ADVERTISEMENT

ಭಾರತ್‌ ಟ್ಯಾಕ್ಸಿ ಚಾಲಕರಿಗೆ ಕನಿಷ್ಠ ಆದಾಯದ ಖಾತರಿ: ಅಮಿತ್ ಶಾ

ಎರಡು ವರ್ಷದಲ್ಲಿ 15 ಕೋಟಿ ಚಾಲಕರನ್ನು ನೋಂದಣಿ

ಪಿಟಿಐ
Published 23 ಫೆಬ್ರುವರಿ 2026, 15:59 IST
Last Updated 23 ಫೆಬ್ರುವರಿ 2026, 15:59 IST
<div class="paragraphs"><p>ಅಮಿತ್ ಶಾ</p></div>

ಅಮಿತ್ ಶಾ

   

ನವದೆಹಲಿ: ಭಾರತ್‌ ಟ್ಯಾಕ್ಸಿ ಸೇವೆ ನೀಡುತ್ತಿರುವ ಚಾಲಕರಿಗೆ ಪ್ರತಿ ಕಿಲೋ ಮೀಟರ್‌ಗೆ ಕನಿಷ್ಠ ಆದಾಯದ ಖಾತರಿ ಇರಲಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ.

ಸಹಕಾರ ತತ್ವದ ಅಡಿ ಕೆಲಸ ನಿರ್ವಹಿಸುವ ಭಾರತ್‌ ಟ್ಯಾಕ್ಸಿ ವೇದಿಕೆಯು ಲಾಭದ ಮೊತ್ತದಲ್ಲಿ ಶೇ 80ರಷ್ಟನ್ನು  ಚಾಲಕರಿಗೆ ನೀಡಲಿದೆ. ಉಳಿದ ಶೇ 20ರಷ್ಟನ್ನು ಬಂಡವಾಳವಾಗಿ ಉಳಿಸಿಕೊಳ್ಳುತ್ತದೆ ಎಂದು ಕ್ಯಾಬ್‌ ಮತ್ತು ಆಟೊ ಚಾಲಕರೊಂದಿಗೆ ನಡೆದ ಸಂವಾದದಲ್ಲಿ ಸಚಿವರು ತಿಳಿಸಿದ್ದಾರೆ.

ADVERTISEMENT

ಕ್ಯಾಬ್‌ ಸೇವೆ ನೀಡುವ ಅಗ್ರಿಗೇಟರ್‌ಗಳು ಕಾರ್ಪೊರೇಟ್ ಲಾಭವನ್ನು ಹೆಚ್ಚಿಸಲು ಚಾಲಕರಿಗೆ ಆದಾಯ ಖಾತರಿ ನಿಗದಿಪಡಿಸುವುದನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿವೆ ಎಂದು ಅವರು ದೂರಿದ್ದಾರೆ.

‘ನಿಮ್ಮ ವೇದಿಕೆಯಲ್ಲಿ ಕೆಲಸ ಮಾಡುವ ಚಾಲಕರಿಗೆ ಕನಿಷ್ಠ ಆದಾಯದ ಖಾತರಿ ನೀಡುತ್ತಿದ್ದೀರಾ ಎಂದು ಕ್ಯಾಬ್‌ ಸೇವೆ ನೀಡುವ ಮೂರು ಕಂಪನಿಗಳಿಗೆ ಕೇಳಿದೆ. ಅವರು ಇಲ್ಲ ಎಂದು ಉತ್ತರಿಸಿದ್ದಾರೆ. ಆದರೆ, ನಾವು ಈ ರೀತಿ ಮಾಡುವುದಿಲ್ಲ. ನಿಮಗೆ ಆದಾಯದ ಖಾತರಿ ಇರುತ್ತದೆ...’ ಎಂದು ಹೇಳಿದ್ದಾರೆ.

ಸಹಕಾರ ವಲಯದ ಭಾರತ್ ಟ್ಯಾಕ್ಸಿ ಮತ್ತು ‘ಅಮೂಲ್‌’ ಕಾರ್ಮಿಕ ಮಾಲೀಕತ್ವದ ಉದ್ಯಮವಾಗಿವೆ ಎಂದು ಸಚಿವರು ಬಣ್ಣಿಸಿದರು. 36 ಲಕ್ಷ ತಾಯಂದಿರು ಮತ್ತು ಸಹೋದರಿಯರು ತಲಾ ₹50 ಹೂಡಿಕೆ ಮಾಡಿ ಅಮೂಲ್‌ ಸಂಸ್ಥೆ ಕಟ್ಟಿದರು ಎಂದರು. ಇಂದು ಅಮೂಲ್‌ ವಾರ್ಷಿಕ ₹1.25 ಲಕ್ಷ ಕೋಟಿ ವಹಿವಾಟು ನಡೆಸುವ ಉದ್ಯಮವಾಗಿದೆ.

ಚಾಲಕರ ಸದಸ್ಯತ್ವ ಹೆಚ್ಚಾದಂತೆ ಭಾರತ್ ಟ್ಯಾಕ್ಸಿಯ ಆಡಳಿತ ಮಂಡಳಿಯಲ್ಲಿನ ಸ್ಥಾನಗಳನ್ನು ಚಾಲಕರ ಪ್ರತಿನಿಧಿಗಳಿಗೆ ಮೀಸಲಿಡಲಾಗುವುದು ಎಂದಿದ್ದಾರೆ.

ಮುಂದಿನ ಎರಡು ವರ್ಷಗಳಲ್ಲಿ 15 ಕೋಟಿ ಚಾಲಕರನ್ನು ಈ ವೇದಿಕೆಯಲ್ಲಿ ನೋಂದಣಿ ಮಾಡಿಕೊಳ್ಳುವ ಗುರಿ ಹೊಂದಲಾಗಿದೆ. ಅಲ್ಲದೆ, ಮೂರು ವರ್ಷಗಳಲ್ಲಿ ಪ್ರತಿ ನಗರಕ್ಕೂ ಈ ಸೇವೆ ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.

ಭಾರತ್‌ ಟ್ಯಾಕ್ಸಿ ಸೇವೆ ಬಳಸುವ ಮಹಿಳೆಯರಿಗೆ ರಕ್ಷಣೆ ನೀಡಲು ಅದರ ಆ್ಯಪ್‌ನಲ್ಲಿ ‘ಸಾರಥಿ ದೀದಿ’ ಎನ್ನುವ ವೈಶಿಷ್ಟ್ಯ ಅಳವಡಿಸಲಾಗುವುದು. ಇದು ಮಹಿಳೆಯರಿಗೆ ಪ್ರಯಾಣದ ವೇಳೆ ಸುರಕ್ಷತೆ ಕಲ್ಪಿಸಲಿದೆ. ಸೇವೆಗೆ ಸಂಬಂಧಿಸಿದ ದೂರುಗಳನ್ನು ಆನ್‌ಲೈನ್‌, ಭೌತಿಕ ಮತ್ತು ಸಹಾಯ ಕೇಂದ್ರಕ್ಕೆ ಕರೆ ಮಾಡಿ, ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.‌

ಟ್ಯಾಕ್ಸಿ ಅಡಮಾನವಾಗಿ ಇಟ್ಟುಕೊಂಡು ಸಹಕಾರ ವಲಯದ ಬ್ಯಾಂಕ್‌ಗಳ ಮೂಲಕ ಹೊಸ ವಾಹನಗಳಿಗೆ ಸಾಲ ನೀಡಲಾಗುವುದು
ಅಮಿತ್ ಶಾ ಕೇಂದ್ರ ಸಹಕಾರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.