ADVERTISEMENT

ಭಾರತದಲ್ಲಿ ಹೂಡಿಕೆಗೆ ಸೂಕ್ತ ಸಮಯ: ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 16:53 IST
Last Updated 17 ಜನವರಿ 2022, 16:53 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಜಾಗತಿಕ ಉದ್ದಿಮೆಗಳಿಗೆ ಭಾರತದಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದರು. ಸಾಂಕ್ರಾಮಿಕದ ಅವಧಿಯಲ್ಲಿ ದೇಶವು ಸುಧಾರಣೆಗಳನ್ನು ಜಾರಿಗೊಳಿಸಿದೆ, ನವೋದ್ಯಮಗಳನ್ನು ದೊಡ್ಡ ಸಂಖ್ಯೆಯಲ್ಲಿ ಆಕರ್ಷಿಸಿದೆ ಎಂದು ಹೇಳಿದರು.

‘ಇದು ಭಾರತದಲ್ಲಿ ಹೂಡಿಕೆ ಮಾಡಲು ಅತ್ಯುತ್ತಮ ಸಂದರ್ಭ. ಭಾರತೀಯರಲ್ಲಿ ಇರುವ ಉದ್ಯಮಶೀಲತೆ ಮತ್ತು ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಸಾಮರ್ಥ್ಯವು ನಮ್ಮ ಜಾಗತಿಕ ಪಾಲುದಾರರಿಗೆ ಹೊಸ ಶಕ್ತಿಯನ್ನು ನೀಡಬಲ್ಲದು’ ಎಂದು ಅವರು ವಿಶ್ವ ಆರ್ಥಿಕ ವೇದಿಕೆಯನ್ನು ಉದ್ದೇಶಿಸಿ, ವರ್ಚುವಲ್ ಆಗಿ ಮಾಡಿದ ಭಾಷಣದಲ್ಲಿ ಹೇಳಿದರು.

ಸರಿಸುಮಾರು ಆರು ಲಕ್ಷ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಕೇಬಲ್ ಮೂಲಕ ಸಂಪರ್ಕ ಕಲ್ಪಿಸಲು ₹ 96 ಲಕ್ಷ ಕೋಟಿ ಹೂಡಿಕೆ ಮಾಡಲು ದೇಶ ಯೋಜನೆ ರೂಪಿಸಿದೆ ಎಂದರು. ‘2014ರಲ್ಲಿ ದೇಶದಲ್ಲಿ ನೋಂದಾಯಿತ ನವೋದ್ಯಮಗಳ ಸಂಖ್ಯೆಯು ಕಡಿಮೆ ಇತ್ತು. ಈಗ ಇಂಥವುಗಳ ಸಂಖ್ಯೆಯು 60 ಸಾವಿರವನ್ನು ದಾಟಿದೆ. ಕಳೆದ ಆರು ತಿಂಗಳುಗಳಲ್ಲಿ 10 ಸಾವಿರಕ್ಕೂ ಹೆಚ್ಚಿನ ನವೋದ್ಯಮಗಳ ನೋಂದಣಿ ಆಗಿದೆ. ದೇಶದಲ್ಲಿ ಇಂದು 50 ಲಕ್ಷಕ್ಕಿಂತ ಹೆಚ್ಚು ಜನ ಸಾಫ್ಟ್‌ವೇರ್‌ ಡೆವಲಪರ್‌ಗಳು ಕೆಲಸ ಮಾಡುತ್ತಿದ್ದಾರೆ’ ಎಂದರು.

ADVERTISEMENT

‘ಇಂದು ಭಾರತವು ವಿಶ್ವದ ಅತ್ಯಂತ ದೊಡ್ಡ, ಸುರಕ್ಷಿತವಾದ ಹಾಗೂ ಯಶಸ್ಸು ಕಂಡಿರುವ ಡಿಜಿಟಲ್ ಪಾವತಿ ವೇದಿಕೆಯನ್ನು ಹೊಂದಿದೆ’ ಎಂದು ಯುಪಿಐ ಪಾವತಿ ವ್ಯವಸ್ಥೆ ಬಗ್ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.