ADVERTISEMENT

ಸುಸ್ತಿದಾರರ ಹೆಸರು ಬಹಿರಂಗಪಡಿಸಿ

ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಮಾಹಿತಿ ಆಯೋಗ ನಿರ್ದೇಶನ

ಪಿಟಿಐ
Published 27 ಮೇ 2019, 17:36 IST
Last Updated 27 ಮೇ 2019, 17:36 IST
   

ನವದೆಹಲಿ: ದೊಡ್ಡ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿರುವವರ ಹೆಸರು ಬಹಿರಂಗಪಡಿಸಬೇಕು ಎಂದು ಕೇಂದ್ರೀಯ ಮಾಹಿತಿ ಆಯೋಗವು (ಸಿಐಸಿ) ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಆದೇಶಿಸಿದೆ.

ಸಾಲ ವಸೂಲಾತಿಗೆ ಕ್ರಮ ಕೈಗೊಳ್ಳಲು ಆರ್‌ಬಿಐ, ಬ್ಯಾಂಕ್‌ಗಳಿಗೆ ಕಳಿಸಿರುವ ಸುಸ್ತಿದಾರರ ಪಟ್ಟಿ ಬಹಿರಂಗಪಡಿಸಬೇಕು ಎನ್ನುವುದು ‘ಸಿಐಸಿ’ನ ನಿಲುವಾಗಿದೆ.

ಲಖನೌದ ಸಾಮಾಜಿಕ ಕಾರ್ಯಕರ್ತೆ ನೂತನ್‌ ಠಾಕೂರ್ ಅವರು ಸಲ್ಲಿಸಿರುವ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಈ ನಿರ್ದೇಶನ ನೀಡಲಾಗಿದೆ.

ADVERTISEMENT

ಆರ್‌ಬಿಐ ಡೆಪ್ಯುಟಿ ಗವರ್ನರ್‌ ವಿರಳ್‌ ಆಚಾರ್ಯ ಅವರು 2017ರಲ್ಲಿ ನೀಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ, ಸಾಲ ವಸೂಲಾತಿಗೆ ಕ್ರಮ ಕೈಗೊಳ್ಳಲು ಆರ್‌ಬಿಐ ಬ್ಯಾಂಕ್‌ಗಳಿಗೆ ಕೆಲ ಸುಸ್ತಿದಾರರ ಹೆಸರುಗಳನ್ನು ರವಾನಿಸಿದೆ ಎಂದು ಹೇಳಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ಮಾಧ್ಯಮ ವರದಿಗಳನ್ನು ಆಧರಿಸಿ ಆರ್‌ಟಿಐ ಅರ್ಜಿ ಸಲ್ಲಿಸಲಾಗಿತ್ತು

‘ಸಾಲ ಮರುಪಾವತಿ ಮಾಡದ ಬ್ಯಾಂಕ್‌ ಖಾತೆಗಳಿಗೆ ಕಾರ್ಯಸಾಧ್ಯವಿರುವ ಪರಿಹಾರ ಕಂಡುಕೊಳ್ಳಬೇಕು ಎಂದು ಆರ್‌ಬಿಐನ ಆಂತರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ. ವಸೂಲಾಗದ ಸಾಲದ (ಎನ್‌ಪಿಎ) ಒಟ್ಟಾರೆ ಮೊತ್ತದಲ್ಲಿ ಶೇ 25ರಷ್ಟು ಪಾಲು ಹೊಂದಿರುವ 12 ದೊಡ್ಡ ಖಾತೆಗಳ ವಿರುದ್ಧ ದಿವಾಳಿ ಸಂಹಿತೆಯಡಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ’ ಎಂದು ಆಚಾರ್ಯ ಅವರು ಹೇಳಿದ್ದರು.

ಆರ್‌ಬಿಐ ಪಟ್ಟಿ ಮಾಡಿರುವ ಸುಸ್ತಿದಾರರ ಬಗ್ಗೆ ತಮಗೆ ಮಾಹಿತಿ ನೀಡಬೇಕು. ಈ ಸಂಬಂಧ ನಡೆದ ಪತ್ರ ವ್ಯವಹಾರ ಮತ್ತು ಸಭೆಗಳ ಟಿಪ್ಪಣಿಯನ್ನು ತಮಗೆ ಒದಗಿಸಬೇಕು ಎಂದೂ ಅರ್ಜಿದಾರರು ಬಯಸಿದ್ದರು.

ಗೋಪ್ಯ ಮಾಹಿತಿಯ ವಿವರಗಳನ್ನು ನೀಡುವುದಿಲ್ಲ ಎಂದು ಆರ್‌ಬಿಐ ನಿಲುವು ತಳೆದಿತ್ತು. ಈ ಕಾರಣಕ್ಕೆ ನೂತನ್‌ ಅವರು ‘ಸಿಐಸಿ’ಗೆ ಮನವಿ ಮಾಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.