ADVERTISEMENT

76 ಎಕರೆಯಲ್ಲಿ ಬಾಷ್‌ ಸ್ಮಾರ್ಟ್‌ ಕ್ಯಾಂಪಸ್‌ ‘ಸ್ಪಾರ್ಕ್‌ ಡಾಟ್‌ ನೆಕ್ಸ್ಟ್’

ವರ್ಚುವಲ್ ಆಗಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 16:30 IST
Last Updated 30 ಜೂನ್ 2022, 16:30 IST
ಸ್ಮಾರ್ಟ್‌ ಕ್ಯಾಂಪಸ್‌ ಉದ್ಘಾಟನೆ ಕಾರ್ಯಕ್ರಮದ ಮುಖ್ಯ ಅತಿಥಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ರಾಬರ್ಟ್‌ ಬಾಷ್‌ ಕಂಪನಿಯ ಆಡಳಿತ ಮಂಡಳಿ ಸದಸ್ಯೆ ಫಿಲಿಜ್‌ ಅಲ್ಬ್ರೆಕ್ಟ್‌ ಬರಮಾಡಿಕೊಂಡರು. ಬಾಷ್‌ ಸಮೂಹದ ಭಾರತದ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಇದ್ದರು –ಪ್ರಜಾವಾಣಿ ಚಿತ್ರ
ಸ್ಮಾರ್ಟ್‌ ಕ್ಯಾಂಪಸ್‌ ಉದ್ಘಾಟನೆ ಕಾರ್ಯಕ್ರಮದ ಮುಖ್ಯ ಅತಿಥಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ರಾಬರ್ಟ್‌ ಬಾಷ್‌ ಕಂಪನಿಯ ಆಡಳಿತ ಮಂಡಳಿ ಸದಸ್ಯೆ ಫಿಲಿಜ್‌ ಅಲ್ಬ್ರೆಕ್ಟ್‌ ಬರಮಾಡಿಕೊಂಡರು. ಬಾಷ್‌ ಸಮೂಹದ ಭಾರತದ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ತಂತ್ರಜ್ಞಾನ ಮತ್ತು ಸೇವೆಗಳನ್ನು ಪೂರೈಸುವ ಬಾಷ್‌ ಇಂಡಿಯಾ ಕಂಪನಿಯು ಬೆಂಗಳೂರಿನ ಆಡುಗೋಡಿಯಲ್ಲಿ ಅತಿದೊಡ್ಡ ಸ್ಮಾರ್ಟ್‌ ಕ್ಯಾಂಪಸ್‌ ‘ಸ್ಪಾರ್ಕ್‌ ಡಾಟ್‌ ನೆಕ್ಸ್ಟ್’ ಆರಂಭಿಸಿದೆ. ಜರ್ಮನಿಯಿಂದ ಹೊರಗೆ ನಿರ್ಮಾಣ ಆಗಿರುವ ಅತಿದೊಡ್ಡ ಕ್ಯಾಂಪಸ್‌ ಇದು.

ಆಡುಗೋಡಿಯಲ್ಲಿ ಇದ್ದ ಕಂಪನಿಯ ಕೇಂದ್ರ ಕಚೇರಿಯನ್ನೂ ಪರಿವರ್ತಿಸಿ, 76 ಎಕರೆ ಪ್ರದೇಶದಲ್ಲಿ ಈ ಕ್ಯಾಂಪಸ್‌ ನಿರ್ಮಿಸಲಾಗಿದೆ. ಇದನ್ನು ಅಭಿವೃದ್ಧಿಪಡಿಸಲು ಕಂಪನಿಯು ₹ 800 ಕೋಟಿ ಹೂಡಿಕೆ ಮಾಡಿದೆ.

ವರ್ಚುವಲ್‌ ಆಗಿ ಕ್ಯಾಂಪಸ್‌ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಭಾರತ ಮತ್ತು ಬಾಷ್‌ ಇಂಡಿಯಾ ಪಾಲಿಗೆ ಇದೊಂದು ವಿಶೇಷ ವರ್ಷ. ದೇಶವು 75ನೇಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯಲ್ಲಿ ಇದೆ, ಬಾಷ್‌ ಕಂಪನಿಯು ಭಾರತದಲ್ಲಿ 100ನೇ ವರ್ಷದಸಂಭ್ರಮದಲ್ಲಿದೆ’ ಎಂದರು.

ADVERTISEMENT

‘ಭಾರತ ಮತ್ತು ಜಗತ್ತಿಗೆ ಭವಿಷ್ಯದ ಉತ್ಪನ್ನಗಳು ಮತ್ತು ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಈ ಕ್ಯಾಂಪಸ್‌ ಮುಂದಾಳತ್ವ ವಹಿಸಲಿದೆ. ಭಾರತದಲ್ಲಿ ಇನ್ನೂ ಹೆಚ್ಚಿನದ್ದನ್ನು ಮಾಡುವಂತೆ ಮತ್ತು ಮುಂದಿನ 25 ವರ್ಷಗಳಿಗೆ ಒಂದು ಗುರಿ ಹಾಕಿಕೊಳ್ಳುವಂತೆ ನಾನು ಬಾಷ್‌ಗೆ ಮನವಿ ಮಾಡುತ್ತೇನೆ’ ಎಂದು ಮೋದಿ ಹೇಳಿದರು.

‘ಆಟೊಮೊಟಿವ್‌ ಮತ್ತು ಆಟೊಮೊಟಿವ್ ಅಲ್ಲದ ಉತ್ಪನ್ನಗಳು ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಅಭಿವೃದ್ಧಿ
ಚಟುವಟಿಕೆಗಳನ್ನು ಕೈಗೊಳ್ಳುವ ಸಾಮರ್ಥ್ಯ ಹೊಂದಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ನಾಯಕತ್ವವನ್ನು ಇದು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಭರವಸೆ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಈ ಕ್ಯಾಂಪಸ್‌ ಮೂಲಕ ಸ್ಮಾರ್ಟ್‌ ಮತ್ತು ಸುಸ್ಥಿರ ಪರಿಹಾರಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಲಾಗುವುದು ಎಂದು ಬಾಷ್‌ ಸಮೂಹದ ಭಾರತದ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ತಿಳಿಸಿದರು.

ಈ ಕ್ಯಾಂಪಸ್‌ನಲ್ಲಿ ದೀರ್ಘಾವಧಿಯಲ್ಲಿ ವಿದ್ಯುತ್ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಕಂಪನಿಯು ₹ 50 ಕೋಟಿ ಹೂಡಿಕೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.