ADVERTISEMENT

₹ 6.9 ಲಕ್ಷ ಕೋಟಿಗೆ ತಲುಪಲಿರುವ ಎಲೆಕ್ಟ್ರಾನಿಕ್ಸ್‌ ತಯಾರಿಕಾ ಉದ್ಯಮ

ಪಿಟಿಐ
Published 25 ಡಿಸೆಂಬರ್ 2021, 14:31 IST
Last Updated 25 ಡಿಸೆಂಬರ್ 2021, 14:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸ್ವಾವಲಂಬಿ ಭಾರತ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಘೋಷಿಸಿರುವ ನೀತಿಯಿಂದಾಗಿ ದೇಶಿ ಎಲೆಕ್ಟ್ರಾನಿಕ್ಸ್ ತಯಾರಿಕಾ ಉದ್ಯಮವು ಮುಂದಿನ ಹಣಕಾಸು ವರ್ಷದಲ್ಲಿ ಶೇ 30ರಷ್ಟು ಬೆಳವಣಿಗೆ ಕಾಣಲಿದ್ದು, ಉದ್ಯಮದ ಮೌಲ್ಯವು ₹ 6.9 ಲಕ್ಷ ಕೋಟಿಗಳಿಗೆ ತಲುಪಲಿದೆ ಎಂದು ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತದಿಂದ ಎಲೆಕ್ಟ್ರಾನಿಕ್ಸ್‌ ರಫ್ತು ವಹಿವಾಟನ್ನು ಶೇ 50ರಷ್ಟು ಹೆಚ್ಚಿಸುವ ಗುರಿಯನ್ನು ಸಚಿವಾಲಯ ಹೊಂದಿದೆ. ಇದಕ್ಕಾಗಿ ‌ಧರಿಸಬಲ್ಲ ಸಾಧನಗಳಿಗೆ ಉತ್ತೇಜಿಸಲು ಮತ್ತು ಐ.ಟಿ. ಹಾರ್ಡ್‌ವೇರ್‌ ತಯಾರಕರಿಗೆ ನೀಡುತ್ತಿರುವ ಪ್ರೋತ್ಸಾಹವನ್ನು ಹೆಚ್ಚಿಸಲು₹ 22 ಸಾವಿರ ಕೋಟಿ ಮೊತ್ತದ ತಯಾರಿಕೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯನ್ನು ಅದು ಪ್ರಸ್ತಾಪಿಸಿದೆ. ಜಾಗತಿಕ ಎಲೆಕ್ಟ್ರಾನಿಕ್ಸ್‌ ಪೂರೈಕೆ ವ್ಯವಸ್ಥೆಯಲ್ಲಿ ಉನ್ನತ ಸ್ಥಾನಕ್ಕೆ ಏರಲು ಕೇಂದ್ರ ಸರ್ಕಾರವು ಸತತ ಪ್ರಯತ್ನ ನಡೆಸುತ್ತಿದೆ. ಧರಿಸಬಹುದಾದ ವಸ್ತುಗಳು ಮತ್ತು ಐಟಿ ಹಾರ್ಡ್‌ವೇರ್‌ಗಾಗಿ ಹೊಸ ನೀತಿಗಳು ಮತ್ತು ಪ್ರೋತ್ಸಾಹಕ ಯೋಜನೆಗಳನ್ನು ತರುವ ನಿರೀಕ್ಷೆಯಿದೆ.

ಚೀನಾದ ಕಂಪನಿಗಳು ಭಾರತದ ಮಾರುಕಟ್ಟೆ ಅಗತ್ಯವನ್ನು ಮಾತ್ರವೇ ಬಳಸಿಕೊಳ್ಳುತ್ತಿವೆ. ಹೀಗಾಗಿ ಪಿಎಲ್‌ಐ ಯೋಜನೆಯಲ್ಲಿ ಭಾಗವಹಿಸಿಲ್ಲ. ಭಾರತದ ಕಂಪನಿಗಳು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

ADVERTISEMENT

‘ಇಂಡಿಯಾ ಸೆಲ್ಯುಲರ್ ಆ್ಯಂಡ್ ಎಲೆಕ್ಟ್ರಾನಿಕ್ಸ್‌ ಅಸೋಸಿಯೇಷನ್’ (ಐಸಿಇಎ) ಪ್ರಕಾರ, ಆ್ಯಪಲ್‌, ಫಾಕ್ಸ್‌ಕಾನ್‌, ವಿಸ್ಟ್ರಾನ್‌, ಲಾವಾ ಮತ್ತು ವಿವೊ ಮೊಬೈಲ್‌ ಫೋನ್‌ ಒಳಗೊಂಡಂತೆ ಅದರ ಸದಸ್ಯ ಕಂಪನಿಗಳ ಒಟ್ಟಾರೆ ತಯಾರಿಕಾ ಮೌಲ್ಯವು 2020–21ರಲ್ಲಿ ₹ 2.2 ಲಕ್ಷ ಕೋಟಿಗಳಿಗೆ ತಲುಪಿದೆ. ಇದು 2022ರ ಮಾರ್ಚ್ ವೇಳೆಗೆ ₹ 2.75 ಲಕ್ಷ ಕೋಟಿಗಳಿಗೆ ಏರಿಕೆ ಆಗುವ ನಿರೀಕ್ಷೆ ಮಾಡಲಾಗಿದೆ ಎಂದು ಐಸಿಇಎ ಹೇಳಿದೆ. ಚೀನಾದ ಶಿಯೋಮಿ, ಬಿಬಿಕೆ ಎಲೆಕ್ಟ್ರಾನಿಕ್ಸ್‌ ಸಮೂಹದ ಅಂಗಸಂಸ್ಥೆಗಳಾದ ವಿವೊ, ಒಪ್ಪೊ, ರಿಯಲ್‌ಮಿ ಮತ್ತು ಐಕ್ಯುಒಒಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಒಟ್ಟಾರೆ ಶೇ 70ರಷ್ಟು ಮಾರುಕಟ್ಟೆ ಪಾಲು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.