ಬೆಂಗಳೂರು: ವಂಚನೆಗಳನ್ನು ತಡೆಯುವ ಉದ್ದೇಶದಿಂದ ತಾನು ತೆಗೆದುಕೊಂಡ ಕ್ರಮಗಳ ಪರಿಣಾಮವಾಗಿ ತನ್ನ ನೆಟ್‌ವರ್ಕ್ ಬಳಸುವವರು ಸೈಬರ್ ಅಪರಾಧಕ್ಕೆ ಗುರಿಯಾದ ದೂರುಗಳು ಗಣನೀಯವಾಗಿ ಇಳಿಕೆ ಕಂಡಿವೆ ಎಂದು ಭಾರ್ತಿ ಏರ್‌ಟೆಲ್ ಮಂಗಳವಾರ ಹೇಳಿದೆ.
ಕೇಂದ್ರ ಗೃಹ ಸಚಿವಾಲಯದ ಸೈಬರ್ ಅಪರಾಧಗಳ ಸಮನ್ವಯ ಕೇಂದ್ರದ ಮಾಹಿತಿ ಪ್ರಕಾರ, ಏರ್‌ಟೆಲ್ ಬಳಕೆದಾರರು ಸೈಬರ್ ಅಪರಾಧಕ್ಕೆ ತುತ್ತಾಗಿ ಅನುಭವಿಸಿದ ಹಣಕಾಸಿನ ನಷ್ಟದ ಮೌಲ್ಯವು ಶೇ 68.7ರಷ್ಟು ಕಡಿಮೆ ಆಗಿದೆ, ಏರ್‌ಟೆಲ್‌ನಲ್ಲಿ ಒಟ್ಟಾರೆಯಾಗಿ ಸೈಬರ್ ಅಪರಾಧಗಳ ಪ್ರಮಾಣವು ಶೇ 14.3ರಷ್ಟು ಕಡಿಮೆ ಆಗಿದೆ ಎಂದು ಕಂಪನಿಯ ಪ್ರಕಟಣೆ ಹೇಳಿದೆ.
ಏರ್‌ಟೆಲ್‌ನ ವಂಚನೆ ಪತ್ತೆ ಸೌಲಭ್ಯ ಶುರುವಾಗುವುದಕ್ಕೆ ಮೊದಲಿನ ಹಾಗೂ ನಂತರದ ದತ್ತಾಂಶ ವಿಶ್ಲೇಷಿಸಿ ಈ ಅಂಕಿ–ಅಂಶ ನೀಡಲಾಗಿದೆ.
ಕಳೆದ ಒಂದು ವರ್ಷದಲ್ಲಿ ಕಂಪನಿಯ ಎ.ಐ. ಆಧಾರಿತ ಸೌಲಭ್ಯವು 4,830 ಕೋಟಿಗಿಂತ ಹೆಚ್ಚು ಅನುಚಿತ, ಅನಪೇಕ್ಷಿತ ಸ್ಪ್ಯಾಮ್ ಕರೆಗಳನ್ನು ಗುರುತಿಸಿದೆ. ವಂಚನೆಯ ಉದ್ದೇಶದ 3.2 ಲಕ್ಷ ವೆಬ್ ಕೊಂಡಿಗಳನ್ನು ತಡೆದಿದೆ ಎಂದು ಭಾರ್ತಿ ಏರ್‌ಟೆಲ್ ಕಂಪನಿಯ ಉಪಾಧ್ಯಕ್ಷ ಗೋಪಾಲ್ ವಿಟ್ಠಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.