ.ಟಿ. ವಲಯದ ಷೇರುಗಳು ಎಂದಿನಂತೆ ಖರೀದಿದಾರರ ಆಕರ್ಷಣೆಯನ್ನು ಉಳಿಸಿಕೊಂಡಿವೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಎಂಟು ಪೈಸೆ ಇಳಿಕೆ ಆಗಿದ್ದು ₹ 73.10ಕ್ಕೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.