ADVERTISEMENT

ಶುಲ್ಕ ಹೆಚ್ಚಿಸಲಿರುವ ಏರ್‌ಟೆಲ್‌

ಪಿಟಿಐ
Published 28 ಫೆಬ್ರುವರಿ 2023, 14:13 IST
Last Updated 28 ಫೆಬ್ರುವರಿ 2023, 14:13 IST
   

ಬಾರ್ಸಲೋನಾ: ಮೊಬೈಲ್‌ ಸೇವಾ ಶುಲ್ಕಗಳನ್ನು ಎಲ್ಲ ಹಂತಗಳಲ್ಲಿಯೂ ಹೆಚ್ಚಿಸುವ ಆಲೋಚನೆ ಇದೆ ಎಂದು ಭಾರ್ತಿ ಏರ್‌ಟೆಲ್‌ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಹೇಳಿದ್ದಾರೆ. ಏರ್‌ಟೆಲ್ ಕಂಪನಿಯು ಆರಂಭಿಕ ಹಂತದ ಮೊಬೈಲ್‌ ಸೇವಾ ಶುಲ್ಕವನ್ನು ಈಚೆಗೆ ಎಂಟು ದೂರಸಂಪರ್ಕ ವೃತ್ತಗಳಲ್ಲಿ ಶೇಕಡ 57ರಷ್ಟು (₹ 155ಕ್ಕೆ) ಹೆಚ್ಚಿಸಿದೆ.

ಹೂಡಿಕೆ ಮಾಡಿದ ಬಂಡವಾಳಕ್ಕೆ ಸಿಗುತ್ತಿರುವ ವರಮಾನವು ದೂರಸಂಪರ್ಕ ಉದ್ಯಮದಲ್ಲಿ ಬಹಳ ಕಡಿಮೆ ಇದೆ. ಹೀಗಾಗಿ, ಈ ವರ್ಷದಲ್ಲಿ ಸೇವಾ ಶುಲ್ಕವನ್ನು ಹೆಚ್ಚಿಸಲಾಗುತ್ತದೆ ಎಂದು ಮಿತ್ತಲ್ ಅವರು ಹೇಳಿದ್ದಾರೆ. ಅವರು ಇಲ್ಲಿ ನಡೆಯುತ್ತಿರುವ ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ನಲ್ಲಿ ಪಾಲ್ಗೊಂಡಿದ್ದಾರೆ.

ಕಡಿಮೆ ಆದಾಯ ಹೊಂದಿರುವ ವರ್ಗಗಳ ಮೇಲೆ ಶುಲ್ಕ ಹೆಚ್ಚಳದಿಂದ ಆಗುವ ಪರಿಣಾಮಗಳ ಬಗ್ಗೆ ಪ್ರಶ್ನಿಸಿದಾಗ, ‘ಜನರು ಇತರ ಉದ್ದೇಶಗಳಿಗಾಗಿ ಮಾಡುತ್ತಿರುವ ವೆಚ್ಚಗಳಿಗೆ ಹೋಲಿಸಿದರೆ ಈ ಹೆಚ್ಚಳವು ಕಡಿಮೆ’ ಎಂದು ಉತ್ತರಿಸಿದ್ದಾರೆ.

ADVERTISEMENT

‘ಜನರ ಸಂಬಳ ಹೆಚ್ಚಾಗಿದೆ, ಬಾಡಿಗೆ ಪಾವತಿ ಜಾಸ್ತಿಯಾಗಿದೆ. ಜನರು ಬಹುತೇಕ ಏನನ್ನೂ ಪಾವತಿಸದೆಯೇ 30 ಜಿ.ಬಿ. ಡೇಟಾ ಬಳಸುತ್ತಿದ್ದಾರೆ’ ಎಂದು ಮಿತ್ತಲ್ ಹೇಳಿದ್ದಾರೆ. ಕಂಪನಿಯು ಅಲ್ಪಾವಧಿಯಲ್ಲಿ, ಪ್ರತಿ ಗ್ರಾಹಕನಿಂದ ಬರುವ ವರಮಾನವು ₹ 200 ಆಗಬೇಕು ಎಂಬ ಗುರಿ ಇಟ್ಟುಕೊಂಡಿದೆ. ದೀರ್ಘಾವಧಿಯಲ್ಲಿ ಇದು ₹ 300ಕ್ಕೆ ತಲುಪಬೇಕು ಎಂಬ ಗುರಿಯನ್ನು ಕಂಪನಿಯು ಹೊಂದಿದೆ.

‘ಭಾರತದಷ್ಟು ಬೃಹತ್ ಆಗಿರುವ ದೇಶದಲ್ಲಿ ಮೂರು ದೂರಸಂಪರ್ಕ ಸೇವಾ ಕಂಪನಿಗಳು ಇರಬೇಕು ಎಂಬುದು ಯಾವತ್ತಿನಿಂದಲೂ ನಮ್ಮ ನಿಲುವು. ಈಗಿರುವ ಪ್ರಶ್ನೆಯೆಂದರೆ, ಮೂರನೆಯ ಕಂಪನಿಯು ಬಿಎಸ್‌ಎನ್‌ಎಲ್‌ ಆಗಿರಲಿದೆಯೋ ಅಥವಾ ವೊಡಾಫೋನ್ ಐಡಿಯಾ ಆಗಿರಲಿದೆಯೋ ಎಂಬುದು. ಸರ್ಕಾರವು ತನ್ನಿಂದ ಸಾಧ್ಯವಾಗುವುದನ್ನೆಲ್ಲ ಮಾಡಿದೆ. ಈಗ ವೊಡಾಫೋನ್ ಐಡಿಯಾ ಕಂಪನಿಯು ಅದರ ಪ್ರಯೋಜನ ಪಡೆಯಬೇಕು’ ಎಂದು ಮಿತ್ತಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.